ಗಾಂಧಿನಗರ : ಮುಂಬೈ-ಗಾಂಧಿನಗರ ನಡುವಿನ ಸೆಮಿ-ಹೈ-ಸ್ಪೀಡ್ ವಂದೇ ಭಾರತ್ ರೈಲಿಗೆ ಸತತ 2ನೇ ದಿನವೂ ಜಾನುವಾರುಗಳ ಹಿಂಡು ಢಿಕ್ಕಿ ಹೊಡೆದಿದೆ.
ಎರಡನೆ ಬಾರಿ ಜಾನುವಾರುಗಳು ಗುದ್ದಿದ್ದು ರೈಲಿನ ಮುಂಭಾಗದ ಭಾಗಕ್ಕೆ ಸಣ್ಣ ಡೆಂಟ್ ಆಗಿದೆ ಎಂದು ರೈಲ್ವೆ ಅಧಿಕೃತ ಪ್ರಕಟಣೆ ತಿಳಿಸಿದೆ.
ಸೆಪ್ಟೆಂಬರ್ 30 ರಂದು ಲೋಕಾರ್ಪಣೆ ಗೊಳಿಸಲಾಗಿದ್ದ ಮುಂಬಯಿ ಸೆಂಟ್ರಲ್-ಗಾಂಧಿನಗರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಗೈರತ್‌ಪುರ ಮತ್ತು ವತ್ವಾ ನಿಲ್ದಾಣಗಳ ನಡುವೆ ಗುರುವಾರ(ಅ. 6 )ಬೆಳಗ್ಗೆ 11.20ರ ಸುಮಾರಿಗೆ ಸಂಚರಿಸುತ್ತಿದ್ದಾಗ ಎಮ್ಮೆಗಳ ಹಿಂಡು ಢಿಕ್ಕಿಯಾಗಿ ರೈಲಿನ ಮುಂಭಾಗಕ್ಕೆ ಹಾನಿಯಾಗಿತ್ತು.ರೈಲು ಗಾಂಧಿನಗರ ಕ್ಯಾಪಿಟಲ್ ನಿಲ್ದಾಣಕ್ಕೆ ಮತ್ತು ಮತ್ತೆ ಮುಂಬೈ ಸೆಂಟ್ರಲ್‌ಗೆ ಪ್ಯಾನೆಲ್ ಇಲ್ಲದೆ ಪ್ರಯಾಣಿಸಿತ್ತು.
ಇದನ್ನೂ ಓದಿ : ವಂದೇ ಭಾರತ್ ರೈಲಿಗೆ ಢಿಕ್ಕಿಯಾದ ಎಮ್ಮೆಗಳ ಮಾಲೀಕರ ವಿರುದ್ಧ ಎಫ್ ಐಆರ್
ಘಟನೆ ಕುರಿತು ಮಾತನಾಡಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, “ದೇಶದ ಎಲ್ಲಾ ರೈಲ್ವೆ ಹಳಿಗಳು ಇನ್ನೂ ನೆಲದ ಮೇಲೆ, ಮೇಲ್ಮೈಯಲ್ಲಿವೆ. ಜಾನುವಾರುಗಳ ಸಮಸ್ಯೆ ಹೀಗೆ ಮುಂದುವರೆದಿದೆ. ಆದರೆ, ಅಂತಹ ಸಮಸ್ಯೆಗಳನ್ನು ನಿಭಾಯಿಸಲು ರೈಲುಗಳನ್ನು ವಿನ್ಯಾಸಗೊಳಿಸಲಾಗುತ್ತಿದೆ. ನಿನ್ನೆ ಘಟನೆಯ ನಂತರವೂ ಏನೂ ಆಗಿಲ್ಲ. ವಂದೇ ಭಾರತ್ ರೈಲಿನ ಮುಂಭಾಗವನ್ನು ದುರಸ್ತಿ ಮಾಡಲಾಗಿದೆ ಎಂದಿದ್ದಾರೆ.