Advertisement

ಉಡುಪಿಗೆ ವಾರಾಹಿ ನೀರು: ಗ್ರಾಮ ಪಂಚಾಯತ್‌ಗಳ ಶರ್ತ

08:15 AM Mar 08, 2018 | Team Udayavani |

ಕುಂದಾಪುರ: ಹಾಲಾಡಿ ಗ್ರಾಮದ ಭರತ್ಕಲ್‌ನಿಂದ ಉಡುಪಿ ನಗರಕ್ಕೆ ವಾರಾಹಿ ಕುಡಿಯುವ ನೀರು ಒದಗಿಸುವ ಯೋಜನೆಗೆ ಮಾ. 27ರಂದು ಟೆಂಡರ್‌ ಕರೆಯಲು ಸಿದ್ಧತೆ ನಡೆದಿದೆ. ಆದರೆ ಪೈಪ್‌ಲೈನ್‌ ಹಾದುಹೋಗುವ ವ್ಯಾಪ್ತಿಯ 10 ಪಂಚಾಯತ್‌ಗಳು ಮಾ. 6ರಂದು ವಿಶೇಷ ಸಾಮಾನ್ಯ ಸಭೆ ಕರೆದು ತಮಗೂ ಶುದ್ಧ ಕುಡಿಯುವ ನೀರು ಒದಗಿಸಬೇಕು, ಈಗಿನ ಟೆಂಡರ್‌ ರದ್ದುಪಡಿಸಬೇಕು, ಹೊಸದಾಗಿ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ತಯಾರು ಮಾಡಬೇಕು. ಇಲ್ಲದಿದ್ದರೆ ಕೋರ್ಟ್‌ ಮೊರೆ ಹೊಗಲಾಗುವುದು ಎಂದು ನಿರ್ಣಯ ತೆಗೆದುಕೊಂಡು ಸರಕಾರಕ್ಕೆ ಕಳುಹಿಸಿವೆ.

Advertisement

ಜನಸಂಖ್ಯೆ
1981ರಲ್ಲಿ ಉಡುಪಿಯಲ್ಲಿ 83,196 ಇದ್ದ ಜನಸಂಖ್ಯೆ 1991ರಲ್ಲಿ 1,04,095, 2001ರಲ್ಲಿ 1,13,112, 2011ರಲ್ಲಿ 1,25,350, 2016ರಲ್ಲಿ 1,32,376 ಆಗಿದ್ದು, 2046ರಲ್ಲಿ 1,74,530ಕ್ಕೆ ಏರಲಿದೆ ಎನ್ನುವುದು ಲೆಕ್ಕಾಚಾರ. ಈಗ ದಿನಕ್ಕೆ 1.82 ಕೋ. ಲೀ. ನೀರು ಬೇಕಾಗುತ್ತಿದ್ದು, 2046ರಲ್ಲಿ 2.62 ಕೋ. ಲೀ. ನೀರು ಬೇಕಾಗುತ್ತದೆ. 

ಏನು ಬೇಡಿಕೆ?
ಭರತ್ಕಲ್‌ ಮೂಲಕ ಬಜೆಗೆ ನೀರು ಸಾಗಿಸುವಾಗ ಹಾಲಾಡಿ, ಶಂಕರನಾರಾಯಣ, ಕಾಡೂರು, ವಂಡಾರು, ಬಿಲ್ಲಾಡಿ, ಆವರ್ಸೆ, ಹೆಗ್ಗುಂಜೆ, ಚೇರ್ಕಾಡಿ, ಪಜೆಮೊಗ್ರು, ಕುಕ್ಕೆಹಳ್ಳಿ ಗ್ರಾಮಗಳನ್ನು ಹಾದುಹೋಗಬೇಕಿದೆ. ಇಲ್ಲಿ ಕೂಡ ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ನೀರೆತ್ತುವ ಭರತ್ಕಲ್‌ನಲ್ಲಿಯೇ ನೀರನ್ನು ಶುದ್ಧೀಕರಿಸಿ ಮಾರ್ಗ ಮಧ್ಯದ ಅಷ್ಟೂ ಪಂಚಾಯತ್‌ಗಳ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಿ ಎನ್ನುವುದು ಬೇಡಿಕೆ.

