ಗದಗ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ನಗರದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.
ನಂತರ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ ಅವರಿಗೆ ಮನವಿ ಸಲ್ಲಿಸಿ, ಆಶಾ ಕಾರ್ಯಕರ್ತೆಯರ ಗೌರವಧನವನ್ನು 12 ಸಾವಿರ ರೂ. ನಿಗದಿಪಡಿಸಬೇಕು. ಆಶಾ ಸ್ಟಾಫ್ ಅಥವಾ ಆರ್‌ಸಿಪಿಎ ಚ್ ಪೋರ್ಟಲ್ಗೆ ಆಶಾ ಪೋತ್ಸಾಹ ಧನದ ಜೋಡಣೆ ರದ್ದುಪಡಿಸಿ, ಬಾಕಿ ಉಳಿಸಿಕೊಂಡಿರುವ ಗೌರವಧನ ಹಾಗೂ ಪ್ರೋತ್ಸಾಹಧನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಕನಿಷ್ಠ ವೇತನದ ಬದಲಾಗಿ ಮಾಸಿಕ ಕೇವಲ 300 ರೂ. ನೀಡಲು ಅಭಿಯಾನ ನಿರ್ದೇಶಕರು ಆದೇಶಿಸಿರುವುದು ಅವೈಜ್ಞಾನಿಕ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಸರಕಾರದ ನೂತನ ವೇತನ ಪಾವತಿ ವಿಧಾನದಂತೆ ಖಜಾನೆ-2 ರಿಂದ ಹಲವು ತಿಂಗಳಿಂದ ಗೌರವಧನ ವಿಳಂಬವಾಗುತ್ತಿದೆ. ಈಗಲೂ ಕೆಲವೆಡೆ 4- 5 ತಿಂಗಳು ಬಾಕಿ ಇದೆ. ಕಳೆದ 3-4 ವರ್ಷದಿಂದ ಹೊಸ ರೀತಿಯ ವೇತನ ಬಿಡುಗಡೆಯಲ್ಲಿ ಆಗುತ್ತಿರುವ ಬದಲಾವಣೆಯೇ ಇದಕ್ಕೆ ಕಾರಣ ಎಂದು ಆರೋಪಿಸಿದ ಪ್ರತಿಭಟನಾನಿರತರು, ಈ ಕೂಡಲೇ ಗೌರವಧನ ಬಿಡುಗಡೆಯಲ್ಲಿ ಆಗುತ್ತಿರುವ ವಿಳಂಬವನ್ನು ಸರಿಪಡಿಸುವುದರೊಂದಿಗೆ ಕನಿಷ್ಠ ವೇತನ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರೇಮಾ ಪಾಟೀಲ, ಶೋಭಾ ನರಗುಂದ, ಲಲಿತಾ ಮಾಯಣ್ಣವರ, ಬಸವಣ್ಣೆಮ್ಮ ಓಲೆಕಾರ, ಮಂಜುಳಾ ಕಾಳಗಿ, ಅನ್ನಪೂರ್ಣ ಕಾಟ್ವಾ ಇದ್ದರು.