ಹೆಬ್ರಿ: ವರಂಗ ಗ್ರಾ.ಪಂ. ವ್ಯಾಪ್ತಿಯ 2017-18ನೇ ಸಾಲಿನ ಗ್ರಾಮಸಭೆ ಗ್ರಾ.ಪಂ. ಅಧ್ಯಕ್ಷ ಸುರೇಂದ್ರ ಶೆಟ್ಟಿ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಮುನಿಯಾಲು ಪರಿಸರದಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿದೆ. ಕಳೆದ ಒಂದು ವರ್ಷದಲ್ಲಿ ವಿದ್ಯುತ್ ಕಡಿತದ ಒಟ್ಟು ಅವಧಿಯನ್ನು ಅಂಕಿ-ಅಂಶಗಳ ಮೂಲಕ ಗ್ರಾಮಸಭೆಯ ಮುಂದಿಟ್ಟು ಅಧಿಕಾರಿಗಳ ಗಮನ ಸೆಳೆದರು. ಆಸುಪಾಸಿನ ಗ್ರಾಮಗಳಲ್ಲಿ ವಿದ್ಯುತ್ ವ್ಯವಸ್ಥೆ ಸರಿಯಾಗಿದ್ದು, ಈ ಭಾಗಕ್ಕೆ ಮೆಸ್ಕಾಂ ತಾರತಮ್ಯ ಧೋರಣೆ ಅನುಸರಿಸುತ್ತಿದೆ ಎಂದು ಉದ್ಯಮಿ ದಿನೇಶ್ ಪೈ ಹೇಳಿದರು.
ವಾರದ ಒಳಗೆ ದಾಖಲೆ: ವರಂಗ ಗ್ರಾ.ಪಂ. ವ್ಯಾಪ್ತಿಯಲ್ಲಿ ಈಗಾಗಲೇ ಶ್ಮಶಾನ ಸ್ಥಳ ಕಾಯ್ದಿರಿಸ ಲಾಗಿದ್ದರೂ, ಜಾಗದ ದಾಖಲೆ ಸರಿಯಿಲ್ಲದೆ ಪಂಚಾಯತ್‌ಗೆ ಭೂ ದಾಖಲೆಗಳು ಹಸ್ತಾಂತರವಾಗಿಲ್ಲ. ಕೂಡಲೇ ಗ್ರಾಮಕ್ಕೆ ಸೂಕ್ಮ ಶ್ಮಶಾನದ ವ್ಯವಸ್ಥೆಯಾಗಬೇಕು ಎಂದು ಗ್ರಾಮಸ್ಥರಾದ ಸಮೃದ್ಧಿ ಪ್ರಕಾಶ್ ಶೆಟ್ಟಿ ಅವರ ಆಗ್ರಹಕ್ಕೆ ಉತ್ತರಿಸಿದ ಗ್ರಾಮಕರಣಿಕರು ವಾರದೊಳಗೆ ತಹಶೀಲ್ದಾರ್ ಅವರ ಗಮನಕ್ಕೆ ತಂದು ದಾಖಲೆಗಳನ್ನು ಸರಿಪಡಿಸಲಾಗುವುದು ಎಂದರು.
ಸಮಸ್ಯೆಗಳನ್ನು ಸರಿಪಡಿಸಿ: ಗ್ರಾಮಸಭೆಗಳು ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ ಸಮಸ್ಯೆ ಪರಿಹರಿಸುವ ಒಂದು ವ್ಯವಸ್ಥೆ. ಈ ಬಗ್ಗೆ ಇಲಾಖೆಯ ಅಧಿಕಾರಿಗಳು ಪ್ರತಿಯೊಂದು ಸಮಸ್ಯೆಗಳನ್ನು ಆಲಿಸಿ ಸಂಬಂಧ ಪಟ್ಟವರ ಮೂಲಕ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಬೇಕು ಎಂದು ಜಿ.ಪಂ. ಸದಸ್ಯೆ ಜ್ಯೋತಿ ಹರೀಶ್ ಹೇಳಿದರು.
ನೋಡೆಲ್ ಅಧಿಕಾರಿಯಾಗಿ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಶ್ರೀಧರ ನಾಯಕ್ ಭಾಗವಹಿಸಿದ್ದರು. ವಿವಿಧ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ತಾ.ಪಂ. ಸದಸ್ಯರಾದ ಸುಲತಾ ನಾಯ್ಕ, ರಮೇಶ್ ಪೂಜಾರಿ, ಉಪಾಧ್ಯಕ್ಷ ದಿನೇಶ್ ಅಂಡಾರು, ಎಪಿಎಂಸಿ ಅಧ್ಯಕ್ಷ ಮುಟ್ಲುಪಾಡಿ ಸತೀಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ದಿವಾಕರ ನಾಯ್ಕ ಕಾರ್ಯಕ್ರಮ ನಿರೂಪಿಸಿ, ಪಿಡಿಒ ಸದಾಶಿವ ಸೇರ್ವೇಗಾರ್ ವಂದಿಸಿದರು.