Advertisement

ಭ್ರೂಣಹತ್ಯೆಯಿಂದ ಲಿಂಗಾನುಪಾತದಲ್ಲಿ ವ್ಯತ್ಯಯ

02:48 PM Jul 14, 2018 | Team Udayavani |

ಬಳ್ಳಾರಿ: ತಂತ್ರಜ್ಞಾನ ದುರುಪಯೋಗಪಡಿಸಿಕೊಂಡು ತಾಯಿಯ ಗರ್ಭದಲ್ಲಿರುವಾಗಲೇ ಲಿಂಗಪತ್ತೆ
ಮಾಡಿಸಿ ಹೆಣ್ಣೆಂದಾಕ್ಷಣ ಹತ್ಯೆ ಮಾಡುವ ಪ್ರಯತ್ನ ನಡೆಯುತ್ತಿದೆ. ಇದು ಅತ್ಯಂತ ಕಳವಳಕಾರಿ ಸಂಗತಿಯಾಗಿದ್ದು, ಲಿಂಗಾನುಪಾತ ಕಡಿಮೆಯಾಗುತ್ತಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್‌ ನ್ಯಾ.ಎಸ್‌.ಬಿ. ಹಂದ್ರಾಳ್‌ ಆತಂಕ ವ್ಯಕ್ತಪಡಿಸಿದರು.

Advertisement

ನಗರದ ಜಿಪಂ ನಜೀರ್‌ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಇಲಾಖೆ ಸಹಯೋಗದಲ್ಲಿ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಲಿಂಗಪತ್ತೆ ತಂತ್ರಗಳ ವಿಧಾನ(ಲಿಂಗ ಆಯ್ಕೆ
ನಿಷೇಧ)1994 ಕಾಯ್ದೆ ಕುರಿತು ಸರಕಾರಿ ಮತ್ತು ಖಾಸಗಿ ಸ್ಕ್ಯಾನಿಂಗ್ ಸೆಂಟರ್‌ಗಳ  ದ್ಯಾಧಿಕಾರಿಗಳಿಗೆ
ನಡೆದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಯಾವುದೇ ತಪ್ಪು ಮಾಡದ ಮಗು ಹೆಣ್ಣೆಂದ ಮಾತ್ರಕ್ಕೆ ಗರ್ಭದಲ್ಲಿಯೇ ಹತ್ಯೆಯಾಗುವಂತದ್ದು ಅತ್ಯಂತ ಕಳವಳಕಾರಿಯಾಗಿದೆ. ವೈದ್ಯರು ತಮಗೆ ತಾಯಿಯ ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿನ ಲಿಂಗ ಯಾವುದೆಂದು ಗೊತ್ತಿದ್ದರೂ ಅದನ್ನು ತಂದೆ-ತಾಯಿಗೆ ತಿಳಿಸುವ ಕೆಲಸ ಮಾಡಬಾರದು. ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಲಿಂಗಪತ್ತೆ ಎಂಬುದು ಬಹುದೊಡ್ಡ ಅಪರಾಧ ಮತ್ತು ಇದಕ್ಕೆ ಬಹಳ ಗಂಭೀರ ಶಿಕ್ಷೆ ಇದೆ. ತಾವು ಯಾವುದೇ ಕಾರಣಕ್ಕೂ ಈ ದುಃಸ್ಸಾಹಸಕ್ಕೆ ಕೈ ಹಾಕಬೇಡಿ ಎಂದು ಕೋರಿದರು.

ಗಂಡು ಮಗು ಬೇಕು ಅಂತ ಹೇಳಿಕೊಂಡು ನಾಲ್ಕೈದು ಹೆಣ್ಮಕ್ಕಳು ಹಡೆಯುತ್ತಿದ್ದಾರೆ. ಇದರಿಂದ
ಮಕ್ಕಳನ್ನು ಹೆತ್ತ ತಾಯಿ ನಾನಾ ಅನಾರೋಗ್ಯಗಳಿಗೆ ತುತ್ತಾಗುವುದನ್ನು ಕಂಡಿದ್ದೇವೆ. ವೈದ್ಯರಿಗೂ  ಸಾಮಾಜಿಕ ಜವಾಬ್ದಾರಿಯಿದ್ದು, ಅದನ್ನು ಈ ಕಾರ್ಯಾಗಾರದಲ್ಲಿ ತಿಳಿಸಿಕೊಡಲಾದ ಅಂಶಗಳನ್ನು
ಅಳವಡಿಸಿಕೊಂಡು ನಿಭಾಯಿಸಿರಿ ಎಂದರು. ಭ್ರೂಣ ಲಿಂಗಪತ್ತೆ ಅಪರಾಧವೆಂಬುದರ ಕುರಿತು ಹೆಚ್ಚಿನ
ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ. ಈ ಕಾಯ್ದೆ ಅತ್ಯಂತ ಪರಿಣಾಕಾರಿಯಾಗಿ ಜಾರಿಯಾಗಬೇಕು.

