Advertisement

4 ವರ್ಷಗಳ ಹಿಂದೆ ಕಟ್ಟಿದ ಕಲ್ಲು ಕುಸಿತಗೊಂಡು ಸಂಪರ್ಕ ಕಡಿತ

12:22 AM Feb 29, 2020 | Sriram |

ಬಸ್ರೂರು: ಕಂಡ್ಲೂರಿನ ಹಳೆ ಕೋಟೆಯ ತುದಿಯಲ್ಲಿ ವಾರಾಹಿ ನದಿಯ ಉಪನದಿ ಕುಬ್ಜಾ ನದಿ ಸಿಗುತ್ತದೆ. ಅಲ್ಲಿಂದ ಅಗಲ ಕಿರಿದಾದ ನದಿಗೆ ಹಾಕಲಾದ ಕಟ್ಟನ್ನು ದಾಟಿದರೆ ಗುಲ್ವಾಡಿ ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಸೌಕೂರು ಸಮೀಪ ಕುಚ್ಚಟ್ಟು ಎಂಬ ಪ್ರದೇಶ ಸಿಗುತ್ತದೆ. ಸುಮಾರು ಎಪ್ಪತ್ತು ವರ್ಷಗಳ ಹಿಂದೆ ಈ ಎರಡು ಪ್ರದೇಶಗಳ ನಡುವೆ ಜನಸಂಚಾರದ ದೃಷ್ಟಿಯಿಂದ ಒಂದು ಅಗಲ ಕಿರಿದಾದ ಕಟ್ಟನ್ನು ಕಟ್ಟಲಾಗಿತ್ತು. ಆಗ ಗುಲ್ವಾಡಿ ಗ್ರಾಮದ ಸೌಕೂರು, ಕುಚ್ಚಟ್ಟಿನಿಂದ ಈ ಕಟ್ಟಿನ ಮೇಲೆ ನಡೆದು ಈಚೆಯ ಕಂಡ್ಲೂರು ಪ್ರದೇಶಕ್ಕೆ ಸುಲಭವಾಗಿ ಬರುವಂತಹ ವ್ಯವಸ್ಥೆ ಇತ್ತು. ಅನಂತರದ ಹತ್ತು ವರ್ಷಗಳ ಅನಂತರ ಈ ಕುಬ್ಜಾ ನದಿಗೆ ಹಾಕಲಾದ ಕಲ್ಲಿನ ಕಟ್ಟನ್ನು ತುಸು ಅಗಲಗೊಳಿಸಲಾಯಿತು. ಇದರಿಂದ ಕಂಡ್ಲೂರು ಪೇಟೆಗೆ ಅಥವಾ ಬಸ್‌ ಮೂಲಕ ಕುಂದಾಪುರಕ್ಕೆ ತೆರಳುವವರಿಗೆ ಮತ್ತಷ್ಟು ಅನುಕೂಲವಾಯಿತು.

Advertisement

ಆದರೆ ಕಾಲಕ್ರಮೇಣ ಇಲ್ಲಿ ಹಾಕಲಾದ ಕಟ್ಟಿನ ಮೇಲೆ ನೀರು ಹರಿಯಲಾರಂಭಿಸಿತು. ಆದರೂ ಜನ ಕಟ್ಟಿನ ಮೇಲೆಯೇ ನಡೆದು ಕಂಡ್ಲೂರಿಗೆ ಬರುತ್ತಿದ್ದರು. ಒಟ್ಟಿನಲ್ಲಿ ಇದೊಂದು ಪ್ರಮುಖ ಸಂಪರ್ಕ ಸೇತುವಾಗಿತ್ತು. ಆದರೆ ಕಳೆದ ನಾಲ್ಕು ವರ್ಷಗಳಿಂದ ಈ ಕಟ್ಟಿನ ಕಂಡ್ಲೂರು ಕಡೆಯಲ್ಲಿ ಶಿಲೆಕಲ್ಲಿನಿಂದ ಕಟ್ಟಿದ್ದ ಕಲ್ಲುಗಳು ಕುಸಿದು ನದಿ ನೀರಿಗೆ ಬಿದ್ದವು. ಆದರೂ ನೀರಿನ ಮಧ್ಯೆ ಸುಮಾರು ಐವತ್ತು-ಅರವತ್ತು ಮೀ. ಉದ್ದದ ಕಟ್ಟಿನ ಮೇಲೆ ಜನ ನಡೆದು ಸಾಗುತ್ತಿದ್ದರು. ಅನಂತರದ ಕೆಲವೇ ಸಮಯದಲ್ಲಿ ನದಿ ಅಡ್ಡಕ್ಕೆ ಕಟ್ಟಲಾದ ಕುಚ್ಚಟ್ಟಿನ ಕಟ್ಟು ನೀರಿನೊಳಗೆ ಕುಸಿದೇ ಹೋಯಿತು.

