Advertisement

ವರಮಹಾಲಕ್ಷ್ಮೀ ವರಪುತ್ರ ಕೊನಗೂ ಪತ್ತೆ

11:43 AM Aug 09, 2017 | |

ಬೆಂಗಳೂರು: ದುಡ್ಡಿನ ಕಂತೆಗಳ ರಾಶಿಯ ಮೇಲೆ ವರಮಹಾಲಕ್ಷ್ಮಿಯ ಮೂರ್ತಿ ಇಟ್ಟು ಪೂಜೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದ ವ್ಯಕ್ತಿ ಯಾರೆಂಬುದು ಇದೀಗ ಪತ್ತೆಯಾಗಿದೆ. ಆದರೆ, ಹಣವೆಲ್ಲ ಸಕ್ರಮ. ಕಾನೂನಾತ್ಮಕವಾಗಿಯೇ ದುಡಿದಿದ್ದು ಎಂದು ಆ ವ್ಯಕ್ತಿ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ. 

Advertisement

ನಗರ ಎಚ್‌ಎಸ್‌ಆರ್‌ ಬಡಾವಣೆ ನಿವಾಸಿ, ಬಿಡಿಎ ಬ್ರೋಕರ್‌ ಎಂದು ಹೇಳಲಾಗುತ್ತಿರುವ ಸೂರಿ ಅಲಿಯಾಸ್‌ ಸೂರ್ಯನಾರಾಯಣ ಅವರು ಈ ವೈರಲ್‌ನ ಕೇಂದ್ರಬಿಂದು ಆಗಿದ್ದಾರೆ. ವರಮಹಾಲಕ್ಷ್ಮೀ ಹಬ್ಬದ ಅಂಗವಾಗಿ ಸೂರಿ ಅವರು ತಮ್ಮ ಮನೆಯಲ್ಲಿ ಸುಮಾರು 73 ಲಕ್ಷ ಮೊತ್ತದ ನೋಟಿನ ಕಂತೆಗಳು ಮತ್ತು 1.25 ಕೆಜಿ ಚಿನ್ನದ ಆಭರಣಗಳೊಂದಿಗೆ ಅದ್ದೂರಿ ಪೂಜೆ ನೆರವೇರಿಸಿದ್ದರು. ಅದರ ಫೋಟೊಗಳು ಶುಕ್ರವಾರದಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಎಲ್ಲರ ಹುಬ್ಬೇರಿಸುವಂತೆ ಮಾಡಿತ್ತು. 

ನಕಲಿ ಅಲ್ಲ; ಅಸಲಿ
ಸೋಮವಾರದವರೆಗೂ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ಗಳಲ್ಲಿ ಈ ಸಂಬಂಧದ ಫೋಟೋ ಹರಿದಾಡುತ್ತಿದ್ದರೂ, ಜನ ಇದು ನಕಲಿ ಎಂದುಕೊಂಡಿದ್ದರು. ಆದರೆ, ಮಂಗಳವಾರ ಅಸಲಿ ಎಂಬುದು ಗೊತ್ತಾದಾಗ, ಜನ ಬಾಯಿ ಮೇಲೆ ಬೆರಳಿಟ್ಟರು. ಅಂದಹಾಗೆ, ಈ ಫೋಟೋ ನಕಲಿ ಅಲ್ಲ; ಅಸಲಿ ಎಂದು ಸ್ಪಷ್ಟಪಡಿಸಿದವರೂ ಸ್ವತಃ ಸೂರಿ!

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, “ನಮ್ಮ ಮನೆಯಲ್ಲಿ ಈಚೆಗೆ ನಡೆದ ವರಮಹಾಲಕ್ಷ್ಮೀ ಪೂಜೆಯಲ್ಲಿ ಪ್ರದರ್ಶಿಸಿದ ಹಣ, ಚಿನ್ನಾಭರಣಗಳು ಅಸಲಿ. ಅದೆಲ್ಲವೂ ನಾನು ಕಷ್ಟಪಟ್ಟು ಸಂಪಾದಿಸಿದ್ದಾಗಿದೆ. ಪೂಜೆಗೆ ಹಾಜರಾಗಿದ್ದ ಸ್ನೇಹಿತರೊಬ್ಬರು ಈ ಫೋಟೋವನ್ನು ವಾಟ್ಸ್‌ಆ್ಯಪ್‌ ಮಾಡಿದ್ದಾರೆ. ಅದೀಗ ವೈರಲ್‌ ಆಗಿದೆ. ಇದರಲ್ಲೇನು ವಿಶೇಷವಿಲ್ಲ. ಪ್ರತಿ ವರ್ಷದಂತೆ ಈ ವರ್ಷವೂ ಪೂಜಾ ಕಾರ್ಯ ನೆರವೇರಿಸಿದ್ದೇನೆ’ ಎಂದರು. 
 
ಅಂದು ಕಡುಬಡವ; ಇಂದು ಆಗರ್ಭ ಶ್ರೀಮಂತ
ಅಷ್ಟಕ್ಕೂ ಈ ಹಣ, ಆಭರಣಗಳಿಗೆ ಸಂಬಂಧಿಸಿದ ದಾಖಲೆಗಳಿದ್ದು, ಯಾವುದೇ ಸಮಯದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪ್ರಶ್ನಿಸಿದರೆ ದಾಖಲೆಗಳನ್ನು ಒದಗಿಸುತ್ತೇನೆ ಎಂದೂ ಹೇಳಿದರು. 

15 ವರ್ಷಗಳ ಹಿಂದೆ ನಮ್ಮ ಕುಟುಂಬ ಕಡುಬಡತನದಲ್ಲಿತ್ತು. ನಮ್ಮ ತಂದೆ ಕೃಷ್ಣಪ್ಪ ಆಟೋ ಚಾಲಕರಾಗಿದ್ದರು. ಕಷ್ಟಪಟ್ಟು ದುಡಿದ ಕಾರಣ ಇಂದು ಶ್ರೀಮಂತರಾಗಿದ್ದೇವೆ. ಅಂದಾಜು 15 ಕೋಟಿಗೂ ಹೆಚ್ಚು ಸಂಪತ್ತು ನನ್ನ ಬಳಿ ಇದೆ. ಕಷ್ಟಪಟ್ಟು ದುಡಿದರೆ, ಪ್ರತಿಯೊಬ್ಬರೂ ಶ್ರೀಮಂತರಾಗಬಹುದು ಎಂದು ಸೂರ್ಯನಾರಾಯಣ ತಿಳಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next