Advertisement

ವಾರಾನ್ನ ಉಂಡು ಮೂರು ಯುದ್ಧ ಮಾಡಿದ ವೀರ

05:07 PM Jun 12, 2017 | Team Udayavani |

ಕಲಬುರಗಿ: ನನಗದು ಸಂಭ್ರಮ..ಶತ್ರು ದೇಶಗಳ ವೈರಿಗಳ ಎದೆಗೆ ಗುಂಡಿಕ್ಕಬೇಕು..ಬಂದೂಕು ಹಿಡಿದು ನಡೆಯಬೇಕು. ಎದೆ ಅಗಲಿಸಿ ಶತ್ರುವಿನ ಧೈರ್ಯ ಕೆಣಕಬೇಕು ಎನ್ನುವ ಉಮೇದಿಯಿಂದ ನಾನು ಸೈನ್ಯ ಸೇರಿದೆ. ಇಂತಹದೊಂದು ಕನಸು ನನಗೆ ಚಿಕ್ಕಂದಿನಿಂದಲೇ ಇತ್ತು.

Advertisement

ಅದು ಪೂರ್ಣಗೊಂಡ ಖುಷಿಯೂ ಇದೆ ಎಂದು ಚೀನಾ, ಪಾಕಿಸ್ತಾನ ಮತ್ತು ಬಾಂಗ್ಲಾ ಯುದ್ಧಗಳಲ್ಲಿ ಪಾಲ್ಗೊಂಡು ನಿವೃತ್ತರಾದ ಶಾಂತಯ್ಯ ಸಂಧಿಮಠ ಗೊಬ್ಬೂರ ಹೇಳಿದರು. ಅವರ ದನಿ ಕಿವಿಗೆ ಬೀಳುತ್ತಿದ್ದರೆ ದೇಹಕ್ಕಾದ ವಯಸ್ಸನ್ನು ದನಿಯೊಳಗಿನ ಗಡುಸು ಮರೆ ಮಾಸುವಂತೆ ಮಾಡಿತ್ತು.

ಸೇನೆ ಸೇರಿ ಸೇವೆ ಮಾಡಿದ ಅವರ ಸಂಘರ್ಷಮಯ ಜೀವನಕ್ಕಿಂತ ಸೇನೆ ಸೇರಬೇಕು ಎನ್ನುವ ಹಂಬಲದಿಂದ ಮನೆ ಬಿಟ್ಟು ಪಟ್ಟ ಪಾಡಿದೆಯಲ್ಲ ಅದು ಇನ್ನೂ ರೋಚಕವಾಗಿತ್ತು. ಇಂತಹದೊಂದು ರೋಚಕತೆಗೆ ಕಾರಣವಾದದ್ದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌.

ಜಿಲ್ಲಾ ಕಸಾಪ ರವಿವಾರ ಹಮ್ಮಿಕೊಂಡಿದ್ದ ಮನದಾಳದ ಮಾತು ಕಾರ್ಯಕ್ರಮದ ಮಾಲಿಕೆಯಲ್ಲಿ ಈ ವಾರ ಅಫಜಲಪುರ ತಾಲೂಕಿನ ಗೊಬ್ಬೂರು ಗ್ರಾಮದ  ಸಮರ ವೀರ ಮೂರು ಯುದ್ಧಗಳಿಗೆ ಹೆಗಲು ಕೊಟ್ಟ ವೀರಯೋಧ ಶಾಂತಯ್ಯ ಸಂಧಿಮಠ ತಮ್ಮ ಅನುಭವ ಹಂಚಿಕೊಂಡರು. 

ಎಲ್ಲವನ್ನು ಸಂಧಿಮಠ ಅವರ ಮಾತಿನಲ್ಲೇ ಕೇಳ್ಳೋದಾದ್ರೆ, ಅಂದು ನಾನು ವಾರಾನ್ನ ಮಾಡಿ ಓದುತ್ತಿದ್ದೆ. ಆದರೂ ಒಳಗೆ ಸೈನಿಕನಾಗಬೇಕು ಎನ್ನುವ ಉಮೇದು ಎದ್ದು ಕುಳಿತಿತ್ತು. ಮನೆಯಲ್ಲಿ ಇದು ಇಷ್ಟವಿಲ್ಲದ್ದಾಗಿತ್ತು. ಆದರೂ ಬಯಕೆ ಬಿಡದೆ ಸೈನಿಕನಾದರೆ ವೈರಿಗಳ ಸದೆ ಬಡೆಯಬೇಕು.

