Advertisement

ಫಲಾನುಭವಿಗಳಿಗೆ ವಿವಿಧ ಸೌಲಭ್ಯ ವಿತರಣೆ

10:38 AM Sep 02, 2019 | Team Udayavani |

ಹೊನ್ನಾಳಿ: ಸರ್ಕಾರದ ಅನೇಕ ಜನಪರ ಯೋಜನೆಗಳನ್ನು ನೇರವಾಗಿ ತಲುಪಿಸುವುದೇ ಜನಸ್ಪಂದನ ಕಾರ್ಯಕ್ರಮದ ಉದ್ದೇಶ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.

Advertisement

ನ್ಯಾಮತಿ ಪಟ್ಟಣದಲ್ಲಿ ಶನಿವಾರ ತಾಲೂಕು ಆಡಳಿತ ಮತ್ತು ನ್ಯಾಮತಿ ತಾಲೂಕು ಮಟ್ಟದ ಕಂದಾಯ ಇಲಾಖೆಯ ವಿವಿಧ ಸೌಲಭ್ಯಗಳ ವಿತರಣೆಯ ಜನಸ್ಪಂದನ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಬಗರ್‌ ಹುಕುಂ ಹಕ್ಕುಪತ್ರ ಮತ್ತು ಸಾಮಾಜಿಕ ಭದ್ರತಾ ಯೋಜನೆಯಡಿ ವಿವಿಧ ಸೌಲಭ್ಯಗಳನ್ನು ವಿತರಿಸಿ ಅವರು ಮಾತನಾಡಿದರು. ಬಸವಣ್ಣನವರ ಸಾಮಾಜಿಕ ನ್ಯಾಯದ ಪರಿಕಲ್ಪನೆಯಂತೆ ಅವಳಿ ತಾಲೂಕುಗಳ ಜನತೆಗೆ ಪ್ರಾಮಾಣಿಕವಾಗಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಕಂಕಣಬದ್ಧನಾಗಿದ್ದೇನೆ. ಸರ್ಕಾರದ ಯೋಜನೆಗಳನ್ನು ಬಡಜನತೆಗೆ ತಲುಪಿಸಲು ಸಿಬ್ಬಂದಿ ಶ್ರಮಿಸಬೇಕು. ಬಡ ಜನತೆ ತಮ್ಮ ಕೆಲಸ ಕಾರ್ಯಗಳಿಗಾಗಿ ಪದೇ ಪದೇ ಕಚೇರಿಗೆ ಅಲೆಯಬಾರದೆಂಬ ಉದ್ದೇಶ ನನ್ನದಾಗಿದ್ದು, ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಲ್ಪಿಸಿದಾಗ ಸರ್ಕಾರದ ಯೋಜನೆಗಳಿಗೆ ಮಹತ್ವ ಬರಲಿದೆ ಎಂದರು.

ಯಡಿಯೂರಪ್ಪನವರು ಹಿಂದಿನ ಅವಧಿಯಲ್ಲಿ ಮುಖ್ಯಮಂತ್ರಿಗಳಾಗಿದ್ದಾಗ ಜನಸ್ಪಂದನ ಕಾಯಕ್ರಮ ಜಾರಿಗೆ ತಂದಿದ್ದು, ಆಗ ಹೋಬಳಿ, ಗ್ರಾಮ ಮಟ್ಟದಲ್ಲಿ 53 ಜನಸ್ಪಂದನ ಕಾರ್ಯಕ್ರಮಗಳನ್ನು ನಡೆಸಿ 50 ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳನ್ನು ವಿತರಿಸಲಾಗಿತ್ತು ಎಂದರು.

ಕಾರ್ಯಕ್ರಮದಲ್ಲಿ 76 ರೈತರಿಗೆ ಬಗರ್‌ ಹುಕುಂ ಸಾಗುವಳಿ ಪತ್ರ, ಸಂಧ್ಯಾ ಸುರಕ್ಷಾ 128, ವೃದ್ಧಾಪ್ಯ ವೇತನ 62, ಅಂಗವಿಕಲ ವೇತನ 24, ವಿಧವಾ ವೇತನ 52 ಸೇರಿದಂತೆ ಬೆಳಗುತ್ತಿ, ಗೋವಿನಕೋವಿ ಹೋಬಳಿಯ ಒಟ್ಟು 383 ಪಲಾನುಭವಿಗಳಿಗೆ ಸಾಮಾಜಿಕ ಭದ್ರತಾ ಯೋಜನೆಯಡಿ ಸೌಲಭ್ಯಗಳನ್ನು ವಿತರಿಸಲಾಗಿತು.

ಗ್ರಾ.ಪಂ ಅಧ್ಯಕ್ಷೆ ರೇಣುಕಾ ಪಾಂಡುರಂಗ, ತಾ.ಪಂ ಉಪಾಧ್ಯಕ್ಷ ಎಸ್‌.ಪಿ. ರವಿಕುಮಾರ್‌, ತಾ.ಪಂ ಸದಸ್ಯ ಸಿದ್ದಲಿಂಗಪ್ಪ, ತಾ.ಪಂ ಇಒ ಪ್ರೇಮಕುಮಾರ್‌, ಗ್ರಾ.ಪಂ ಸದಸ್ಯರು, ಕಂದಾಯ ಅಧಿಕಾರಿಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next