Advertisement

ವಾರಾಹಿ ಬಲದಂಡೆ ಕಾಲುವೆ: ಕಣ್ಣೆದುರೇ ನೀರು ಹರಿದರೂ ಕೃಷಿಗೆ ನೀರಿಲ್ಲ

08:49 PM Mar 15, 2020 | Sriram |

ಕುಂದಾಪುರ: ಕೃಷಿ ನೀರಿಗಾಗಿ ಆರಂಭವಾಗಿ ಎಂದೋ ಮುಗಿಯಬೇಕಿದ್ದ ಇನ್ನೂ ಮುಗಿಯದ ವಾರಾಹಿ ಯೋಜನೆಯಲ್ಲಿ ಕಣ್ಣೆದುರೇ ನೀರು ಹರಿಯುತ್ತಿದ್ದರೂ ತಮ್ಮ ಪಾಲಿನ ಕೃಷಿ ಜಮೀನಿಗೆ ನೀರು ದೊರೆಯುತ್ತಿಲ್ಲ ಎಂದು ಶಂಕರನಾರಾಯಣ ಭಾಗದ ಕೃಷಿಕರು ದೂರುತ್ತಿದ್ದಾರೆ.

Advertisement

ನೀರು ಹರಿವು ಆರಂಭ
ಉಡುಪಿ ಜಿಲ್ಲೆಯ 38,800 ಎಕರೆ ಭೂ ಪ್ರದೇಶಕ್ಕೆ ನೀರುಣಿಸಲು ಕುಂದಾಪುರ ಹಾಗೂ ಉಡುಪಿ ತಾಲೂಕನ್ನು ಕೇಂದ್ರೀಕರಿಸಿ ವಾರಾಹಿ ಯೋಜನೆ ಆರಂಭಿಸಲಾಗಿದೆ. ಯೋಜನೆ ಆರಂಭಗೊಂಡು 25 ವರ್ಷಗಳ ಕಾಲ 37 ಕೋ. ರೂ. ವ್ಯಯಿಸಲಾಗಿತ್ತು. ರೈತರಿಗೆ ಪ್ರಯೋಜನ ಮಾತ್ರ ಶೂನ್ಯ. 2005ರಲ್ಲಿ ಮರುಹುಟ್ಟು ಪಡೆದ ಯೋಜನೆ 2011ರ ವೇಳೆಗೆ 375 ಕೋ.ರೂ.ಗಳ ಖರ್ಚು ಮಾಡುವಲ್ಲಿಗೆ ತಲುಪಿತು. 2018ರ ಅವಧಿಗೆ 650 ಕೋ.ರೂ. ವರೆಗೆ ಖರ್ಚಾಗಿದ್ದು ಇನ್ನೂ ಕಾಮಗಾರಿ ಪ್ರಗತಿಯಲ್ಲಿದೆ.

ಎಲ್ಲೆಲ್ಲಿ ಇಲ್ಲ
2015ರಿಂದ ಬೇಸಗೆ ಹಂಗಾಮಿನ ನೀರು ಹರಿಸಿ ರೈತರ ಉಪಯೋಗಕ್ಕೆ ದೊರೆಯುತ್ತಿದೆ. 2015 ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಉದ್ಘಾಟಿಸಲ್ಪಟ್ಟ ವಾರಾಹಿ ನೀರಾವರಿ ಕಾಲುವೆಯು ಜಿಲ್ಲೆಯ ಮೂಲೆ ಮೂಲೆಗೂ ನೀರು ಹರಿಸಿದರೂ ಶಂಕರನಾರಾಯಣ ಗ್ರಾ.ಪಂ. ವ್ಯಾಪ್ತಿಯ ಕುಳಂಜೆ ಗ್ರಾಮದ (ಸ.ನಂ.2,6,13,17,18,19,20) ಹೆಬ್ಟಾಡಿ, ದಿಂಬದಮನೆ, ಅಗಳಕೋಣು, ಮಕ್ಕಿಮನೆ, ಹೆಬ್ಟಾಡಿ ಮೇಲುಕೋಡಿ ಭಾಗದ ಸುಮಾರು 100 ಎಕ್ರೆಗೂ ಮೇಲ್ಪಟ್ಟ ಕೃಷಿ ಭೂಮಿಗೆ ನೀರಿಲ್ಲದೆ ಕೃಷಿ ಭೂಮಿ ಬರಿದಾಗುವಂತಾಗಿದೆ.