ಅಸಾಧ್ಯ ಎಂದ ಸರಕಾರ
ವಿಧಾನಪರಿಷತ್‌ ಸದಸ್ಯ ಕೆ. ಪ್ರತಾಪಚಂದ್ರ ಶೆಟ್ಟಿ ಸದನದಲ್ಲಿ ಕೇಳಿದ ಪ್ರಶ್ನೆಗೆ ಫೆ. 22ರಂದು ಲಿಖೀತವಾಗಿ ಉತ್ತರಿಸಿದ ನಗರಾಭಿವೃದ್ಧಿ ಸಚಿವ ರೋಶನ್‌ ಬೇಗ್‌, ವಾರಾಹಿಯಿಂದ ವರ್ಷದ 4 ತಿಂಗಳು ಮಾತ್ರ ನೀರು ಒದಗಿಸುವ ಕಾರಣ ಹಾದಿ ಮಧ್ಯದ ಪಂಚಾಯತ್‌ಗಳಿಗೆ ಶುದ್ಧೀಕರಿಸಿದ ನೀರು ಕೊಡಲಾಗದು. ಬಜೆಯಲ್ಲಿ ಈಗಾಗಲೇ ಶುದ್ಧೀಕರಣ ಘಟಕ ಇದ್ದು, ಭರತ್ಕಲ್‌ನಲ್ಲಿ ಹೊಸದಾಗಿ ಶುದ್ಧೀಕರಣ ಘಟಕ ನಿರ್ಮಿಸಿದರೆ 500 ಎಕರೆ ಭೂ ಪ್ರದೇಶ ಮುಳುಗಡೆಯಾಗಲಿದೆ. ಜತೆಗೆ ನಗರಸಭೆಗೆ ವಾರ್ಷಿಕ 1.2 ಕೋ.ರೂ. ವಿದ್ಯುತ್‌ ಬಿಲ್‌ ಹೆಚ್ಚುವರಿಯಾಗ‌ಲಿದೆ. ಮಾರ್ಗ
ಮಧ್ಯದ ಪಂಚಾಯತ್‌ಗಳಿಗೆ ಕಚ್ಚಾ ನೀರು ಒದಗಿಸುವಂತೆ ಪೈಪ್‌ಲೈನ್‌ ವಿನ್ಯಾಸಗೊಳಿಸಲಾಗಿದೆ ಎಂದಿದ್ದಾರೆ. 

ಸಾಧ್ಯ
ಕುಂದಾಪುರ ಪುರಸಭೆ ವ್ಯಾಪ್ತಿಗೆ ಜಪ್ತಿ ಎಂಬಲ್ಲಿಂದ ನೀರು ಸರಬರಾಜು ಮಾಡಲಾಗುತ್ತಿದ್ದು, ದಾರಿ ಮಧ್ಯದ ಎಲ್ಲ ಪಂಚಾಯತ್‌ಗಳಿಗೆ ಶುದ್ಧ ನೀರು ನೀಡಲಾಗುತ್ತಿದೆ. ಇದು ಶಾಸನಬದ್ಧ ನಿಯಮ ಕೂಡ ಹೌದು. ಆದರೆ ಭರತ್ಕಲ್‌ನಿಂದ ಸಾಗಾಟ ಮಾಡುವಾಗ ಈ ನಿಯಮ ಉಲ್ಲಂಘಿಸಲಾಗಿದೆ ಎಂದು ಪ್ರತಾಪಚಂದ್ರ ಶೆಟ್ಟಿ ಸಚಿವರ ಗಮನ ಸೆಳೆದಿದ್ದಾರೆ.

