Advertisement
“ಲೂಸುಗಳು’, “ರಿಂಗ್ ರೋಡ್ ಶುಭಾ’ ಚಿತ್ರಗಳಿಗೆ ಸಂಗೀತ ಸಂಯೋಜನೆ ಸೇರಿದಂತೆ ಹಲವಾರು ಭಜನೆ, ಭಕ್ತಿಗೀತೆಗಳಿಗೆ ರಾಗ ಸಂಯೋಜಿಸಿದ್ದಾರೆ. ಆದಿತ್ಯ ಹರಿಕೃಷ್ಣ ಇವರ ಮಗ. ಎಷ್ಟೇ ಪ್ರತಿಭೆ ಇದ್ದರೂ ಮದುವೆಯಾದ ಬಳಿಕ ಹೆಣ್ಣಿಗೆ ಕುಟುಂಬವೇ ಮೊದಲ ಆದ್ಯತೆಯಾಗುತ್ತದೆ ಎಂಬುದು ಇವರ ಅಭಿಪ್ರಾಯ…
ನಾನು ಹುಟ್ಟಿದ್ದೇ ಸಂಗೀತಗಾರರ ಕುಟುಂಬದಲ್ಲಿ. ನನ್ನ ತಾತ ಸುಪ್ರಸಿದ್ಧ ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್. ನನ್ನ ತಂದೆ ಗಾ.ನ. ರಾಮಸ್ವಾಮಿ ಖ್ಯಾತ ಸಂಗೀತಗಾರ. ತಾಯಿ ಜಿ.ಎಸ್. ಭಾನುಮತಿ ವೀಣಾವಾದಕಿ. ನಾನು 4ನೇ ವಯಸ್ಸಿನಿಂದಲೇ ಶಾಸ್ತ್ರೀಯ ಸಂಗೀತ ಕಲಿಯಲು ಆರಂಭಿಸಿದೆ. ನಂತರ ನನ್ನ ತಾಯಿ ಬಳಿ ವೀಣೆ ಕಲಿತಿದ್ದೇನೆ. ಗಿಟಾರ್ ಕೂಡ ಕಲಿತಿದ್ದೇನೆ. ನನ್ನ ಜೀವನದ ಬಹುತೇಕ ಸಮಯವನ್ನು ಸಂಗೀತಕ್ಕೆ ಮುಡಿಪಾಗಿಸಿದ್ದೇನೆ. * ಸಿನಿಮಾಗೆ ಹಾಡಲು ಶುರುಮಾಡಿದ್ದು ಯಾವಾಗಿನಿಂದ?
ಹಿನ್ನೆಲೆ ಗಾಯಕಿಯಾಗಿ ನಾನು ಹಾಡಿದ ಮೊದಲ ಹಾಡು “ಇಂತಿ ನಿನ್ನ ಪ್ರೀತಿಯ’ ಚಿತ್ರದ “ಮಧುವನ ಕರೆದರೆ’ ಅಂತ ತುಂಬಾ ಜನ ತಿಳಿದಿದ್ದಾರೆ. ಮೊದಲ ಹಾಡಿಗೇ ರಾಜ್ಯ ಪ್ರಶಸ್ತಿ ಸಿಕ್ಕಿದ್ದು ಹೇಗನ್ನಿಸುತ್ತದೆ ಅಂತೆಲ್ಲಾ ಕೇಳುತ್ತಾರೆ. ಆದರೆ, ನಾನು ಸಿನಿಮಾಕ್ಕೆ ಮೊದಲ ಹಾಡು ಹಾಡಿದ್ದು 1993ರಲ್ಲಿ “ಮಂಜು ಮುಸುಕಿನ ಹಾದಿ’ ಎಂಬ ಚಿತ್ರಕ್ಕೆ. 1988ರಲ್ಲಿ ಕೋರಸ್ ಸಿಂಗರ್ ಆಗಿ ವೃತ್ತಿ ಆರಂಭಿಸಿದೆ. 1993ರಿಂದ ಟ್ರ್ಯಾಕ್ ಹಾಡ್ತಾ ಇದ್ದೆ. ಆದರೆ ಬ್ರೇಕ್ ಸಿಕ್ಕಿದ್ದು “ಮಧುವನ..’ ಹಾಡಿನಿಂದ.
