Advertisement

ಯುವತಿ ಓದಿಗೆ ವನಿತಾವಾಣಿ ಆಸರೆ

12:16 PM Dec 17, 2018 | Team Udayavani |

ಬೆಂಗಳೂರು: ಹೆತ್ತ ತಾಯಿ ಕಡೆಯಿಂದಲೇ “ವೇಶ್ಯೆ’ ಆಗುವ ಆತಂಕ ಎದುರಿಸುತ್ತಿದ್ದ ಯುವತಿಯ ಅಳಲು ಕೇಳಿ ಆಕೆ ಪುನಃ ವಿದ್ಯಾಭ್ಯಾಸ ಮುಂದುವರಿಸಲು ಬೆಂಗಳೂರು ನಗರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿರುವ ಪರಿಹಾರ ಕೇಂದ್ರ ನೆರವಾದ ಪ್ರಕರಣವಿದು.

Advertisement

“ತಂದೆಯಿಲ್ಲದೆ ಬದುಕುತ್ತಿರುವ ನನಗೆ ತಾಯಿ ವೇಶ್ಯೆಯಾಗಲು ಬಲವಂತ ಮಾಡುತ್ತಿದ್ದಾರೆ. ನನಗೆ, ಉನ್ನತ ವಿದ್ಯಾಭ್ಯಾಸ ಮುಗಿಸಿ ಗೌರವಯುತ ಜೀವನ ಸಾಗಿಸುವ ಆಸೆಯಿದೆ. ದಯಮಾಡಿ ಸಂಕಷ್ಟದಿಂದ ಪಾರು ಮಾಡಿ’ ಎಂಬ ಕೋರಿಕೆ ದೂರನ್ನು ನವೆಂಬರ್‌ನಲ್ಲಿ ಸ್ವೀಕರಿಸಿದ್ದ ಪರಿಹಾರ ಕೇಂದ್ರದ ಸಿಬ್ಬಂದಿಯೇ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

ಬಳಿಕ ಯುವತಿಗೆ ವನಿತಾ ಸಹಾಯವಾಣಿ ಆಪ್ತ ಸಮಾಲೋಚಕರ ಬಳಿ ಆಪ್ತ ಸಮಾಲೋಚನೆ ನಡೆಸಿದಾಗ, ಆಕೆ ನಗರದ ಕಾಲೇಜೊಂದರಲ್ಲಿ ದ್ವೀತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದುದು ಗೊತ್ತಾಗಿದೆ. ಆ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ತಾನು ಇನ್ನೆಂದೂ ತಾಯಿಯ ಮನೆಗೆ ಹೋಗುವುದಿಲ್ಲ. ತಾಯಿಯೊಂದಿಗೆ ವಾಸಿಸಲು ಇಷ್ಟವಿಲ್ಲ.

ಪ್ರತ್ಯೇಕವಾಗಿ ವಾಸಿಸುತ್ತೇನೆ ಎಂಬ ಒಪ್ಪಿಗೆ ಪತ್ರ ಬರೆದುಕೊಟ್ಟಿದ್ದಾರೆ. ಈ ಒಪ್ಪಿಗೆ ಪತ್ರ ಆಧರಿಸಿ ಆಕೆಗೆ ಕಾನೂನಿನಡಿ ಅವಕಾಶ ಇರುವಂತೆ ಪುನರ್ವಸತಿ ಕೇಂದ್ರವೊಂದರಲ್ಲಿ ಆಶ್ರಯ ಕಲ್ಪಿಸಲಾಗಿದೆ. ಆಕೆ, ಓದುತ್ತಿದ್ದ ಕಾಲೇಜಿನಲ್ಲಿಯೇ ವಿದ್ಯಾಭ್ಯಾಸ ಮುಂದುವರಿಸಿದ್ದಾರೆ ಎಂದು ಕೇಂದ್ರದ ಆಪ್ತ ಸಮಲೋಚಕರು ಹೇಳಿದರು.

ಘಟನೆ ಬಳಿಕ ಆಕೆಯ ತಾಯಿಗೂ ಎಚ್ಚರಿಕೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ಮಗಳಿಗೆ ತೊಂದರೆ ಕೊಡಬಾರದು. ಆಕೆಯ ಬಳಿ, ಕಾಲೇಜಿನ ಬಳಿಯೂ ತೆರಳುವಂತಿಲ್ಲ. ಒಂದೊಮ್ಮೆ ಹಾಗೆ ಮಾಡಿದರೆ ಕಾನೂನು ಕ್ರಮಕ್ಕೆ ಶಿಫಾರಸು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ಕಳುಹಿಸಲಾಗಿದೆ.

Advertisement

ಇದಾದ ಬಳಿಕ ಆಕೆ ಮತ್ತೆಂದೂ ಬಂದಿಲ್ಲ. ಇತ್ತ ಪುನರ್ವಸತಿ ಕೇಂದ್ರದಲ್ಲಿರುವ ವಿದ್ಯಾರ್ಥಿನಿ ಕಾಲೇಜಿಗೆ ಹೋಗಿ ಬರುತ್ತಿದ್ದಾರೆ. ಆಕೆ, ಮನೆಯಲ್ಲಿರುವುದಕ್ಕಿಂತ ಹೆಚ್ಚು ಸಂತೋಷದಿಂದ ಇರುವುದಾಗಿ ತಿಳಿಸಿದ್ದಾರೆ. ಆಕೆಗೆ, ಉನ್ನತ ವ್ಯಾಸಂಗ ಮಾಡುವ ಕನಸಿದೆ. ಅದನ್ನು ಮುಂದುವರಿಸಿ ಆಕೆಯ ಭವಿಷ್ಯ ಚೆನ್ನಾಗಿದ್ದರೆ ಅಷ್ಟೇ ಸಾಕು ಎಂದು ವನಿತಾವಾಣಿ ಸಿಬ್ಬಂದಿ ಆಶಿಸಿದರು.

