ಡಾ.ರಾಜ್‌ಕುಮಾರ್ ಮೊಮ್ಮಗ ಸಿನಿಮಾ ಹೀರೋ ಆಗಿದ್ದು ಗೊತ್ತೇ ಇದೆ. ಈಗ ಡಾ.ರಾಜಕುಮಾರ್ ಅವರ ಸಹೋದರ ವರದರಾಜ್ ಅವರ ಮೊಮ್ಮಗನ ಸರದಿ. ಹೌದು, ವರದರಾಜ್ ಅವರ ಪುತ್ರಿಯ ಪುತ್ರ ಪೃಥ್ವಿ ಈಗಷ್ಟೇ ಸಿನಿಮಾ ರಂಗಕ್ಕೆ ಎಂಟ್ರಿಯಾಗಿದ್ದಾರೆ. ಅವರೀಗ “ಮಿಂಚು ಹುಳು’ ಚಿತ್ರದ ಮೂಲಕ ಬಣ್ಣದ ಲೋಕವನ್ನು ಸ್ಪರ್ಶಿಸುತ್ತಿದ್ದಾರೆ. ಪೃಥ್ವಿ ಚಿತ್ರರಂಗಕ್ಕೆ ಸುಮ್ಮನೆ ಬರುತ್ತಿಲ್ಲ. ತಾನು ಗಟ್ಟಿ ನೆಲೆ ಕಾಣಬೇಕೆಂಬ ಅದಮ್ಯ ಬಯಕೆ ಅವರಲ್ಲಿದೆ.
ಒಬ್ಬ ನಾಯಕನಿಗೆ ಇರಬೇಕಾದ ಎಲ್ಲಾ ಅರ್ಹತೆಗಳನ್ನೂ ಅರಿತುಕೊಂಡು, ಪಕ್ಕಾ ತಯಾರಿ ಮಾಡಿಕೊಂಡೇ ಕ್ಯಾಮೆರಾ ಮುಂದೆ ನಿಲ್ಲಲು ತಯಾರಿ ಮಾಡಿಕೊಂಡಿದ್ದಾರೆ. ಅಂದಹಾಗೆ, “ಮಿಂಚು ಹುಳು’ ಚಿತ್ರದ ಮೂಲಕ ನಟನಾಗುತ್ತಿರುವ ಪೃಥ್ವಿ ಕುರಿತು ಒಂದು ರೌಂಡಪ್. ಸಾಮಾನ್ಯವಾಗಿ ಸಿನಿಮಾಗೆ ಎಂಟ್ರಿಯಾಗುವ ಯುವ ನಟರೆಲ್ಲರೂ ತಯಾರಿ ಪಡೆದುಕೊಂಡೇ ಕ್ಯಾಮೆರಾ ಮುಂದೆ ನಿಲ್ಲುತ್ತಾರೆ.
ಪೃಥ್ವಿ ಕೂಡ ಈಗಾಗಲೇ ಡ್ಯಾನ್ಸ್, ಫೈಟ್ ತರಬೇತಿ ಪಡೆದಿದ್ದಾರೆ. ಅಷ್ಟೇ ಅಲ್ಲ, ಕಳೆದ ಏಳು ತಿಂಗಳ ಹಿಂದೆಯೇ ಅವರು ರಂಗಭೂಮಿಯ ನಂಟು ಬೆಳೆಸಿಕೊಂಡು ಪಾಪು ಕಲಾವಿದರ ಸಂಘ ಮೂಲಕ ನಾಟಕ ಪ್ರದರ್ಶನ ನೀಡಿ ನಟನಾಗಿ ಹೊರಹೊಮ್ಮಿದ್ದಾರೆ. ನಾಟಕ ಕುರಿತು ಪಿಎಚ್‌ಡಿ ಮಾಡಿರುವ ಗೋವಿಂದಸ್ವಾಮಿ ಅವರ ಬಳಿ ನಟನೆ ತರಬೇತಿ ಪಡೆದಿರುವ ಪೃಥ್ವಿ, ಕಿಕ್‌ಬಾಕ್ಸ್, ಮಾರ್ಷಲ್ ಆರ್ಟ್ಸ್ ಕಲಿತಿದ್ದಾರೆ.