ಇದು ಆಗಿ ಈಗಾಗಲೇ ನಾಲ್ಕು
ವರ್ಷಗಳೇ ಕಳೆದಿವೆ. ಒಟ್ಟಿನಲ್ಲಿ ಸೌಕೂರಿನ ಕುಚ್ಚಟ್ಟು-ಕಂಡ್ಲೂರು ನಡುವೆ ಸಂಪರ್ಕ ಕಡಿದುಹೋಯಿತು. ಕುಚ್ಚಟ್ಟಿನಿಂದ ಕಂಡ್ಲೂರಿನ ಪೇಟೆಗೆ ಬರಬೇಕಾದರೆ ರಿಕ್ಷಾಕ್ಕೆ 150 ರೂ. ಹಣ ತೆತ್ತು ಸುತ್ತು ಹಾಕಿ ಬರಬೇಕಾಗಿದೆ. ಇದಲ್ಲದಿದ್ದರೆ ಸೌಕೂರು ಮೂಲಕ ಮಾವಿನಕಟ್ಟೆಗೆ ಹೋಗಿ ಬಸ್‌ ಮೂಲಕ ಕುಂದಾಪುರ ಅಥವಾ ನೇರಳಕಟ್ಟೆಗೆ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ಇವರದ್ದಾಗಿದೆ.

ಕಂಡ್ಲೂರಿಗೆ ತೆರಳುವಂತಿಲ್ಲ
ನಾನು ಕುಚ್ಚಟ್ಟಿನ ಕಟ್ಟು ಇರುವ ಸಂದರ್ಭದಲ್ಲಿ ಪ್ರತಿದಿನ ನನ್ನ ಮಗನನ್ನು ಕಂಡ್ಲೂರು ಶಾಲೆಗೆ ಕಳಿಸುತ್ತಿದ್ದೆ. ಆದರೆ ಈಗ ಇಲ್ಲಿಂದ ಹೋಗಲು ಸಾಧ್ಯವಿಲ್ಲ. ಕುಬ್ಜಾ ನದಿಗೆ ಪುನಃ ಹೊಸ ಕಟ್ಟನ್ನು ಹಾಕಿದರೆ ಮಾತ್ರ ಕಂಡ್ಲೂರಿಗೆ ಶಾಲಾ ಕಾಲೇಜಿಗೆ ಮಕ್ಕಳನ್ನು ಕಳಿಸಲು ಸಾಧ್ಯ.
-ನಾಗರಾಜ, ಕುಚ್ಚಟ್ಟು ನಿವಾಸಿ.

ಪ್ರಸ್ತಾವನೆ ಕಳುಹಿಸಲಾಗಿದೆ
ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಕುಚ್ಚಟ್ಟಿನ “ಕಟ್ಟಿ’ನ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರ ಅನುದಾನ ಮಂಜೂರಾಗುವ ನಿರೀಕ್ಷೆಯಿದೆ. ಅನುದಾನ ಮಂಜೂರಾದ ತತ್‌‌ಕ್ಷಣ ಕುಚ್ಚಟ್ಟಿನ ಕಾಮಗಾರಿ ಆರಂಭಿಸಲಾಗುವುದು.
-ಬಿ.ಎಂ. ಸುಕುಮಾರ ಶೆಟ್ಟಿ,, ಶಾಸಕರು,ಬೈಂದೂರು ಕ್ಷೇತ್ರ

Advertisement
Advertisement

Udayavani is now on Telegram. Click here to join our channel and stay updated with the latest news.

Next