Related Articles
ನನ್ನ ಹೆತ್ತವರಿಗೆ ನಾನೇ ಕೊನೆಯ ಮಗಳು. ಅಕ್ಕ, ಅಣ್ಣನಿಗಿಂತ ನನ್ನನ್ನು ಜಾಸ್ತಿ ಮುದ್ದು ಮಾಡುತ್ತಿದ್ದರು. ಆಗೆಲ್ಲಾ ನಾನು ವಿಪರೀತ ಕೋಪಿಷ್ಟೆ. “ಚಿನ್ನ ನಿನ್ನ ಮುದ್ದಾಡುವೆ’ ಚಿತ್ರದಲ್ಲಿ ಬಾಲ ನಟಿ ಕೋಪಿಸಿಕೊಂಡು ಮನೆ ಬಿಟ್ಟು ಹೋಗುವ ದೃಶ್ಯವೊಂದಿದೆಯಲ್ಲ, ನಾನೂ ಅವಳಂತೆ ಮನೆ ಬಿಟ್ಟು ಹೋಗ್ತಿàನಿ ಅಂತ ಎಲ್ಲರನ್ನೂ ಹೆದರಿಸುತ್ತಿದ್ದೆ. ನನಗೆ ನಾಯಿಮರಿ ಅಂದರೆ ಪ್ರಾಣ. ಹಠ ಮಾಡಿ ಮನೆಯಲ್ಲಿ ನಾಯಿಮರಿ ಸಾಕಿದ್ದೆ. ನಾನು ಸಾಕಿದ್ದ ಒಂದು ನಾಯಿ ಸತ್ತು ಹೋಯಿತು. ಆಗ ಆಕಾಶವೇ ಕಳಚಿಬಿದ್ದಂತೆ ಆಗಿತ್ತು ನನಗೆ.
Advertisement
* ಹರಿಕೃಷ್ಣ ಜೊತೆ ಲವ್ ಆಗಿದ್ದು ಯಾವಾಗ? ಪಿಯು ಮುಗಿಸಿದ ಬಳಿಕ ಗಾಯನ ವೃತ್ತಿಯನ್ನೇ ಕೈಗೆತ್ತಿಕೊಳ್ಳಬೇಕು ಅಂತ ನಿರ್ಧರಿಸಿದೆ. “ಮೆಲಡಿ ಕ್ರಿಯೇಟರ್’ ಎಂಬ ಆರ್ಕೆಸ್ಟ್ರಾದಲ್ಲಿ ಗಾಯಕಿಯಾಗಿದ್ದೆ. ಹರಿಕೃಷ್ಣ ಅಲ್ಲಿ ಕೀಬೋರ್ಡ್ ವಾದಕರಾಗಿದ್ದರು. ಇಬ್ಬರ ಮಧ್ಯೆ ಸ್ನೇಹ ಇತ್ತು. ಅವರು ನನ್ನನ್ನು ಪ್ರೀತಿಸುತ್ತಿದ್ದರಂತೆ. ನನಗೆ ಅದು ಗೊತ್ತೇ ಆಗಿರಲಿಲ್ಲ. ಅವರು ನನಗೆ ದುಬಾರಿ ಚೂಡಿದಾರ್ ಉಡುಗೊರೆ ನೀಡಿದ್ದರು. ಆಗಲೂ ಅವರು ನನ್ನನ್ನು ಪ್ರೀತಿಸುತ್ತಿದ್ದಾರೆ ಎಂದು ನನಗೆ ತಿಳಿಯಲೇ ಇಲ್ಲ. ನಮ್ಮ ಆರ್ಕೆಸ್ಟ್ರಾದ ಕಲಾವಿದರೊಬ್ಬರು ನನಗೆ “ಪೆದ್ದೀ, ನಿನಗೆ ಇನ್ನೂ ಗೊತ್ತಾಗಿಲ್ವಾ? ಹರಿಕೃಷ್ಣ ನಿನ್ನನ್ನು ಪ್ರೀತಿಸುತ್ತಿದ್ದಾನೆ’ ಅಂತ ಹೇಳಿದ್ರು. ನಾನು ಒಪ್ಪಿಕೊಂಡೆ. ಬಳಿಕ ನನ್ನಮ್ಮನ ಬಳಿಯೇ ಅವರು ವೀಣೆ ಕಲಿಯಲು ಸೇರಿಕೊಂಡರು. ಆಗ ದಿನಾ ಮನೆಗೆ ಬರುತ್ತಿದ್ದರು. ಕಡೆಗೊಂದು ದಿನ ಅವರೇ ಅಮ್ಮನ ಬಳಿ ನಮ್ಮ ಪ್ರೀತಿ ವಿಷಯ ಹೇಳಿದರು. * ನಿಮ್ಮ ಡೇಟಿಂಗ್ ದಿನಗಳನ್ನು ನೆನಪಿಸಿಕೊಳ್ಳುವುದಾದರೆ?