ಪಾರಾಗಿದ್ದು ಹೇಗೆ?: ಬೆಂಗಳೂರು ದಕ್ಷಿಣ ಭಾಗದಲ್ಲಿ ತಾಯಿ ಜತೆ ವಾಸಿಸುತ್ತಿದ್ದು ತಂದೆ ಇರಲಿಲ್ಲ. ತಾಯಿ ವೇಶ್ಯೆ ವೃತ್ತಿ ಮಾಡುತ್ತಿದ್ದರು. ಈ ವಿಚಾರ ಮಗಳ ಗಮನಕ್ಕೆ ಕೆಲ ವರ್ಷಗಳ ಹಿಂದೆ ಬಂದಿತ್ತು. ಆದರೆ, ಪ್ರತಿರೋಧಿಸುವ ಸ್ಥಿತಿಯಲ್ಲಿ ಆಕೆಯಿರಲಿಲ್ಲ. ಕಳೆದ ಏಳೆಂಟು ತಿಂಗಳಿನಿಂದ ಆಕೆ, ವೇಶ್ಯಾ ವೃತ್ತಿ ಮಾಡುವಂತೆ ಮನವೊಲಿಸುತ್ತಿದ್ದಳು ನಾನು ಒಪ್ಪಿರಲಿಲ್ಲ.

ಆದರೆ, ತಿಂಗಳ ಹಿಂದೆ  ತಾಯಿ ಕೈಗೊಂಡ ನಿರ್ಧಾರ ನನ್ನ ಪಾಲಿಗೆ ಅತ್ಯಂತ ಕಠೊರವಾಗಿತ್ತು. ಸುಮಾರು 45 ವರ್ಷ ವಯೋಮಾನದ ಉದ್ಯಮಿಯೊಬ್ಬರನ್ನು ತೋರಿಸಿ, ಇವರೊಂದಿಗೆ ನೀನು ಹೊಂದಾಣಿಕೆ ಮಾಡಿಕೊಂಡು ಹೋಗಬೇಕು. ಮುಂದೆ ಅವರು ನಿನ್ನನ್ನು ಮದುವೆಯಾಗುತ್ತಾರೆ. ನನಗೆ ಲಕ್ಷಾಂತರ ರೂ. ಹಣ ಸಿಗುತ್ತದೆ ಎಂದು ಹೇಳಿಬಿಟ್ಟರು. ಆ ದಿನ ನಾನು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

ಮನೆಯಲ್ಲಿದ್ದರೆ ಬದುಕು ಬೀದಿಪಾಲಾಗುತ್ತದೆ ಎಂದು ಭಯಪಟ್ಟು ಓಡಿಬಂದ ವಿದ್ಯಾರ್ಥಿನಿ ಬಸವನಗುಡಿ ಪೊಲೀಸ್‌ ಠಾಣೆಯಲ್ಲಿರುವ ಸಹಾಯವಾಣಿ ಕೇಂದ್ರಕ್ಕೆೆ ರಕ್ಷಣೆ ನೀಡುವಂತೆ ಕೋರಿದ್ದರು. ಬಳಿಕ, ಪ್ರಕರಣ ಮುಖ್ಯ ಕಚೇರಿಗೆ ವರ್ಗಾವಣೆಯಾಯಿತು. ಬಳಿಕ ಪ್ರಕರಣವನ್ನು ಇತ್ಯರ್ಥಗೊಳಿಸಿ, ಯುವತಿಯ ಇಚ್ಛೆಯಂತೆ ಆಕೆಯ ವಿದ್ಯಾಭ್ಯಾಸಕ್ಕೆ ನೆರವಾಗುವ ವ್ಯವಸ್ಥೆ ಮಾಡಲಾಯಿತು ಎಂದು ಆಪ್ತ ಸಮಾಲೋಚಕರೊಬ್ಬರು ವಿವರಿಸಿದರು.

ಪರಿಹಾರ ಕೇಂದ್ರಕ್ಕೆ ಬರುವ ದೂರುಗಳಿಗೆ ಸಂಬಂಧಪಟ್ಟಂತೆ ಆಪ್ತ ಸಮಾಲೋಚಕರು ಕೌನ್ಸಿಲಿಂಗ್‌ ನಡೆಸಿ ಪರಿಹರಿಸುತ್ತಾರೆ. ಆದರೆ, ಈ ದೂರು ಮನಸ್ಸನ್ನೇ ಕಲಕಿತು. ಈ ರೀತಿಯ ಸಂಕಷ್ಟಗಳು ಹೆಣ್ಣುಮಕ್ಕಳಿಗೆ ಬರಬಾರದು.ಯುವತಿಗೆ ಕಾನೂನಿನಡಿ ನೀಡಬೇಕಾದ ನೆರವು ಕಲ್ಪಿಸಲಾಗಿದೆ. ಆಕೆ, ಪುನಃ ವಿದ್ಯಾಭ್ಯಾಸ ಮುಂದುವರಿಸಿರುವುದು ಸಮಾಧಾನ ತಂದಿದೆ.
-ರಾಣಿ ಶೆಟ್ಟಿ, ಪರಿಹಾರ ಕೇಂದ್ರದ ಮುಖ್ಯಸ್ಥೆ

* ಮಂಜುನಾಥ ಲಘುಮೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next