ಹರಪನಹಳ್ಳಿ: ಗ್ರಾಮೀಣ ಪ್ರದೇಶದಲ್ಲಿ ವರದಕ್ಷಣೆ ಪಿಡುಗು ಇನ್ನೂ ಜೀವಂತವಾಗಿದೆ. ವರದಕ್ಷಣೆ ಕಿರುಕುಳದಿಂದಲೇ ಬಹಳಷ್ಟು ಕುಟುಂಬಗಳಲ್ಲಿ ನೆಮ್ಮದಿ ಕಳೆದುಕೊಂಡು ತಮ್ಮ ಜೀವನದಲ್ಲಿ ನ್ಯಾಯಾಲಯದ ಮೆಟ್ಟಿಲೇರಿ ವಿಚ್ಚೇದನ ಪಡೆಯುವಲ್ಲಿ ಮುಂದಾಗಿದ್ದಾರೆ ಎಂದು ಕುಂಬಳೂರು ಸರ್ಕಾರಿ ಪಪೂ ಕಾಲೇಜು ಉಪನ್ಯಾಸಕಿ ಸುಮತಿ ಜಯಪ್ಪ ಹೇಳಿದರು.
ತಾಲೂಕಿನ ಸಾಮರ್ಥ್ಯಸೌಧ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮತ್ತು ತಾಲೂಕು ಸ್ತ್ರೀಶಕ್ತಿ ಒಕ್ಕೂಟ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಯಲ್ಲಿ ಅವರು ಉಪನ್ಯಾಸ ನೀಡಿದರು. ಮಹಿಳೆಯ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಈಚೇಗೆ ಪುರುಷರಿಗೆ ಮದುವೆಯಾಗಲು ಮಹಿಳೆಯರು ಸಿಗುತ್ತಿಲ್ಲ.
ಆದ್ದರಿಂದ ಅನಾಥಶ್ರಮಕ್ಕೆ ಹೋಗಿ ಮದುವೆಯಾಗುವ ಸಂದರ್ಭ ಎದುರಾಗಿದೆ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ತಾಪಂ ಅಧ್ಯಕ್ಷೆ ಅನ್ನಪೂರ್ಣಮ್ಮ ಮಾತನಾಡಿ, ಅನಿಷ್ಠ ಪದ್ಧತಿಯನ್ನು ಹೋಗಲಾಡಿಸಿದರೆ ಮಾತ್ರ ಮಹಿಳೆಯರು ಸಮಾಜಮುಖೀಯಾಗಿ ಕೆಲಸ ಮಾಡಲು ಸಾಧ್ಯ.
ಸಮಾಜದಲ್ಲಿ ಗಂಡ ಸತ್ತ ಮಹಿಳೆಯರಿಗೆ ಕೆಟ್ಟ ದೃಷ್ಟಿಯಲ್ಲಿಯೇ ನೋಡುವುದು ಸಮಂಜಸವಲ್ಲ ಎಂದರು. ದೇವದಾಸಿ ನಿರ್ಮೂಲನಾ ಹೋರಾಟಗಾರ್ತಿ ಟಿ.ವಿ.ರೇಣುಕಮ್ಮ, ಜನಪದ ಕಲಾವಿದೆ ಎಲಿಸವ್ವ ಮಾದಾರ, ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ಇಟ್ಟಿಗುಡಿ ಪ್ರಮೀಳಮ್ಮ, ಬಾಗಳಿ ಅಂಗನವಾಡಿ ಶಿಕ್ಷಕಿ ಫೈರೋಜಾ ಅವರನ್ನು ಸನ್ಮಾನಿಸಲಾಯಿತು.
ಎಲ್.ಮಂಜ್ಯನಾಯ್ಕ, ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಮಂಜುಳಾ ಗುರುಮೂರ್ತಿ, ಜಿಪಂ ಸದಸ್ಯರಾದ ಸುವರ್ಣ ಅರುಂಡಿ ನಾಗರಾಜ್, ವೈ.ಸುಶೀಲಮ್ಮ ದೇವೇಂದ್ರಪ್ಪ, ತೋಟಗಾರಿಕೆ ಇಲಾಖೆ ನಿರ್ದೇಶಕಿ ಶಶಿಕಲಾ, ಸಿಡಿಪಿಒ ಪ್ರಫುಲ್ಲಾ ಡಿ.ರಾವ್, ನಾಗವೇಣಿ, ಈಶ್ವರ್‌ನಾಯ್ಕ ಮತ್ತಿತರಿದ್ದರು.