93ರಲ್ಲಿ ಅವರು ನಮ್ಮ ಮನೆಯಲ್ಲಿ ಮದುವೆ ಪ್ರಸ್ತಾಪ ಇಟ್ಟಿದ್ದು. ನಾನು ಮದುವೆಯಾಗೋಣ ಅಂತ ಒಂದೇ ಸಮನೆ ಅವರನ್ನು ಪೀಡಿಸುತ್ತಲೇ ಇದ್ದೆ. ಆದರೆ ಅವರು, ನಾನಿನ್ನೂ ಸೆಟಲ್ ಆಗಿಲ್ಲ. ಈಗಲೇ ಮದುವೆಯಾಗೋದು ಬೇಡ ಅಂತ ಮದುವೆಯನ್ನು ಮುಂದೂಡುತ್ತಿದ್ದರು. ನಾನೇನಾದರೂ ಇನ್ನೂ ಒತ್ತಾಯ ಮಾಡಿದರೆ, “ನಿನಗೆ ಮದುವೆಯಾಗುವುದನ್ನು ಬಿಟ್ಟರೆ ಜೀವನದಲ್ಲಿ ಬೇರೆ ಏನೂ ಗುರಿಗಳೇ ಇಲ್ವಾ? ಮೊದಲು ಏನಾದರೂ ಸಾಧಿಸುವ ಬಗ್ಗೆ ಗಮನ ಹರಿಸು’ ಎನ್ನುತ್ತಿದ್ದರು. ಆಗ ಅವರಿಗೆ ಹಣಕಾಸಿನ ಕಷ್ಟ ಇತ್ತು. ಆದರೆ, ಒಂದು ದಿನವೂ ಅದನ್ನು ತೋರಿಸಿಕೊಳ್ಳುತ್ತಿರಲಿಲ್ಲ. ಆ ದಿನಗಳೇ ಸುಂದರವಾಗಿದ್ದವು. ಇನ್ನಷ್ಟು ತಡವಾಗಿಯೇ ಮದುವೆಯಾಗಿದ್ದರೆ ಚೆನ್ನಾಗಿರುತ್ತಿತ್ತು ಅಂತ ಈಗ ತುಂಬಾ ಅನಿಸುತ್ತದೆ. * ಸಂಗೀತ ನಿರ್ದೇಶಕಿಯಾಗಿಯೂ ಒಂದು ಕೈ ನೋಡಿದ್ದೀರಿ. ಆ ಅನುಭವ ಹೇಗಿತ್ತು?
