Advertisement

ಈ ರಸ್ತೆಯ ವನವಾಸ ಇನ್ನೂ ಮುಗಿದಿಲ್ಲ ; ಯಾತ್ರಿಕರ ಗೋಳು ತಪ್ಪಿಲ್ಲ

09:56 AM Nov 10, 2019 | mahesh |

ಈ ಸರಣಿ ಆರಂಭಿಸಿರುವುದು ನಮ್ಮ ಪ್ರಮುಖ ರಸ್ತೆಗಳ ಸಚಿತ್ರ ದರ್ಶನ ನೀಡಲೆಂದೇ. ರಾಜ್ಯ ಹೆದ್ದಾರಿ ಸೇರಿದಂತೆ ಜಿಲ್ಲಾ ಪಂಚಾಯತ್‌ನ ಹಲವು ರಸ್ತೆಗಳು ಇಂದು ಸಂಚಾರಕ್ಕೆ ಅಯೋಗ್ಯವಾಗಿವೆ. ಈ ಮಾತು ದಕ್ಷಿಣ ಕನ್ನಡ ಮತ್ತು ಉಡುಪಿ ಎರಡೂ ಜಿಲ್ಲೆಗಳಿಗೆ ಅನ್ವಯ. ಉದಯವಾಣಿಯ ವರದಿಗಾರರು ಈ ಹದಗೆಟ್ಟ ರಸ್ತೆಗಳಲ್ಲಿ ತಿರುಗಾಡಿ, ಸ್ಥಳೀಯರನ್ನು ಮಾತನಾಡಿಸಿ ರಸ್ತೆಗಳ ವಾಸ್ತವ ಸ್ಥಿತಿಯನ್ನು ಓದುಗರ ಎದುರು ತೆರೆದಿಡುವ ಪ್ರಯತ್ನವಿದು. ಲೋಕೋಪಯೋಗಿ ಇಲಾಖೆ ಕೂಡಲೇ ಜನರ ಗೋಳನ್ನು ಆಲಿಸಿ ಪರಿಹಾರ ಕಲ್ಪಿಸಬೇಕೆಂಬುದು ಜನಾಗ್ರಹ.

Advertisement

ಸುಬ್ರಹ್ಮಣ್ಯ: ರಾಜ್ಯದ ಶ್ರೀಮಂತ ಧಾರ್ಮಿಕ ಕ್ಷೇತ್ರವಾದ ಸುಬ್ರಹ್ಮಣ್ಯಕ್ಕೆ ಸಂಪರ್ಕ ಕಲ್ಪಿಸುವ ಗುಂಡ್ಯ-ಸುಬ್ರಹ್ಮಣ್ಯ ರಸ್ತೆಯಲ್ಲಿ ಪ್ರಯಾಣಿಸಲು ಗಟ್ಟಿ ಗುಂಡಿಗೆ ಇರಬೇಕು.
ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಗುಂಡ್ಯದಲ್ಲಿ ಕವಲೊಡೆದು ಸುಬ್ರಹ್ಮಣ್ಯ ಕಡೆಗೆ ಸಾಗುತ್ತದೆ. ಇದು ರಾಜ್ಯ ಹೆದ್ದಾರಿ. ಕ್ಷೇತ್ರಕ್ಕೆ ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಆಗಮಿಸುವವರೆಲ್ಲರೂ ಇದೇ ರಸ್ತೆಯನ್ನು ಬಳಸುತ್ತಾರೆ. ಹೆಚ್ಚು ಸಂಚಾರ ದಟ್ಟಣೆ ಇರುವ ರಸ್ತೆಯಲ್ಲಿ ಇರುವುದು ಬರೀ ಹೊಂಡಗಳೇ. ಸಂಚಾರಕ್ಕೆ ಅಯೋಗ್ಯವಾದ ಈ ರಸ್ತೆ 12 ವರ್ಷಗಳ ಹಿಂದೆ ಡಾಮರೀ ಕರಣಗೊಂಡಿತ್ತು. ಬಳಿಕ ಬರೀ ತೇಪೆಯಷ್ಟೇ ಕಂಡದ್ದು.