Advertisement

ವಿರೋಧ
ಪೈಪ್‌ಲೈನ್‌ ಹಾದುಹೋಗುವ ವ್ಯಾಪ್ತಿಯ 10 ಗ್ರಾ. ಪಂ.ಗಳು ಈ ಬಗ್ಗೆ ವಿಶೇಷ ಸಾಮಾನ್ಯ ಸಭೆ ಕರೆದು ನಿರ್ಣಯ ಮಾಡುತ್ತಿವೆ. ಹಾಲಾಡಿಯಲ್ಲಿ ವಿಶೇಷ ಸಾಮಾನ್ಯ ಸಭೆ ನಡೆದಿದ್ದು, ಜನತೆಯ ಅಭಿಪ್ರಾಯ ದಾಖಲಿಸಲು ಮಾ. 9ರಂದು ಗ್ರಾಮಸಭೆ ಕರೆಯಲಾಗಿದೆ. 

ಸಮಸ್ಯೆಗಳು 
ಈಗಿನ ಡಿಪಿಆರ್‌ನಂತೆ ರಸ್ತೆ ಬದಿ ಅಥವಾ ರಸ್ತೆಯನ್ನೇ ಬಗೆದು 1.5 ಮೀ. ಅಗಲ, 2 ಮೀ. ಆಳದಲ್ಲಿ ಪೈಪ್‌ಲೈನ್‌ ಅಳವಡಿಸಲಾಗುತ್ತದೆ. ಗ್ರಾ. ಪಂ. ವ್ಯಾಪ್ತಿಯ ರಸ್ತೆಗಳು ತೀರಾ ಕಿರಿದಾಗಿದ್ದು, ಕಾಮಗಾರಿಯಿಂದಾಗಿ ಹಾನಿಗೀಡಾಗಲಿವೆ. ಭವಿಷ್ಯದಲ್ಲಿ ರಸ್ತೆ ಅಗಲಗೊಳಿಸಲಾಗದು. ಪೈಪ್‌ಲೈನ್‌ ಹಾದುಹೋಗುವ ಎಲ್ಲೆಡೆ ಖಾಸಗಿ ಜಾಗ ಇದ್ದು, ಡಿಪಿಆರ್‌ನಲ್ಲಿ ಭೂಸ್ವಾಧೀನಕ್ಕೆ ಅನುದಾನ ಇರಿಸಿಲ್ಲ. ಕುಡಿಯುವ ನೀರಿನ ವಿಚಾರದಲ್ಲಿ ನಗರ -ಗ್ರಾಮಾಂತರ ತಾರತಮ್ಯ ಸಲ್ಲದು. ಆದ್ದರಿಂದ ನೀರನ್ನು ಮೇಲೆತ್ತುವಲ್ಲಿಯೇ ಶುದ್ಧೀಕರಿಸಿ ಪಂಚಾಯತ್‌ ವ್ಯಾಪ್ತಿಯ ಜನರಿಗೆ ನೀಡಬೇಕು. ಇಲ್ಲದಿದ್ದರೆ ಸೂಕ್ತ ಕಾನೂನು ಹೋರಾಟ ನಡೆಸ ಲಾಗುವುದು ಎಂದು ನಿರ್ಣಯಿಸಲಾಗಿದೆ.