ಈವರೆಗೆ ಹಲವಾರು ಭಕ್ತಿಗೀತೆಗಳಿಗೆ ರಾಗ ಸಂಯೋಜಿಸಿದ್ದೇನೆ. ಹಲವು ಗೀತೆಗಳಿಗೆ ನಾನೇ ಸಾಹಿತ್ಯ ರಚಿಸಿದ್ದೇನೆ. ಜೊತೆಗೆ 3 ಚಿತ್ರಗಳಿಗೆ ಸಂಗೀತ ನೀಡಿದ್ದೇನೆ. ಸಂಗೀತ ನಿರ್ದೇಶನ ಅಷ್ಟು ಸುಲಭದ ವಿಷಯವಲ್ಲ. ನಮಗೆ ಎಷ್ಟೇ ಸಂಗೀತ ಜ್ಞಾನ ಇದ್ದರೂ ನಿರ್ದೇಶಕ, ನಿರ್ಮಾಪಕರಿಗೆ ಹೇಗೆ ಬೇಕೋ ಹಾಗೆ ಸಂಗೀತ ನೀಡಬೇಕು. ಜೊತೆಗೆ, ಸಂಗೀತ ನಿರ್ದೇಶನ ಮಹಿಳೆಯದ್ದಾದರೆ ಆಕೆಯ ಮಾತುಗಳಿಗೆ ಬೆಲೆಯೇ ಕೊಡುವುದಿಲ್ಲ. ಪುರುಷರಂತೆ ನಮಗೆ ಸಂಗೀತದಲ್ಲೇ ಮುಳುಗಲು ಆಗುವುದಿಲ್ಲ. ಮಕ್ಕಳ ಊಟ, ತಿಂಡಿ, ಮನೆ, ಕರೆಂಟ್ ಬಿಲ್, ಗ್ಯಾಸ್ ಬುಕ್ ಮಾಡುವುದು ಎಲ್ಲವೂ ನಮ್ಮ ಮೇಲೇ ಇರುತ್ತದಲ್ಲಾ..! * ಈಗ ನಿಮಗೆ ಹರಿಕೃಷ್ಣ ಸಮಯ ಕೊಡುತ್ತಾರಾ?
ಮದುವೆಯ ನಂತರ ಅವರು ಫುಲ್ ಬ್ಯುಸಿ. ಮದುವೆಯಾಗಿ 6 ತಿಂಗಳ ಬಳಿಕ 2 ದಿನಗಳ ಮಟ್ಟಿಗೆ ಮಡಿಕೇರಿಗೆ ಹನಿಮೂನ್ ಕರಕೊಂಡು ಹೋಗಿದ್ದರು. ಈಗಲೂ ಎಲ್ಲಿಗಾದರೂ ಹೋಗೋಣ ಎಂದರೆ ಅವರಿಗೆ ಬಿಡುವೇ ಇರುವುದಿಲ್ಲ. ಬೆಂಗಳೂರಿನಲ್ಲೇ ಯಾವುದಾದರೂ ರೆಸ್ಟೋರೆಂಟ್‌ಗೆ ಕುಟುಂಬ ಸಮೇತ ಹೋಗಿಬಂದರೆ ಅದೇ ನನಗೆ ದೊಡ್ಡ ಖುಷಿ. * ಹರಿಕೃಷ್ಣ ಬಗ್ಗೆ ಯಾವೆಲ್ಲಾ ವಿಷಯಗಳಿಗೆ ನಿಮಗೆ ಕೋಪ ಬರುತ್ತದೆ?
ಅವರು ಎಂಥಾ ಹಾರ್ಡ್‌ವರ್ಕರ್ ಎಂಬುದು ನನಗೆ ಗೊತ್ತು. ಹೀಗಾಗಿ ಅವರು ಸದಾ ನನ್ನೆದುರೇ ಇರಬೇಕು ಅಂತ ಬಯಸುವುದಿಲ್ಲ. ಆದರೆ ಆ್ಯನಿವರ್ಸರಿ, ನನ್ನ ಅಥವಾ ಮಗನ ಹುಟ್ಟುಹಬ್ಬಕ್ಕೆ ಅವರು ಜೊತೆ ಇರಬೇಕು ಅಂತ ಬಯಸುತ್ತೇನೆ. ಆದರೆ, ಯಾವ ಬರ್ಥ್ಡೇ, ಆ್ಯನಿವರ್ಸರಿಗೂ ಅವರು ಇರುವುದಿಲ್ಲ. ದರ್ಶನ್, ರವಿಚಂದ್ರನ್ ಸರ್ ಹುಟ್ಟುಹಬ್ಬ ಇದ್ದರೆ ಕೆಲಸ ಬಿಟ್ಟು ಹೂಗುತ್ಛ ತೆಗೆದುಕೊಂಡು ಹೋಗ್ತಾರೆ. ಅವರು ಮನೆಯಲ್ಲಿದ್ದಾರೆ ಅಂತ ವಿಶೇಷ ಅಡುಗೆ ತಯಾರಿಸೋಕೆ ಹೊರಡುವಷ್ಟರಲ್ಲಿ ಕೆಲಸ ಅಂತ ಚೆನ್ನೈ ಅಥವಾ ಮುಂಬೈಗೆ ಹೊರಡುತ್ತಾರೆ. ನನಗೆ ಮೊದಲೇ ಯಾಕೇ ತಿಳಿಸಲಿಲ್ಲ ಅಂತ ಅವರ ಜೊತೆ ಜಗಳ ಆಡ್ತೀನಿ. * ವೃತ್ತಿ ಬಗ್ಗೆ ತೃಪ್ತಿ ಇದೆಯಾ?
