Advertisement

Kota: ರಾತ್ರಿ ವೇಳೆ ಪೈರಿಂಗ್‌ ಸದ್ದು: ಕಾಡುಕೋಣ ಭೇಟಿ ಅನುಮಾನ

07:38 AM Sep 14, 2024 | Team Udayavani |

ಕೋಟ: ವಂಡಾರಿನಲ್ಲಿ ಗುರುವಾರ ರಾತ್ರಿ ಪೈರಿಂಗ್‌ ಸದ್ದು ಕೇಳಿದ್ದು, ಸ್ಥಳದಲ್ಲಿ ಯಾವುದೋ ಪ್ರಾಣಿಯ ಕಳೇಬರ ಪತ್ತೆಯಾಗಿದೆ. ಹೀಗಾಗಿ ದುಷ್ಕರ್ಮಿಗಳು ರಾತ್ರಿ ಕಾಡುಕೋಣವನ್ನು ಭೇಟೆಯಾಡಿ ಮಾಂಸಕ್ಕಾಗಿ ಹೊತ್ತೂಯ್ದಿದ್ದಾರೆ ಎನ್ನುವ ಅನುಮಾನವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

Advertisement

ರಾತ್ರಿ 3 ಗಂಟೆ ಸುಮಾರಿಗೆ ನಾಡ ಕೋವಿಯ ಪೈರಿಂಗ್‌ ಸದ್ದು ಕೇಳಿದ್ದು, ಬೆಳಗ್ಗೆ ಸ್ಥಳಕ್ಕೆ ತೆರಳಿ ನೋಡುವಾಗ ಯಾವುದೋ ಪ್ರಾಣಿಯ ಕರುಳು, ಮಾಂಸ, ಸಗಣಿ ಕಂಡುಬಂದಿದೆ. ಹೀಗಾಗಿ ಕಾಡುಕೋಣವನ್ನೇ ಭೇಟೆಯಾಡಲಾಗಿದೆ ಎಂದು ಸ್ಥಳೀಯ ಪ್ರದೇಶದಲ್ಲಿ ಸುದ್ದಿ ಹಬ್ಬಿದೆ. ಈ ಪರಿಸರದಲ್ಲಿ ಕಾಡುಕೋಣಗಳ ಹಾವಳಿ ತೀವ್ರವಾಗಿದ್ದು, ಹಗಲಿನಲ್ಲೂ ಹಲವು ಕಡೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದವು. ಹೀಗಾಗಿ ಸ್ಥಳೀಯರಲ್ಲಿ ಈ ಅನುಮಾನ ವ್ಯಕ್ತವಾಗಿದೆ.

ತಪಾಸಣೆ ಬಳಿಕ ಮಾಹಿತಿ
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯಾಧಿಕಾರಿಗಳು, ಪಶುವೈದ್ಯರೊಂದಿಗೆ ಆಗಮಿಸಿ ಸ್ಥಳದಲ್ಲಿದ್ದ ಕಳೇಬರದ ಭಾಗಗಳನ್ನು ಸಂಗ್ರಹಿಸಿ ಹೆಚ್ಚಿನ ತಪಾಸಣೆಗಾಗಿ ಎಫ್‌.ಎಸ್‌.ಎಲ್‌.ಗೆ ಕಳುಹಿಸಿದ್ದಾರೆ. ವೈದ್ಯಕೀಯ ವರದಿ ಕೈಸೇರಿದ ಮೇಲೆ ಯಾವ ಪ್ರಾಣಿ ಇರಬಹುದು ಎನ್ನುವ ಬಗ್ಗೆ ನಿಖರ ಮಾಹಿತಿ ಸಿಗಲಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಕ್ರಮಕ್ಕೆ ಆಗ್ರಹ
ಭೇಟೆಯಾಡಿದ ಪ್ರಾಣಿ ಕಾಡುಕೋಣ ಎಂದು ವೈದ್ಯಕೀಯ ವರದಿಯಲ್ಲಿ ಸಾಬೀತಾದರೆ ಈ ಅಕ್ರಮ ಬೇಟೆಯನ್ನು ಯಾರು ನಡೆಸಿದ್ದಾರೆ ಎಂದು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next