ಗುಂಡ್ಯದಿಂದ – ಸುಬ್ರಹ್ಮಣ್ಯ ತನಕದ 15 ಕಿ. ಮೀ. ರಸ್ತೆ ತಿರುವಿನಿಂದ ಕೂಡಿದೆ. ರಸ್ತೆಯೂ ಕಿರಿದಾಗಿದ್ದು ಅಪ ಘಾತಗಳು ಸಂಭವಿಸುತ್ತವೆ. ಭಾಗ್ಯ, ಮಣಿಭಂಡ, ವೆಂಕಟಾಪುರ, ಕುಲ್ಕುಂದ, ಕುಮಾರಧಾರೆ ತಿರುವುಗಳ ಸ್ಥಳಗಳಲ್ಲಿ ರಸ್ತೆ ಅತೀ ಹೆಚ್ಚು ಹಾನಿಯಾಗಿದೆ. ಈಗ ಜಲ್ಲಿ ತುಂಬಿ ತೇಪೆ ಹಾಕಲಾಗುತ್ತಿದೆ.
ಗುಂಡ್ಯ-ಕೈಕಂಬ ತನಕ 7 ಕೋ. ರೂ. ಅನು ದಾನ ರಸ್ತೆ ವಿಸ್ತರಣೆಗೆ ಈಗಾಗಲೆ ಅನುದಾನ ಮೀಸಲಿಡಲಾಗಿದೆ. ಈ ರಸ್ತೆಯನ್ನು ಕಾಂಕ್ರೀಟಿಕರಣಗೊಳಿಸಿ ಚತುಷ್ಪಥ ರಸ್ತೆಯನ್ನಾಗಿಸಲು ಸರಕಾರಕ್ಕೆ ಈ ಹಿಂದೆಯೇ ಪ್ರಸ್ತಾವನೆ ಕಳುಹಿಸ ಲಾಗಿದೆ. ಆದರೂ ಸರ್ವೆ ಕಾರ್ಯ ಆಗಿಲ್ಲ. ಅನುಮೋದನೆಯೂ ಸಿಕ್ಕಿಲ್ಲ. ಹಾಗಾಗಿ ಇದೇ ಸ್ಥಿತಿ.

ಈ ಹೆದ್ದಾರಿ ಪೈಕಿ ಸುಬ್ರಹ್ಮಣ್ಯ-ಕೈಕಂಬ ನಡುವಿನ ಹೆದ್ದಾರಿಯು ಉಡುಪಿ ರಾಜ್ಯ ಹೆದ್ದಾರಿ ವಲಯದ 37 ವ್ಯಾಪ್ತಿಗೆ ಬರುತ್ತದೆ. ಉಡುಪಿ – ಮಂಗಳೂರು – ಧರ್ಮಸ್ಥಳ – ಮೈಸೂರು ಸಂಪರ್ಕ ರಸ್ತೆಯಿದು. ಕೈಕಂಬ ಜಂಕ್ಷನ್‌ನಲ್ಲಿ ಸೇರುತ್ತದೆ. ಕೈಕಂಬ-ಕುಲ್ಕುಂದ ತನಕ ಲೋಕೋಪಯೋಗಿ ಇಲಾಖೆ ಪುತ್ತೂರು ವ್ಯಾಪ್ತಿಗೆ ಬಂದರೆ ಕುಲ್ಕುಂದ- ಸುಬ್ರಹ್ಮಣ್ಯ ತನಕದ ರಸ್ತೆ ಸುಳ್ಯ ಕಚೇರಿ ವ್ಯಾಪ್ತಿಗೆ ಬರುತ್ತದೆ. ಇಲ್ಲೇ ಹೆಚ್ಚು ರಸ್ತೆ ಹಾಳಾಗಿದೆ.  ಕೈಕಂಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ 114ರಲ್ಲಿ 4 ಕಿ.ಮೀ. ಅಂತರವಿದೆ. ಕೈಕಂಬದಿಂದ ಸುಬ್ರಹ್ಮಣ್ಯ ತನಕ ರಸ್ತೆ ಅಭಿವೃದ್ಧಿಗೆ 80 ಲಕ್ಷ ರೂ. ಅನುದಾನ ಮೀಸಲಿಡಲಾಗಿದೆ.

ವೆಂಕಟಾಪುರದಿಂದ ಕುಲ್ಕುಂದ ತನಕ ರಸ್ತೆ ಅಪಾಯಕಾರಿಯಾಗಿದ್ದು, ತಿರುವಿನಿಂದ ಕೂಡಿದೆ. ಅನೇಕ ಅಪಘಾತಗಳು ಇಲ್ಲೇ ಸುತ್ತಮುತ್ತ ನಡೆದಿವೆ. ಈ ರಸ್ತೆಯ ಎತ್ತರ ಸಮತಟ್ಟುಗೊಳಿಸಿ, ತಿರುವುಗಳನ್ನು ನೇರ ರಸ್ತೆಯಾಗಿಸಬೇಕಿದೆ. ಇದಿಷ್ಟು ಭಾಗವನ್ನು ಅಪಘಾತ ವಲಯ ಎಂದು ಗುರುತಿಸಿದ್ದು ಸರಕಾರಕ್ಕೆ ಪ್ರಸ್ತಾವನೆ ಹೋಗಿದೆ.

Advertisement

ಬೆಂಗಳೂರು- ಮಂಗಳೂರು- ಧರ್ಮಸ್ಥಳ ಕಡೆಯಿಂದ ಸುಬ್ರಹ್ಮಣ್ಯ ತಲುಪುವವರು ಈ ರಸ್ತೆಯಲ್ಲಿ ಸಂಚರಿಸುತ್ತಾರೆ. ಸುಬ್ರಹ್ಮಣ್ಯದಿಂದ ಕೈಕಂಬ ಜಂಕ್ಷನ್‌ ಮೂಲಕ ಮಂಗಳೂರು ಹಾಗೂ ಧರ್ಮಸ್ಥಳಕ್ಕೆ ತೆರಳುವವರಿಗೆ ಈ ರಸ್ತೆ ಪ್ರಯೋಜನಕಾರಿ. ಘನ-ಲಘು ವಾಹನಗಳು ನಿತ್ಯ ಸಂಚರಿಸುತ್ತಿದ್ದು, ಸಮಸ್ಯೆ ತೀವ್ರತೆ ಯನ್ನು ಹೆಚ್ಚಿಸಿದೆ. ಆರು ಕಿರು ಹಾಗೂ 3 ಘನ ಸೇತುವೆಗಳು ಹೆದ್ದಾರಿಯಲ್ಲಿ ಇದ್ದು ಅವುಗಳ ಬದಿ ತಡೆಗೋಡೆಗಳಿಲ್ಲದೆ ಅನಾಹುತಗಳು ಸಂಭವಿಸುತ್ತಿವೆ.

