Advertisement

ಬೇರೆಡೆ ವಾರಾಹಿ ನೀರು ಪೂರೈಕೆಗೆ ಅಪಸ್ವರ

06:05 PM Feb 11, 2022 | Team Udayavani |

ಕುಂದಾಪುರ: ಕಳೆದ 42 ವರ್ಷಗಳಿಂದ ಉಡುಪಿ ಜಿಲ್ಲೆಯ ಜನತೆಗೆ, ಕೃಷಿಗೆ ನೀರುಣಿಸುವ ವಾರಾಹಿ ನೀರಾವರಿ ಯೋಜನೆಯೇ ಇನ್ನೂ ಪೂರ್ಣಗೊಂಡಿಲ್ಲ. ಅದಕ್ಕೂ ಮುನ್ನ ಉಡುಪಿ, ಹೆಬ್ರಿ, ಕಾರ್ಕಳ ತಾಲೂಕಿಗೂ ನೀರು ಹರಿಸಲು ಮುಂದಾಗಿದೆ. ಇದಕ್ಕಾಗಿ 1,215 ಕೋ.ರೂ. ಬಿಡುಗಡೆಯಾಗಿದೆ. ಯೋಜನೆ ಪೂರ್ಣವಾಗುವ ಮೊದಲು ಎಲ್ಲೆಡೆ ನೀರು ಕೊಂಡೊಯ್ಯುವುದಕ್ಕೆ ರೈತರ ಅಪಸ್ವರ ಕೇಳಿ ಬಂದಿದೆ.

Advertisement

ಕಾರ್ಕಳ, ಹೆಬ್ರಿಗೆ
ವಾರಾಹಿ ನೀರನ್ನು ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ ಜನರಿಗೆ ನೀಡುವ ಸಲುವಾಗಿ 1,215 ಕೋ.ರೂ. ಮಂಜೂರಾಗಿದೆ. 60 ಸಾವಿರ ಮನೆಗಳಿಗೆ 359 ಓವರ್‌ಹೆಡ್‌ ಟ್ಯಾಂಕ್‌ಗಳನ್ನು ನಿರ್ಮಿಸಿ 1,115 ಜನವಸತಿ ಪ್ರದೇಶಕ್ಕೆ ಸರಬರಾಜು ಮಾಡುವ ಗುರಿ ಇದೆ.

