Advertisement

ಭಾವೈಕ್ಯತೆ ಹರಿಕಾರ ವರವಿ ಮೌನೇಶ್ವರ ಜಾತ್ರೆ ನಾಳೆ

01:02 PM Aug 21, 2022 | Team Udayavani |

ಶಿರಹಟ್ಟಿ: ಪವಿತ್ರ ಶ್ರಾವಣ ಮಾಸದ ಕೊನೆ ಸೋಮವಾರ ಆ.22 ರಂದು ತಾಲೂಕಿನ ಸುಕ್ಷೇತ್ರ ವರವಿಯಲ್ಲಿ ಮೌನೇಶ್ವರ ದೇವಸ್ಥಾನದಲ್ಲಿ ಬೆ.9 ರಿಂದ 11 ರವರೆಗೆ ಮಹಾಯಜ್ಞ, 11 ಗಂಟೆಗೆ ಮೌನೇಶ್ವರ ಲೀಲಾ ಪ್ರವಚನ, ಸಂಜೆ 5 ಗಂಟೆಗೆ ಬೆಳ್ಳಿ ಪಲ್ಲಕ್ಕಿ ಉತ್ಸವ ದೊಂದಿಗೆ ಮಹಾರಥೋತ್ಸವ ಜರುಗಲಿದೆ. ಆ.23 ರಂದು ಮಂಗಳವಾರ ಕಡುಬಿನ ಕಾಳಗ ನಡೆಯಲಿದೆ.

Advertisement

ಕ್ಷೇತ್ರದ ಮಹತ್ವ: ಚರಿತ್ರೆಯಲ್ಲಿ ತಿಳಿಸಿರುವಂತೆ ಹಿಂದೊಮ್ಮೆ ಮೌನೇಶ್ವರ ಸ್ವಾಮಿಗಳೊಂದಿಗೆ ಇಡೀ ಶಿಷ್ಯ ಸಮೂಹ “ಓಂ ಏಕಲಾಕ ಐಂಸೀ ಹಜಾರ ಮುಸಾ ಪೈಗಂಬರ, ಪಾಂಚೋ ಪೀಠ ಜಗದ್ಗುರು ಮೌನೇಶ್ವರಕಾ ಸೀಪತಿ ಗಂಗಾಧರ ಹರಹರ ಮಹಾದೇವ’ ಎಂಬ ಜಯಘೋಷಗಳೊಂದಿಗೆ ಹೊರಟಿದ್ದರು. ಒಂದು ದಿನ ಆ ಹಳ್ಳಿಯ ಹೊರವಲಯದಲ್ಲಿದ್ದ ಗೂಟ ಗಲ್ಲಿಗೆ ಬಲಗಾಲು ತಾಕಿ ಮೌನೇಶರರು ಅಲ್ಲಿಯೇ ಸ್ವಲ್ಪ ಕಾಲ ವಿಶ್ರಮಿಸಲು ಮುಂದಾದರು. ಸರ್ವಾಂತರ್ಯಾಮಿಯಾದ ನೀನೇ ಹೀಗೆ ಕಲ್ಲೆಡವಬೇಕೇ? ಇದರ ಹಿನ್ನೆಲೆ ಏನು ಎಂದು ಶಿಷ್ಯ ಗಣ ವಿಚಾರಿಸಿದಾಗ, ಮುಂದೊಂದು ದಿನ ಈ ಗ್ರಾಮ ಸರ್ವಶ್ರೇಷ್ಠ ಕ್ಷೇತ್ರವೆಂಬ ಕೀರ್ತಿ ಪಡೆಯಲಿದೆ. ನಾನೀಗ ಎಡವಿದ ಕಲ್ಲು ಸ್ವಯಂ ಉದ್ಭವವಾದ ಶಿವಲಿಂಗ. ನನ್ನ ಸರ್ವ ಶಕ್ತಿಯನ್ನೆಲ್ಲ ಈ ಶಿವಲಿಂಗದಲ್ಲಿ ಸಮಾವೇಶಗೊಳಿಸಿದ್ದೇನೆ. ಈ ಗ್ರಾಮದ ಪ್ರತಿಯೊಂದು ಕಲ್ಲು ಪರಮಪವಿತ್ರ ಶಿವಲಿಂಗವಾಗುವುದು. ಹರಿಯುವ ನೀರು ಪುಣ್ಯಪ್ರದ ತೀರ್ಥಕ್ಕೆ ಸಮಾನ ಎಂದು ಮೌನೇಶ್ವರರು ಹೇಳಿದ ಗ್ರಾಮವೇ ವರವಿ ಎಂಬ ಪ್ರತೀತಿ ಇದೆ.

