Advertisement

ಎಲ್ಲೆಡೆ ವರಮಹಾ ಲಕ್ಷ್ಮೀ ಹಬ್ಬ ಆಚರಣೆ

09:45 AM Aug 01, 2020 | Suhan S |

ಮೈಸೂರು: ಕೋವಿಡ್ ನಡುವೆಯೂ ಶ್ರಾವಣ ಮಾಸದ ಮೊದಲ ಹಬ್ಬವಾದ ವರಮಹಾಲಕ್ಷ್ಮಿ ಹಬ್ಬ ಮೈಸೂರಿನಲ್ಲಿ ಸರಳವಾಗಿ ಆಚರಿಸಲಾಯಿತು.

Advertisement

ಶ್ರಾವಣ ಮಾಸದ ಎರಡನೇ ಶುಕ್ರವಾರ ಆಚರಿಸಲ್ಪಡುವ ವರಮಹಾಲಕ್ಷ್ಮೀ ಹಬ್ಬವನ್ನು ಮೈಸೂರಿನಲ್ಲಿ ವಿಶೇಷವಾಗಿ ಆಚರಿಸಲಾಗುತ್ತಿತ್ತು. ಸಡಗರ, ಸಂಭ್ರಮ ಮನೆ ಮಾಡಿರುತ್ತಿತ್ತು. ಆದರೆ, ಈ ಬಾರಿ ವೈರಸ್‌ ಎಲ್ಲೆಡೆ ಆವರಿಸಿರುವುದರಿಂದ ಸಂಭ್ರಮ ಕೊಂಚ ಕಡಿಮೆಯಾಯಿತು. ಸಡಗರ ಅಷ್ಟಾಗಿ ಇಲ್ಲದಿದ್ದರೂ ಆಚರಣೆಗೆ ಯಾವುದೇ ಅಡ್ಡಿಯಾಗಲಿಲ್ಲ. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರು ತಮ್ಮ ಶಕ್ತ್ಯಾನುಸಾರ ಆಚರಣೆ ಮಾಡಿ ಲಕ್ಷ್ಮೀಯನ್ನು ಮನೆಗೆ ಬರಮಾಡಿಕೊಂಡರು.

ಶಾಂತಿ, ನೆಮ್ಮದಿಗಾಗಿ ಪ್ರಾರ್ಥನೆ: ವರಮಹಾಲಕ್ಷ್ಮೀ ಹಬ್ಬದಂದು ಹೆಂಗಳೆಯರು ಮನೆಯನ್ನು ಸ್ವತ್ಛಗೊಳಿಸಿ, ದೇವರ ಮನೆ ಅಥವಾ ಮನೆಯ ಆವರಣದಲ್ಲಿ ಅಷ್ಟಲಕ್ಷ್ಮಿಯರನ್ನು ಪೂಜಿಸಿ ಸುಖ, ಶಾಂತಿ, ನೆಮ್ಮದಿ, ಧನ ಸಂಪತ್ತಿಗಾಗಿ ಪ್ರಾರ್ಥಿಸಿದರು. ಮನೆಯಲ್ಲಿ ಕಳಸ ಪ್ರತಿಷ್ಠಾಪನೆ ಮಾಡಿ, ಅದಕ್ಕೆ ಲಕ್ಷ್ಮಿಯ ಮುಖವಾಡ ತೊಡಿಸಿ, ಸೀರೆ, ಬಳೆ ತೊಡಿಸಿ, ಹೂವುಗಳಿಂದ ಅಲಂಕಾರ ಮಾಡಿ, ವಿವಿಧ ತಿನಿಸುಗಳು, ಹಣ್ಣಗಳನ್ನು ನೈವೇದ್ಯಕ್ಕಿಟ್ಟು, ಮನೆಯಲ್ಲಿರುವ ಹಣ, ಚಿನ್ನದೊಡವೆಗಳನ್ನು ದೇವರ ಮುಂದಿಟ್ಟು ನಮ್ಮ ಮನೆಯಲ್ಲಿ ಸದಾ ನೆಲೆಸಿರುವಂತೆ ಪ್ರಾರ್ಥಿಸಿದರು. ಬಳಿಕ ತಮ್ಮ ಅಕ್ಕಪಕ್ಕದ ಮನೆಯ ಮುತ್ತೈದೆಯರನ್ನು ಮನೆಗೆ ಕರೆದು ಅವರಿಗೆ ಅರಿಶಿನ, ಕುಂಕುಮ, ಫ‌ಲತಾಂಬೂಲ ನೀಡಿದರು.

ವಿಶೇಷ ಅಲಂಕಾರ: ವರಮಹಾಲಕ್ಷ್ಮೀ ಹಬ್ಬವನ್ನು ನಗರದ ವಿವಿಧ ದೇವಸ್ಥಾನಗಳಲ್ಲಿ ವಿಶೇಷವಾಗಿ ಆಚರಿಸಲಾಯಿತು. ಮಹಿಳೆಯರು ಮನೆಯಲ್ಲಿ ವ್ರತ ಆಚರಣೆ ಮಾಡಿ ಬಳಿಕ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಭಕ್ತರೊಬ್ಬರು ದಿವಾನ್ಸ್‌ ರಸ್ತೆಯಲ್ಲಿ ಅಮೃತೇಶ್ವರ ದೇವಸ್ಥಾನದಲ್ಲಿ ನೋಟುಗಳಿಂದ ವಿಶೇಷ ಅಲಂಕಾರ ಮಾಡಿದ್ದರು. 2000, 1000, 500, 100 ರೂ ಸೇರಿದಂತೆ ಎಲ್ಲಾ ಮುಖಬೆಲೆಯನೋಟುಗಳು ಹಾಗೂ ನಾಣ್ಯಗಳಿಂದ ದೇವಸ್ಥಾನದ ಗರ್ಭಗುಡಿಯನ್ನು ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ಅಲ್ಲದೆ, ದಟ್ಟಗಳ್ಳಿಯ ನೇತಾಜಿ ಸರ್ಕಲ್‌ನಲ್ಲಿರುವ ಮಹಾಲಕ್ಷ್ಮಿ, ಪಡುವಾರಹಳ್ಳಿಯ ಲಕ್ಷ್ಮೀ ದೇವಿ ದೇಗುಲಗಳಲ್ಲಿ ವಿಶೇಷ ಪೂಜೆ ನೆರವೇರಿತು.

Advertisement

Udayavani is now on Telegram. Click here to join our channel and stay updated with the latest news.

Next