ಕುಂದಾಪುರಕ್ಕೆ
ಜಪ್ತಿಯಿಂದ ಕುಂದಾಪುರ ಪುರಸಭೆ ವ್ಯಾಪ್ತಿ, 7 ಗ್ರಾ.ಪಂ.ಗಳ ಜನರಿಗೆ ಶುದ್ಧ ಕುಡಿಯುವ ನೀರು ದೊರೆಯುತ್ತಿದೆ.
ಸೌಕೂರು: 1,350 ಹೆ.ಗೆ ನೀರು ವಾರಾಹಿ ನದಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಗುಡ್ಡೆಕೊಪ್ಪದಲ್ಲಿ ಹುಟ್ಟಿ ಪಶ್ಚಿಮಾಭಿಮುಖವಾಗಿ 88 ಕಿ.ಮೀ. ಹರಿದು ಕುಂದಾಪುರ ತಾಲೂಕಿನ ಗಂಗೊಳ್ಳಿ ಸಮೀಪ ಅರಬಿ ಸಮುದ್ರ ಸೇರುತ್ತದೆ. ಈ ನದಿ ಪಾತ್ರದಲ್ಲಿ ಲಭ್ಯವಿರುವ ನೀರನ್ನು ಸಮರ್ಪಕವಾಗಿ ಬಳಸುವ ಉದ್ದೇಶದಿಂದ ತಾಲೂಕಿನ ಬಳ್ಕೂರು ಎಂಬಲ್ಲಿ ನದಿಗೆ ಅಡ್ಡಲಾಗಿ ಉಪ್ಪು ನೀರು ತಡೆ ಅಣೆಕಟ್ಟು ರಚಿಸಲಾಗಿದೆ.  ಸೌಕೂರು ಗ್ರಾಮದ ಹತ್ತಿರ ಜಾಕ್ವೆಲ್‌ ನಿರ್ಮಿಸಿ 0.589 ಟಿಎಂಸಿ ನೀರನ್ನು ಏರು ಕೊಳವೆ ಮುಖಾಂತರ ಹರಿಸಿ 1,350 ಹೆ. ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಸೌಕೂರು ಏತ ನೀರಾವರಿ ಯೋಜನೆ ಚಾಲನೆಯಲ್ಲಿದೆ. 81 ಕೋ.ರೂ.ಗಳ ಈ ಯೋಜನೆಯಲ್ಲಿ 8 ಗ್ರಾಮಗಳ ಕೃಷಿಗೆ ನೀರು ದೊರೆಯುತ್ತದೆ. ಪ್ರಸ್ತುತ ಕಾಮಗಾರಿಯಡಿ ಡೆಲಿವರಿ ಚೇಂಬರ್‌, ಜಾಕ್ವೆಲ್‌ ಕಂ ಪಂಪ್‌ಹೌಸ್‌ ನಿರ್ಮಾಣ ಅಂತಿಮ ಘಟ್ಟ ತಲುಪಿದ್ದು ಚೆಕ್‌ ಡ್ಯಾಂ, ರೈಸಿಂಗ್‌ ಮೇನ್‌, ಗ್ಯಾನಿಟಿ ಮೇನ್‌, ಸಬ್‌ಸ್ಟೇಶನ್‌ ಕಾಮಗಾರಿ ಪ್ರಗತಿಯಲ್ಲಿದೆ. ಪ್ರಸ್ತುತ ಯೋಜನೆಯಡಿ ಕಾಮಗಾರಿಗೆ 22.26 ಕೋ.ರೂ. ವ್ಯಯವಾಗಿದೆ.

ಉಡುಪಿಗೆ
ಉಡುಪಿ ನಗರಕ್ಕೆ ಕೊಳವೆ ಮೂಲಕ ವಾರಾಹಿ ನೀರು ಒದಗಿಸುವ 282 ಕೋ.ರೂ. ಅಮೃತ ಯೋಜನೆಯೂ ನಡೆಯುತ್ತಿದೆ. ಪೈಪ್‌ಲೈನ್‌ ಹಾದು ಹೋಗುವ ಗ್ರಾ.ಪಂ.ಗಳಿಗೆ ಶುದ್ಧನೀರು ಕೊಡುವ ಶರತ್ತಿನ ಮೇಲೆ ವಿಧಾನಸಭೆ ಅರ್ಜಿ ಸಮಿತಿ ಮೂಲಕ ರೈತಸಂಘದ ತಕರಾರು ಅರ್ಜಿ ಇತ್ಯರ್ಥಗೊಂಡು ಕಾಮಗಾರಿ ನಡೆಯುತ್ತಿದೆ.
ಕಾರ್ಕಳದ ಅಜೆಕಾರು ಗ್ರಾಮದ ಬಳಿ ವೆಂಟೆಡ್‌ ಡ್ಯಾಂ ನಿರ್ಮಿಸಿ ಬ್ಯಾರೇಜ್‌ ಹತ್ತಿರ ಏತ ನೀರಾವರಿ ರೂಪಿಸಿ ಏರುಕೊಳವೆಗಳ ಮೂಲಕ ನೀರಾವರಿ ಸೌಲಭ್ಯ ಒದಗಿಸುವ ಎಣ್ಣೆಹೊಳೆ ಏತ ನೀರಾವರಿ ಯೋಜನೆ ಸಾಕಾರಗೊಳ್ಳಲಿದೆ. 1 ಕ್ಯೂಸೆಕ್ಸ್‌ ನೀರನ್ನು ಏರುಕೊಳವೆಗಳ ಮೂಲಕ ಹರಿಸಿ 1,500 ಹೆಕ್ಟೇರ್‌ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತದೆ. 108 ಕೋಟಿ ರೂ. ಯೋಜನೆಗೆ ಆಡಳಿತಾತ್ಮಕ ಅನುಮೋದನೆ ದೊರಕಿದ್ದು ಟರ್ನ್ಕೀ ಆಧಾರದ ಮೇಲೆ 113.65 ಕೋಟಿ ರೂ.ಗೆ ಕಾಮಗಾರಿ ವಹಿಸಿಕೊಡಲಾಗಿದೆ.