ನೀರೇಕೆ ಬರುತ್ತಿಲ್ಲ
ವಾರಾಹಿ ಬಲ ದಂಡೆಯ ಕುಳಂಜೆ ಗ್ರಾಮದ ನೀರುಜಡ್ಡು ಎಂಬಲ್ಲಿ 15.825 ಕಿ.ಮಿ.ನಲ್ಲಿ ವಾರಾಹಿ ನೀರಾವರಿ ಕಾಲುವೆ ಹರಿಯುತ್ತಿದ್ದರೂ ಹೆಬ್ಟಾಡಿ ಭೂ ಭಾಗಕ್ಕೆ ಕಾಲುವೆ ನೀರು ಹರಿಯದಿರಲು ಹೆಬ್ಟಾಡಿಯ ಎರಡು ಬೃಹತ್‌ ಅವಳಿ ಗುಡ್ಡಗಳು ತಡೆಯೊಡ್ಡಿದ್ದೇ ಕಾರಣ. ಹೆಬ್ಟಾಡಿ ಭಾಗದ ಬರಡು ಕೃಷಿ ಭೂಮಿ ಹಾಗೂ ವಾರಾಹಿ ಬಲದಂಡೆ ಕಾಲುವೆಯ 15ನೆ ಕಿ.ಮಿ. ನೀರು ಜಡ್ಡು ಎಂಬಲ್ಲಿ ಎರಡು ಗುಡ್ಡಗಳು ಅಡ್ಡ ಬಂದಿದ್ದು, ಇಲ್ಲಿ ನೀರಾವರಿ ಇಲಾಖೆ ಸ್ವಲ್ಪ ಶ್ರಮ ವಹಿಸಿ 150ರಿಂದ 200 ಮೀ. ದೂರ 20 ಅಡಿ ಆಳದಲ್ಲಿ ಕೇವಲ 5 ಅಡಿ ಅಗಲದಲ್ಲಿ ಗುಡ್ಡದ ಬುಡವನ್ನು ಕೊರೆದು ಪೈಪ್‌ ಅಳವಡಿಸಿದರೆ ಕಾಲುವೆ ನೀರು ಗುರುತ್ವಾಕರ್ಷಣ ಶಕ್ತಿಯ ಮೇಲೆ ನಿರಂತರವಾಗಿ ಹೆಬ್ಟಾಡಿ ಭಾಗದ ಸುಮಾರು 100 ಎಕ್ರೆಗೂ ಮೇಲ್ಪಟ್ಟ ಕೃಷಿ ಭೂಮಿಗೆ ನೀರುಣಿಸಬಹುದು.

ಕೃಷಿಕರ ಹಿತದೃಷ್ಟಿಯಿಂದ ಅಗತ್ಯ
ಹೆಬ್ಟಾಡಿ ಭಾಗದ 100 ಎಕ್ರೆಗೂ ಮೇಲ್ಪಟ್ಟು ಕೃಷಿ ಭೂಮಿಗೆ ನೀರಾವರಿ ಇಲಾಖೆ ನೀರು ಹರಿಸದಿರುವುದು ಸೋಜಿಗವೆನಿಸುತ್ತಿದೆ. ಇನ್ನಾದರೂ ಇಲಾಖೆ ಎಚ್ಚೆತ್ತು ಈ ಭಾಗಕ್ಕೆ ನೀರು ಹರಿಸುವುದು ಕೃಷಿಕರ ಹಿತ ದೃಷ್ಟಿಯಿಂದ ಒಳಿತು ಎನ್ನುತ್ತಾರೆ ಪಶ್ಚಿಮ ವಾಹಿನಿ ನೀರಾವರಿ ಅಚ್ಚುಕಟ್ಟು ಅಭಿವೃದ್ಧಿ ಸಮಿತಿ ಅಧ್ಯಕ್ಷ ಚಿಟ್ಟೆ ರಾಜಗೋಪಾಲ ಹೆಗ್ಡೆ. ಎಲ್ಲವೂ ಕಾರ್ಯಗತಕ್ಕೆ ಬಂದರೆ, ವಾರಾಹಿ ಬಲದಂಡೆಯ 19ನೆ ಕಿ.ಮಿ ಕುಳಂಜೆ ಗ್ರಾಮದ ಶಿಂಗಿನಕೋಡ್ಲು – ಭರತ್ಕಲ್‌ ಎಂಬಲ್ಲಿಂದ ಉಡುಪಿ ನಗರಕ್ಕೆ ಪೈಪ್‌ ಮುಖಾಂತರ ಕುಡಿಯುವ ನೀರು ಅತಿ ಶೀಘ್ರದಲ್ಲಿ ಹರಿಯಲಿದೆ. ಆದರೆ ಕಾಲುವೆ ಕಾಲ ಬುಡದಲ್ಲೇ ಹೆಬ್ಟಾಡಿ ಭಾಗಕ್ಕೆ ಕಾಲುವೆ ನೀರು ಹರಿಯುವುದಿಲ್ಲ ಎನ್ನುತ್ತಾರೆ ಅವರು.