ಏನಿದು ಯೋಜನೆ?
ಉಡುಪಿ ನಗರಕ್ಕೆ ನೀರುಣಿಸುವ ಸ್ವರ್ಣಾನದಿಯ ನೀರು ವರ್ಷದ 8 ತಿಂಗಳು ಮಾತ್ರ ಸಾಲುತ್ತಿದ್ದು, ಉಳಿದ 4 ತಿಂಗಳಿಗೆ ವಾರಾಹಿ ನದಿಯಿಂದ ನೀರು ಒದಗಿಸುವುದು ಯೋಜನೆ. ಇದಕ್ಕಾಗಿ ಅಮೃತ್‌ (ಅಟಲ್‌ ಮಿಶನ್‌ ರೆಜುವನೇಶನ್‌ ಆ್ಯಂಡ್‌ ಅರ್ಬನ್‌ ಟ್ರಾನ್ಸ್‌ಫಾರ್ಮೇಶನ್‌) ಯೋಜನೆಯಲ್ಲಿ 122.5 ಕೋ.ರೂ. ವೆಚ್ಚದಲ್ಲಿ ಡಿಪಿಆರ್‌ ಮಾಡಲಾಗಿದೆ. ಹಾಲಾಡಿಯ ಭರತ್ಕಲ್‌ನಿಂದ 864 ಎಂಎಂ ಗಾತ್ರದ ಪೈಪಿನಲ್ಲಿ 38.5 ಕಿ.ಮೀ. ದೂರದ ಬಜೆ ಅಣೆಕಟ್ಟಿಗೆ ನೀರು ತಂದು ಅಲ್ಲಿ ಶುದ್ಧೀಕರಿಸಿ ಉಡುಪಿಗೆ ಒದಗಿಸುವುದು ಯೋಜನೆ. 

ತಕರಾರಿಲ್ಲ
ಉಡುಪಿಗೆ ಕುಡಿಯುವ ನೀರು ಕೊಡಲು ಯಾವುದೇ ತಕರಾರು ಇಲ್ಲ. ಆದರೆ ಪೈಪ್‌ಲೈನ್‌ ಹಾದು ಹೋಗುವ ವ್ಯಾಪ್ತಿಯ ಪಂಚಾಯತ್‌ಗಳಿಗೂ ಶುದ್ಧ ಕುಡಿಯುವ ನೀರು ಒದಗಿಸಬೇಕೆಂದು ಬೇಡಿಕೆ.
– ಸರ್ವೋತ್ತಮ ಹೆಗ್ಡೆ, ಅಧ್ಯಕ್ಷರು, ಹಾಲಾಡಿ ಗ್ರಾ.ಪಂ.

ಬೇರೆ ದಾರಿ ಇದೆ
ಭರತ್ಕಲ್‌ ಬದಲಾಗಿ ಕಾಲುವೆ ಮೂಲಕ ವಾರಾಹಿ ನೀರು ಹರಿಯುತ್ತಿದ್ದು, ಶಿರಿಯಾರ ಮದಗ ಬಳಿ ಪಡೆದುಕೊಳ್ಳಬಹುದು. ವಾರಾಹಿ ಏತ ನೀರಾವರಿ ಯೋಜನೆಯಲ್ಲಿ ಹಿಲಿಯಾಣ, ಆವರ್ಸೆ, ಮಂದಾರ್ತಿ ಮಾರ್ಗವಾಗಿ ಕಾಡೂರು, ಬಾರಕೂರು, ಹನೆಹಳ್ಳಿಯ ವರೆಗೆ ನೀರು ಹರಿಯುತ್ತದೆ. ಅಲ್ಲಿಂದ ಪಡೆದರೆ ಉಡುಪಿಗೆ ನೇರ 15 ಕಿ.ಮೀ. ಮಾತ್ರ. ಆಗ ಖರ್ಚು ಅರ್ಧದಷ್ಟು ಕಡಿಮೆಯಾಗುತ್ತದೆ.
– ಅಶೋಕ್‌ ಶೆಟ್ಟಿ, ಚೋರಾಡಿ 

ಮಾ.27ಕ್ಕೆ ಟೆಂಡರ್‌
ಯೋಜನಾ ವರದಿ ತಿದ್ದಲು ಮನವಿ
 10 ಪಂ.ಗಳಿಗೆ ಶುದ್ಧ ನೀರಿಗೆ ಬೇಡಿಕೆ
122.5 ಕೋ.ರೂ. ಕಾಮಗಾರಿ, 
 38 ಕಿ.ಮೀ. ಪೈಪ್‌ಲೈನ್‌

ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next