ವಾರಾಹಿ ಮೇಲೆ ಕಣ್ಣು
ಜಿಲ್ಲೆಯಲ್ಲಿ ಹಲವಾರು ತುಂಬಿ ಹರಿಯುವ ನದಿಗಳಿರುವಾಗ ಎಲ್ಲರ ಕಣ್ಣು ವಾರಾಹಿ ನದಿ ಮೇಲೆ ಏಕೆ ಎಂದು ರೈತ ಸಂಘ ಪ್ರಶ್ನಿಸಿದೆ. ಸ್ವರ್ಣ, ಸೀತಾ, ಮಡಿಸಾಲು ಮುಂತಾದ ತುಂಬಿ ಹರಿಯುವ ನದಿಗಳು ಇರುವಾಗ ಜಿಲ್ಲೆಯ ಕುಡಿಯುವ ನೀರಿನ ಹೆಸರಿನಲ್ಲಿ ವಾರಾಹಿ ನದಿ ನೀರನ್ನು ಬೇರೆಡೆಗೆ ಕೊಂಡೊಯ್ಯುವ ಯೋಜನೆಗಳ ಹಿಂದೆ ವಾರಾಹಿ ನೀರಾವರಿ ಮೂಲ ಯೋಜನೆಯನ್ನು ಹಳ್ಳ ಹಿಡಿಸುವ ಷಡ್ಯಂತ್ರವಿದೆ ಎಂಬ ಆರೋಪವಿದೆ.

Advertisement

1979ರಲ್ಲಿ ಆರಂಭ
1979ರಲ್ಲಿ ಆರಂಭವಾಗಿ ಕುಂಟುತ್ತಾ ಸಾಗಿ ಎಡದಂಡೆಯಷ್ಟೇ ದೊರೆತಿದೆ. ಬಲದಂಡೆ ಪ್ರಗತಿಯ
ಲ್ಲಿದೆ. ಜಿಲ್ಲೆಯ 38,800 ಎಕರೆ ಭೂ ಪ್ರದೇಶಕ್ಕೆ ನೀರುಣಿಸಲು ಕುಂದಾಪುರ ಹಾಗೂ ಉಡುಪಿ ತಾಲೂಕನ್ನು ಕೇಂದ್ರೀಕರಿಸಿ ಆರಂಭಿಸಲಾಗಿತ್ತು. 9.43 ಕೋ.ರೂ.ಗಳಲ್ಲಿ ಆರಂಭವಾದ ಯೋಜನೆ 650 ಕೋ. ರೂ.ಗೆ ತಲುಪಿದೆ.

ರೈತ ವಿರೋಧಿ ಕ್ರಮ
ಎಡ ದಂಡೆ, ಬಲ ದಂಡೆ, ಏತ ನೀರಾವರಿ ವ್ಯಾಪ್ತಿಯ 15 ಸಾವಿರ ಹೆ.ಗೆ ಇನ್ನೂ ನೀರು ಹಾಯಿಸದೆ ಬೇರೆ ಬೇರೆ ಹೆಸರಿನಲ್ಲಿ ವಾರಾಹಿ ನೀರನ್ನು ಕೊಂಡೊಯ್ಯುವುದು ರೈತ ವಿರೋಧಿ ಕ್ರಮ.
-ಕೆ. ವಿಕಾಸ್‌ ಹೆಗ್ಡೆ ,ಉಡುಪಿ ಜಿಲ್ಲಾ ರೈತ ಸಂಘದ ಜಿಲ್ಲಾ ವಕ್ತಾರ

-ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next