Advertisement

ಅದಕ್ಕಾಗಿ ಶಕ್ತಿ ಬೇಕು ಅಂತಾ ವ್ಯಾಯಾಮ ಶಾಲೆಯಲ್ಲಿ ಕಸರತ್ತು ಮಾಡುತ್ತಿದ್ದೆ. ಆಗೆಲ್ಲ ಪ್ರತಿ ರೈಲಿನ ಇಂಜಿನ್‌ ಹಿಂದೆ ಮಿಲಿಟರಿ ಡಬ್ಬಿಗಳಿರುತ್ತಿದ್ದವು. ಅದರಲ್ಲಿನ ಸೈನಿಕರನ್ನು ನೋಡಿ ನಾನು ತುಂಬಾ ಹೆಮ್ಮೆ ಪಡುತ್ತಿದ್ದೆ. ನಾನು ಒಂದಿನ ಸೈನಿಕನಾಗಿ ದೇಶ ಸೇವೆ ಮಾಡುತ್ತೇನೆ ಅಂದುಕೊಂಡು ದಿನ ದೂಡುತ್ತಿದ್ದೆ.

ಅಂತಹದೊಂದು ಸುದಿನ ನನ್ನ ಜೀವನದಲ್ಲಿ ಬಂತು. 1961ರಲ್ಲಿ ಸ್ವಲ್ಪ ಹಣದೊಂದಿಗೆ ನಾನು ರೈಲು ಹತ್ತಿ ಸಿಕಂದ್ರಾಬಾದ ಮಿಲಿಟರಿ ಕೇಂದ್ರಕ್ಕೆ ಹೋಗಿ ತಲುಪಿದೆ. ಆ ದಿನಗಳು ನಿಜಕ್ಕೂ ಕಷ್ಟದ ದಿನಗಳು. ಹಣವಿಲ್ಲದೆ ಇದ್ದಾಗ ಹುಣಸೆ ಹಣ್ಣು ತಿಂದು ಹಸಿವನ್ನು ಇಂಗಿಸಿಕೊಂಡೆ, ಡ್ರಿಲ್‌ ಮಾಸ್ಟರ್‌ ಕೆಲಸ ಗಿಟ್ಟಿಸಿಕೊಂಡೆ.

ಮುಂದೆ ಹಲವು ತಿಂಗಳುಗಳ ಬಳಿಕ ಕೇಂದ್ರದಲ್ಲಿ ಸಂದರ್ಶನ ನೀಡಿ ಸೈನಿಕನಾದೆ ಎಂದು ಹೇಳುವಾಗ ಅವರಲ್ಲಿನ ಭಾವ, ಕುಳಿತು ಕೇಳುಗರ ಎದೆ ಉಬ್ಬಿಸುವಂತೆ ಮಾಡಿದವು. 20 ವರ್ಷ ಸೇವೆ: ಹಾಗೆ ನಾನು ಸೇನೆ ಸೇರಿಕೊಂಡ ಬಳಿಕ ಜವಾನನಿಂದ ಸುಬೇದಾರವರೆಗೂ ನಡೆದು ಬಂದೆ.