ಚಿಕ್ಕಂದಿನಿಂದಲೂ ಸಂಗೀತ ಕ್ಷೇತ್ರದಲ್ಲಿದ್ದೇನೆ. ಆದರೆ, ನನ್ನ ಸಂಪೂರ್ಣ ಪ್ರತಿಭೆ ತೋರಿಸುವಂಥ ಅವಕಾಶಗಳು ಈವರೆಗೂ ಸಿಕ್ಕಿಲ್ಲ ಎಂಬ ಕೊರಗು ಇದೆ. ಕನ್ನಡದ ಗಾಯಕಿಯರು ಎಂದರೆ ಏನೋ ಅಸಡ್ಡೆ ತೋರುತ್ತಾರೆ. 2 ವರ್ಷಗಳ ಕೆಳಗೆ, ಯುವ ಸಂಗೀತ ನಿರ್ದೇಶಕರೊಬ್ಬರು ಕರೆ ಮಾಡಿ ಅವರ ಚಿತ್ರದಲ್ಲಿ ಹಾಡುವಂತೆ ಕೇಳಿದರು. ನಾನು ಒಪ್ಪಿಕೊಂಡೆ. ಬಳಿಕ- “ಹಾಡಿಗೆ ಫೀಲ್ ಬರಲಿ ಎಂದು ನಿಮ್ಮಿಂದ ಹಾಡಿಸಿದ್ದೇವೆ, ಶ್ರೇಯಾ ಘೋಷಾಲ್‌ರಿಂದ ಮತ್ತೂಮ್ಮೆ ಹಾಡಿಸುತ್ತೇವೆ’ ಎಂದರು. ನನಗೆ ತುಂಬಾ ದುಃಖವಾಯಿತು. ಇಷ್ಟು ವರ್ಷ ಈ ಕ್ಷೇತ್ರದಲ್ಲಿದ್ದೇನೆ. ಆದರೂ ಟ್ರ್ಯಾಕ್ ಹಾಡಲು ಕರೆಯುತ್ತಾರಲ್ಲಾ ಎಂದು ಬೇಸರವಾಯಿತು. ಇನ್ನೊಂದು ಬೇಸರದ ವಿಷಯವೆಂದರೆ ಗಾಯಕಿಯರೂ ತೆಳ್ಳಗೆ, ಬೆಳ್ಳಗೆ, ಗ್ಲಾಮರಸ್ ಆಗಿ ಇರಬೇಕು ಅಂತ ನಿರೀಕ್ಷಿಸುತ್ತಾರೆ. ಹಾಗಿದ್ದರೆ ಮಾತ್ರ ಅವಕಾಶ ಮತ್ತು ಶೋಗಳಲ್ಲಿ ಹಾಡಲು ಕರೆಯುತ್ತಾರೆ! * ಹರಿಕೃಷ್ಣ ಸಂಗೀತ ನಿರ್ದೇಶನದ ಯಾವ ಹಾಡು ಇಷ್ಟ?
“ಗೊಂಬೆ ಹೇಳುತೈತೆ’… ಈ ಹಾಡಿನ ರೆಕಾರ್ಡಿಂಗ್ ಮುಗಿದಾಗ ಅವರು ಚೆನ್ನೈನಿಂದಲೇ ನನಗೆ ಹಾಡನ್ನು ಹೇಳಿಸಿದ್ದರು. ಹಾಡು ಕೇಳಿ ತುಂಬಾ ಸಂತೋಷವಾಗಿತ್ತು. ಅದು ಬಿಟ್ಟರೆ ಗಾಳಿಪಟದ ಎಲ್ಲಾ ಹಾಡುಗಳು ಇಷ್ಟ. * ನೀವು ಹಾಡಿದ ಹಾಡುಗಳಲ್ಲಿ ಯಾವುದು ನಿಮ್ಮ ಫೇವರಿಟ್?