Advertisement

ಆಶ್ವಾಸನೆ ನಿಲ್ಲಿಸಿ,
ನೀರು ಕೊಡಿ
ಹೆಬ್ಟಾಡಿ ಭಾಗಕ್ಕೆ ನಮ್ಮ ಕಣ್ಣೆದುರೇ ವಾರಾಹಿ ಕಾಲುವೆ ನೀರು ಹರಿದರೂ ಸರಕಾರ ನಮಗೆ ನೀರು ಕೊಡುವ ವ್ಯವಸ್ಥೆ ಮಾಡಲಿಲ್ಲ. ವಾರಾಹಿ ಬಲದಂಡೆ 15.825ನೆ ಕಿ.ಮಿ ನೀರುಜಡ್ಡು ಎಂಬಲ್ಲಿ ನೀರಾವರಿ ಇಲಾಖೆ ಎಫ್‌.ಐ. ಸಿ.(ಫೀಲ್ಡ್‌ ಇರಿಗೇಶನ್‌ ತೂಬು) ಇಟ್ಟಿದ್ದು 20 ಅಡಿ ಆಳಕ್ಕೆ 5 ಅಡಿ ಅಗಲದ 200ಮೀ ದೂರ ಕಾಲುವೆ ಮಾಡಿದರೆ ಇಡೀ ಹೆಬ್ಟಾಡಿ ಭಾಗದ 100 ಎಕ್ರೆಗೂ ಮೇಲ್ಪಟ್ಟ ಕೃಷಿಭೂಮಿಗೆ ನೀರುಣಿಸಬಹುದು. ಈ ಭಾಗದಲ್ಲಿ ಈಗಾಗಲೇ ಅಂತರ್‌ ಜಲ ಮಟ್ಟ ಕುಸಿದಿದ್ದು ಕುಡಿಯುವ ನೀರಿಗೂ ತತ್ವಾರ ಬಂದಿದೆ. ಆಶ್ವಾಸನೆ ಕೇಳಿ ಕೇಳಿ ಸಾಕಾಗಿದೆ. ನೀರಾವರಿ ಇಲಾಖೆ ಗಮನ ಹರಿಸಬೇಕು.
-ಮಠಪಾಡಿ ಸದಾಶಿವ ಶೆಟ್ಟಿ,
ಹೆಬ್ಟಾಡಿ, ಕೃಷಿಕರು

ಸ್ಥಳ ಪರಿಶೀಲಿಸುವೆ
ಎಂಜಿನಿಯರ್‌ ಜತೆ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಅಲ್ಲಿನ ಜನರಿಗೆ ಕೃಷಿಗೆ ನೀರು ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನೀರು ಕೊಡುವ ಸಾಧ್ಯತೆ ಕುರಿತು ಆ ಪ್ರದೇಶ ವೀಕ್ಷಿಸದೇ ಈಗಲೇ ಸುಳ್ಳು ಭರವಸೆ ನೀಡುವುದಿಲ್ಲ. ಆದರೆ ಜನರಿಗೆ ಕೃಷಿಗೆ ನೀರು ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಅಗತ್ಯ ಕ್ರಮ ಕೈಗೊಳ್ಳುತ್ತೇನೆ.
– ಬಿ.ಎಂ. ಸುಕುಮಾರ್‌ ಶೆಟ್ಟಿ
ಶಾಸಕರು, ಬೈಂದೂರು ಕ್ಷೇತ್ರ

Advertisement

Udayavani is now on Telegram. Click here to join our channel and stay updated with the latest news.

Next