20 ವರ್ಷಗಳು ಕಳೆದವು. ಈ 20 ವರ್ಷಗಳಲ್ಲಿ ಮೂರು ಯುದ್ಧ ಮಾಡಿದೆ. ವೈರಿ ಸೈನಿಕರ ಎದೆಗೆ ಗುಂಡು ಹಾರಿಸಿದಾಗ ಖುಷಿ ಇರುತ್ತಿತ್ತು. ನಮ್ಮಲ್ಲೂ ಯೋಧರು ವೀರ ಮರಣವನ್ನಪ್ಪಿದಾಗ ತುಸು ಮಂಕಾಗುತ್ತಿದ್ದೆ.. ಪುನಃ ದೇಶ ಮತ್ತು ಅದರ ರಕ್ಷಣೆಯ ಮಾತುಗಳು ಕೇಳುತ್ತಿದ್ದಂತೆ ಗೊತ್ತಿಲ್ಲದಂತೆ ಒಳಗಿನ ಸೈನಿಕ ಎದ್ದು ನಿಂತು ಬಿಡುತ್ತಿದ್ದ. 

ದೇಶಕ್ಕಾಗಿ ಸೇವೆ ಮಾಡುವುದರಲ್ಲಿರೋ ಸುಖ ನನಗೆ ಇನ್ಯಾವುದರಲ್ಲೂ ಸಿಕ್ಕಿಲ್ಲ. ಅದೊಂದು ಹೇಳಿಕೊಳ್ಳಲಾಗದ ತೃಪ್ತಿ. ದೇಶದ ಗಡಿಯಲ್ಲಿ ವೈರಿಗಳೊಂದಿಗೆ ಹೋರಾಟ ಮಾಡುವಾಗ ಇಲ್ಲಿನ ನನ್ನವರು, ನನ್ನ ಜನ ಸುಖವಾಗಿದ್ದಾರೆನ್ನುವ ಭಾವ ನಮ್ಮನ್ನು ಇನ್ನಷ್ಟು ಗಟ್ಟಿ ಮಾಡಿ ಗಡಿ ಕಾಯಲು ನಿಲ್ಲಿಸುತ್ತಿತ್ತು ಎನ್ನುವಾಗ ಮಾಗಿದ ಕಣ್ಣುಗಳಲ್ಲಿ ಮಿಂಚಿತ್ತು. 

ಇವತ್ತಿನ ಯುವಕರ ಬಗ್ಗೆ ತುಸು ಹೀಗಳಿಕೆ ಇದ್ದರೂ, ನಾವಿದ್ದ ಪರಿಸ್ಥಿತಿ.. ಈಗಿನ ಯುವಕರು ಎದುರಿಸುವ ಪರಿಸ್ಥಿತಿ ಭಿನ್ನ ಎಂದು ಒಪ್ಪಿಕೊಳ್ಳುವ ಸಂಧಿಮಠ, ಯುವಕರು ದೇಶಕ್ಕಾಗಿ ಕೆಲವು ಕಾಲವಾದರೂ ಸೈನ್ಯದಲ್ಲಿ ಕೆಲಸ ಮಾಡಬೇಕು. ಜೀವನಕ್ಕೆ ಒಂದು ಶಿಸ್ತು ಬರುತ್ತದೆ, ನಿರ್ಧಾರಗಳಿಗೆ ಒಂದು ಅಚಲ ವಿಶ್ವಾಸ ಸಿಗುತ್ತದೆ ಮತ್ತು ಮಾಡುವ ಕೆಲಸದಲ್ಲಿ ಜವಾಬ್ದಾರಿ ಬಂದೇ ಬರುತ್ತದೆ ಎಂದರು.

ಕಸಾಪ ಜಿಲ್ಲಾಧ್ಯಕ್ಷ ಅಧ್ಯಕ್ಷ ವೀರಭದ್ರ ಸಿಂಪಿ ಅಧ್ಯಕ್ಷತೆ ವಹಿಸಿದ್ದರು. ಮಡಿವಾಳಪ್ಪ ನಾಗರಹಳ್ಳಿ ನಿರೂಪಿಸಿದರು. ಪ್ರೊ| ವಿಜಯಕುಮಾರ ಪರೂತೆ ಸ್ವಾಗತಿಸಿದರು. ಶಾಂತಯ್ಯ ಕುಟುಂಬದ ಸದಸ್ಯರು, ಆಪ್ತರು, ಸ್ನೇಹಿತರು, ಅಭಿಮಾನಿಗಳು ಭಾಗವಹಿಸಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next