ಪರಮಾತ್ಮ ಚಿತ್ರದ “ಹೆಸರು ಪೂರ್ತಿ ಹೇಳದೇ..’ ಹಾಡು. * ಅವರು ಮಾತಾಡೋದು ಭಟ್ರ ಜೊತೆ ಮಾತ್ರ!
ಮನೆಯಲ್ಲಿದ್ದರೆ ಟೀ ಕೊಡು, ತಿಂಡಿ ಕೊಡು ಎಂಬುದನ್ನು ಬಿಟ್ಟು ಹರಿಕೃಷ್ಣ ಹೆಚ್ಚು ಮಾತಾಡೋದೇ ಇಲ್ಲ. ನಾನೇ ಏನಾದರೂ ಕೇಳಿದರೆ ಅದಕ್ಕೂ ಚಿಕ್ಕದಾಗಿ ಉತ್ತರಿಸಿಬಿಡುತ್ತಾರೆ. ನನಗನ್ನಿಸುವಂತೆ ಅವರು ಹೆಚ್ಚು ಮಾತಾಡೋದು ಯೋಗರಾಜ್ ಭಟ್ಟರ ಜೊತೆ ಮಾತ್ರ. ಮಾತಾಡೋದಕ್ಕೆ ಅವರಿಗೆ ಸಮಯವೂ ಇರುವುದಿಲ್ಲ. ಆದರೆ, ಕಾಲುಗಂಟೆಗೊಮ್ಮೆ ಟೀ ಕೊಡು ಅಂತ ತಪ್ಪದೆ ಕೇಳ್ತಾರೆ. ಟೀ ಕಾರಣಕ್ಕಾದರೂ ಅವರ ಧ್ವನಿ ಕೇಳುತ್ತೀನಲ್ಲಾ ಎಂಬುದೇ ನನಗೆ ಖುಷಿ. * “ಅಯ್ಯೋ, ನೀವ್ ಬಿಡಿ… ಸ್ಟಾರ್ ಹೆಂಡ್ತಿ’
“ನೀವು ಹರಿಕೃಷ್ಣ ಅವರ ಹೆಂಡತಿ. ನಿಮ್ಮನ್ನು ಕರೆದು ಹಾಡಿಸುವುದು ಹೇಗೆ?’ ಎಂದು ಎಷ್ಟೋ ದೊಡ್ಡ ಸಂಗೀತ ನಿರ್ದೇಶಕರು ನನಗೆ ನೇರವಾಗಿಯೇ ಹೇಳಿದ್ದಾರೆ. ಇನ್ನೂ ಕೆಲವರು, ಗಂಡನೇ ಅಷ್ಟು ದೊಡ್ಡ ಸಂಗೀತ ನಿರ್ದೇಶಕ. ನಿಮಗೆ ಅವಕಾಶಕ್ಕೇನು ಕೊರತೆ? ಎನ್ನುತ್ತಾರೆ. ಆದರೆ, ಹರಿಕೃಷ್ಣ ಕೂಡ ನನ್ನನ್ನು ಅವರ ಸಿನಿಮಾದಲ್ಲಿ ಹಾಡಿಸುವುದಿಲ್ಲ. ಹೆಂಡತಿಗೇ ಹೆಚ್ಚು ಅವಕಾಶ ಕೊಡುತ್ತಾನೆ ಎಂದು ಯಾರಾದರೂ ಆಕ್ಷೇಪಿಸಿದರೆ ಎಂಬ ಆತಂಕ ಅವರಿಗೆ.
*ಮನೆ ಬಿಟ್ಟು ಹೋಗ್ತಿನಿ ಅಂತ ಹೆದರಿಸ್ತಿದ್ದೆ
*ಬರೀ ಸಂಗೀತ ಅಷ್ಟೇನಾ? ನೀರು, ಕರೆಂಟ್, ಗ್ಯಾಸ್ ಬಿಲ್ಲೂ ಕಟೆºàಕಲ್ಲ!
*ರೆಸ್ಟೋರೆಂಟ್‌ಗೆ ಹೋಗೋದೇ ಟೂರು! * ಚೇತನ ಜೆ.ಕೆ.