ಒಂದು ವೇಳೆ ನಿರ್ಲಕ್ಷ್ಯ ವಹಿಸಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು ಎಂದರು. ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ| ವಿಜಯಲಕ್ಷ್ಮೀ ಮಾತನಾಡಿ, ಭ್ರೂಣ ಹತ್ಯೆ ಮಾಡುತ್ತಿರುವುದರ ಪರಿಣಾಮ ಮಹಿಳಾ ಲಿಂಗಾನುಪಾತ ದಿನೇದಿನೆ ಕಡಿಮೆಯಾಗ್ತಾ ಹೋಗುತ್ತಿದೆ ಎಂದರು.

Advertisement

ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ರಾಜಶೇಖರ ಅವರು, ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಲಿಂಗಪತ್ತೆ ತಂತ್ರಗಳ ವಿಧಾನ(ಲಿಂಗ ಆಯ್ಕೆ ನಿಷೇಧ)1994 ಕಾಯ್ದೆ ಹಾಗೂ ಇದರ ಇದುವರೆಗಿನ ತಿದ್ದುಪಡಿಗಳು ಸೇರಿ ಅತ್ಯಂತ ಕಠಿಣ ಕಾಯ್ದೆಯಾಗಿ ಮಾರ್ಪಟ್ಟಿದೆ. ಇದನ್ನು ಸಂಪೂರ್ಣವಾಗಿ ತಿಳಿದುಕೊಂಡು ಅನುಷ್ಠಾನ ಮಾಡುವುದರ ಮೂಲಕ ಲಿಂಗ ಅನುಪಾತ ಸುಧಾರಣೆಗೆ ಶ್ರಮಿಸಬೇಕು ಎಂದರು.

ಮುಂದಿನ ದಿನಗಳಲ್ಲಿ ಮಹಿಳಾ ಅನುಪಾತದ ರಕ್ಷಣೆಗೆ ಶ್ರಮಿಸುವ ಕೆಲಸವಾಗಬೇಕು ಎಂದರು.
ಸಿ ಮತ್ತು ಪಿಎನ್‌ಡಿಟಿ ಸಮಿತಿ ಸದಸ್ಯರು ಹಾಗೂ ವಕೀಲರಾದ ಪಾಟೀಲ್‌ ಸಿದ್ದಾರಡ್ಡಿ ಮತ್ತು ಎಸ್‌ ಎಸ್‌ಐಎಂಎಸ್‌ನ ರೇಡಿಯೋಲಜಿ ಪ್ರೋಫೆಸರ್‌ ಡಾ|ಕಿಶನ್‌ ಭಾಗವತ್‌ ಅವರು ಪಿಸಿ ಮತ್ತು ಪಿಎನ್‌
ಡಿಟಿ ಕಾಯ್ದೆ ಕುರಿತು ಮಾತನಾಡಿದರು.

ಸ್ತ್ರೀರೋಗ ತಜ್ಞೆ ಡಾ|ಮುಮ್ತಾಜ್‌ ಬೆಂಡಿಗೇರಿ, ಸಹಾಯಕ ಪ್ರಾಧ್ಯಾಪಕ ಡಾ| ದುರುಗಪ್ಪ, ಜಿಲ್ಲಾಸ್ಪತ್ರೆ
ರೇಡಿಯೋಲಜಿಸ್ಟ್‌ ಡಾ| ಚಂದ್ರಬಾಬು, ಪಿಸಿ ಮತ್ತು ಪಿಎನ್‌ಡಿಟಿ ಸಮಿತಿ ಸದಸ್ಯರು ಹಾಗೂ ವಾರ್ತಾ
ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ. ರಾಮಲಿಂಗಪ್ಪ,
ಸಮಿತಿ ಸದಸ್ಯರಾದ ಪ್ರೇಮ, ರೇಣುಕಾ, ಗೀತಾಂಜಲಿ ಸೇರಿದಂತೆ ಸರಕಾರಿ ಮತ್ತು ಖಾಸಗಿ ಸ್ಕ್ಯಾನಿಂಗ್ ಸೆಂಟರ್‌ಗಳ ವೈದ್ಯಾಧಿಕಾರಿಗಳು ಇದ್ದರು. ಈಶ್ವರ್‌ ದಾಸಪ್ಪನವರ್‌ ನಿರೂಪಿಸಿದರು. ಡಾ| ಲಕ್ಷ್ಮೀಕಾಂತ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next