ಮೊದ ಮೊದಲು ಪೃಥ್ವಿಯ ಅಪ್ಪ, ಅಮ್ಮ ಸಿನಿಮಾ ಬಗ್ಗೆ ಆಸಕ್ತಿ ತೋರಿರಲಿಲ್ಲ. ಕಾರಣ, ಮಗನ ವಿದ್ಯಾಭ್ಯಾಸ ಮುಖ್ಯ ಎಂಬ ಕಾರಣ. ಹಾಗಾಗಿ, ಪೃಥ್ವಿ ಅಪ್ಪ, ಅಮ್ಮನ ಆಸೆಯಂತೆ ಬಿಬಿಎ ಓದಿದ್ದಾರೆ. ಆ ನಂತರ ಅವರನ್ನು ಒಪ್ಪಿಸಿ ಸಿನಿಮಾಗೆ ಧುಮುಕಿದ್ದಾರೆ. ಯಾವುದೇ ನಟ ಇರಲಿ, ಸಿನಿಮಾಗೆ ಹೀರೋ ಆಗುವ ಮೂಲಕ ಎಂಟ್ರಿ ಕೊಡುವುದು ಸಹಜ. ಪೃಥ್ವಿ ಮಾತ್ರ, ಮಕ್ಕಳ ಸಿನಿಮಾ ಮೂಲಕ ಬಂದಿದ್ದಾರೆ.
ಈ ಕುರಿತು ಹೇಳುವ ಪೃಥ್ವಿ, “ಇದು ಮಕ್ಕಳ ಸಿನಿಮಾ ಆಗಿದ್ದರೂ, ಒಳ್ಳೆಯ ಸಂದೇಶವಿದೆ. ಪಾತ್ರದಲ್ಲಿ ಫೋರ್ಸ್ ಇದೆ. ನಟನೆಗೆ ಹೆಚ್ಚು ಅವಕಾಶವಿದೆ. ನನಗೆ ಹೀರೋ ಅನಿಸಿಕೊಳ್ಳುವುದಕ್ಕಿಂತ ಒಬ್ಬ ಕಲಾವಿದ ಅಂತ ಕರೆಸಿಕೊಳ್ಳಬೇಕಷ್ಟೇ’ ಎನ್ನುವ ಪೃಥ್ವಿ, ಮುಂದಿನ ದಿನಗಳಲ್ಲಿ ಹೀರೋ ಆಗಿ ಕಾಣಿಸಿಕೊಳ್ಳುತ್ತೇನೆ ಎಂದು ವಿವರ ಕೊಡುತ್ತಾರೆ. ವರದರಾಜ್ ಅವರು ಕಥೆಗಳನ್ನು ಕೇಳಿ ಅಂತಿಮ ತೀರ್ಪು ಕೊಡುತ್ತಿದ್ದರು.
ನಿಮ್ಮ ಸಿನಿಮಾಗಳಿಗೆ ಕಥೆ ಕೇಳುವರು ಯಾರು, ಅಂತಿಮ ತೀರ್ಪು ನೀಡುವರ್ಯಾರು? ಇದಕ್ಕೆ ಉತ್ತರಿಸುವ ಪೃಥ್ವಿ, “ಮಿಂಚು ಹುಳು’ ಮಕ್ಕಳ ಚಿತ್ರವಾದ್ದರಿಂದ ಅಪ್ಪ, ಅಮ್ಮ ಮತ್ತು ನಾನು ಕೇಳಿ ಆಯ್ಕೆ ಮಾಡಿದೆವು. ಮುಂದಿನ ದಿನಗಳಲ್ಲಿ ನಾನು ಹೀರೋ ಆಗುವ ಚಿತ್ರದ ಕಥೆಯನ್ನು ಶಿವಣ್ಣ, ರಾಘಣ್ಣ, ಪುನೀತ್ ಕೇಳಿ ನಿರ್ಧರಿಸುತ್ತಾರೆ. ನಾನು ಸಿನಿಮಾ ಮಾಡ್ತೀನಿ ಅಂದಾಗ,
ನನಗೆ ಶಿವಣ್ಣ, ನ್ಯಾಚುರಲ್ ಆಗಿ ನಟಿಸಬೇಕು, ಕ್ಯಾಮೆರಾ ಮುಂದೆ ಭಯಪಡಬಾರದು. ಬೋಲ್ಡ್ ಆಗಿರಬೇಕು ಎಂಬ ಸಲಹೆ ಕೊಟ್ಟಿದ್ದಾರೆ. ನನಗೆ ತಾತ ರಾಜಕುಮಾರ್ ಸ್ಪೂರ್ತಿ. ಚಿಕ್ಕಂದಿನಿಂದಲೂ ನಾನು ಅವರ ಚಿತ್ರ, ಶಿವಣ್ಣ, ಪುನೀತ್, ರಾಘಣ್ಣ ಅವರ ಚಿತ್ರ ನೋಡಿಕೊಂಡು ಬೆಳೆದಿದ್ದೇನೆ. ಹಾಗಾಗಿ ನಟನೆ ಎಂಬುದು ಒಳಗೆ ಬೆಳೆದುಬಂದಿದೆ’ ಎಂಬುದು ಪೃಥ್ವಿ ಮಾತು.