ಎಡವಿದ ಕಲ್ಲೇ ಇಂದು ಪವಿತ್ರ ಕ್ಷೇತ್ರ ವರವಿ ಮೌನೇಶ್ವರ ಕ್ಷೇತ್ರವಾಗಿ ಜಗತ್ತಿನಲ್ಲಿ ಪ್ರಸಿದ್ಧಿ ಪಡೆದಿದೆ. ವರವಿ ಭಕ್ತರಲ್ಲದೇ ಸುತ್ತಮುತ್ತಲಿನ ಆಸ್ತಿಕರೆಲ್ಲ ಆ ಶಿವಲಿಂಗವನ್ನು ಕಟ್ಟಡವಿಲ್ಲದೇ ಬರೀ ಬಯಲಲ್ಲೇ ಪೂಜಿಸಲಾರಂಭಿಸಿದರು. ಶಿವಲಿಂಗದ ಪವಾಡ ನೂರಾರು, ಸಾವಿರಾರು ಜನರ ವಾಡಿಕೆಯಲ್ಲಿ ಬೆಳೆಯತೊಡಗಿತು. ಆಗ ಆ ಶಿವಲಿಂಗಕ್ಕೊಂದು ಮಂದಿರವಾಗಬೇಕೆಂದು ಮನದಲ್ಲಿ ಯೋಚಿಸಿಕೊಂಡರು. ವಿಜಯಪುರದ ಬಾದಶಹಾನ ಸ್ವಪ್ನದಲ್ಲಿ ಮೌನೇಶ್ವರ ಪ್ರಕಟನಾಗಿ ಶಿವನ ವಿಗ್ರಹ ಬಯಲಲ್ಲಿ ನಿಂತಿದೆ. ಅದಕ್ಕೊಂದು ದಿವ್ಯ, ಭವ್ಯ ಕಟ್ಟಡ ನಿರ್ಮಿಸಬೇಕೆಂದು ಆಜ್ಞಾಪಿಸುತ್ತಾನೆ. ಆಗ ಬಾದಶಹಾನ ವರವಿಗೆ ಬಂದು ಭವ್ಯವಾದ ಆಕರ್ಷಕ ಮಂದಿರ ನಿರ್ಮಿಸುತ್ತಾರೆ. ಅದೇ ಇಂದಿನ ವರವಿಯಲ್ಲಿರುವ ಮೌನೇಶ್ವರ ಮಠ.

ಮೌನೇಶ್ವರರು ವಿಜಯಪುರದಲ್ಲಿ ಆಳ್ವಿಕೆ ಮಾಡುತ್ತಿದ್ದ ಆದಿಲ್‌ಶಾಹಿ ಆಸ್ಥಾನಕ್ಕೆ ಬಂದು ಪವಾಡಗಳನ್ನು ಮೆರೆಯುವ ಮೂಲಕ ರಾಜಾಧಿರಾಜ ಆಸ್ಥಾನಿಕರಿಂದ ಫಕೀರನಾಗಿ ಪೂಜೆಗೊಳ್ಳುತ್ತಾರೆ. ಇಂದಿಗೂ ಅವರ ಉಭಯ ಜನಾಂಗಕ್ಕೆ ಫಕ್ಕೀರನಾಗಿ,ಪರಮಾತ್ಮನಾಗಿ ಪೂಜೆಗೊಳ್ಳುತ್ತಾರೆ. ಅಂದಿನ ನೆನಪಿನ ಅಂಗವಾಗಿ ಶ್ರಾವಣ ಮಾಸದ ಕೊನೆಯ ಸೋಮವಾರ ಮಹಾರಥೋತ್ಸವ, ಮಂಗಳವಾರ ವಿಜೃಂಭಣೆಯಿಂದ ಕಡುಬಿನ ಕಾಳಗದೊಂದಿಗೆ ಜಾತ್ರೆ ನಡೆಯುತ್ತದೆ.

Advertisement

-ಪ್ರಕಾಶ ಶಿ.ಮೇಟಿ

Advertisement

Udayavani is now on Telegram. Click here to join our channel and stay updated with the latest news.

Next