ಅತಿ ಹೆಚ್ಚು ಹಾಳಾಗಿರುವುದು ಎಲ್ಲೆಲ್ಲಿ?
ಭಾಗ್ಯ, ಮಣಿಭಂಡ ತಿರುವುಗಳ ಬಳಿ
ಕುಮಾರಧಾರೆ ತಿರುವು ಹತ್ತಿರ
ವೆಂಕಟಾಪುರ-ಕುಲ್ಕುಂದ ಬಳಿ

ಎಚ್ಚರಿಕೆ ವಹಿಸಬೇಕಾದ ಅಂಶಗಳು
ಹದಿನೈದು ಕಿ.ಮೀ ನಲ್ಲಿ ತಿರುವುಗಳೇ ಹೆಚ್ಚು
ಅಲ್ಲಲ್ಲಿ ಅಪಘಾತ ವಲಯಗಳು
ಘನ ವಾಹನಗಳ ಹಾವಳಿ
ಸೇತುವೆಗಳಿಗೆ ತಡೆಗೋಡೆಗಳೇ ಇಲ್ಲ

ಚತುಷ್ಪಥ ರಸ್ತೆಯೇ ಪರಿಹಾರ
ಹೆದ್ದಾರಿಯಲ್ಲಿ ತಿರುವುಗಳಿವೆ. ಅಲ್ಲೆಲ್ಲ ಸಿಗ್ನಲ್‌ ಲೈಟ್‌ಗಳನ್ನು ಅಳವಡಿಸಬೇಕು. ರಸ್ತೆ ಎತ್ತರ ತಗ್ಗು ಇರುವುದರಿಂದ ನೇರ ರಸ್ತೆಯಾಗಿಸಿ ಗುಂಡ್ಯದಿಂದ ಇಲ್ಲಿ ತನಕ ರಸ್ತೆ ಬದಿ ಬೆಳಕಿನ ವ್ಯವಸ್ಥೆ ಕಲ್ಪಿಸಬೇಕು. ಚತುಷ್ಪಥ ರಸ್ತೆಯಾಗಿ ಮೇಲ್ದರ್ಜೆಗೇರಬೇಕು
 -ಅಶೋಕ್‌ ಎನ್‌., ಪ್ರಯಾಣಿಕ

ಒಮ್ಮೆಯೇ ಡಾಮರಾಗಿದ್ದು
ಹತ್ತು ವರ್ಷಗಳ ಹಿಂದೆ ಈ ರಸ್ತೆಗೆ ಡಾಮರು ಆಗಿದೆ ಬಳಿಕ ತೇಪೆಯಷ್ಟೆ ನಡೆಸುತ್ತ ಬಂದಿರುವುದು. ನಿತ್ಯವೂ ಸಹಸ್ರಾರು ವಾಹನಗಳು ಈ ಮಾರ್ಗವಾಗಿ ತೆರಳುತ್ತಿರುವುದರಿಂದ ಅಗತ್ಯವಾಗಿ ಈ ರಸ್ತೆಯನ್ನು ಮೇಲ್ದರ್ಜೆಗೇರಿಸಬೇಕಿದೆ.
-ಪುರುಷೋತ್ತಮ ಕೊಂಬಾರು, ಸ್ಥಳೀಯ

ಬಾಡಿಗೆಗೆ ಹೋಗಲಾಗುತ್ತಿಲ್ಲ
ಕುಕ್ಕೆ ಕ್ಷೇತ್ರಕ್ಕೆ ಬಂದ ಭಕ್ತರು ನ್ಯಾಶನಲ್‌ ಹೈವೇ ಸೇರುವ ಗುಂಡ್ಯಕ್ಕೆ ಬಿಡುವಂತೆ ಅಟೋ ಬಾಡಿಗೆಗೆ ಗೊತ್ತುಪಡಿಸಿ ತೆರಳುತ್ತಾರೆ. ಈ ವೇಳೆ ರಸ್ತೆ ಸರಿ ಯಿಲ್ಲದೆ ಹೋಗುವುದಕ್ಕೆ ಮನಸ್ಸು ಬರುತ್ತಿಲ್ಲ. ಹೊಂಡ ಗುಂಡಿಗಳ ರಸ್ತೆಯಲ್ಲಿ ಚಾಲನೆ ಮಾಡಲು ಕಷ್ಟ.
ಹೊನ್ನಪ್ಪ , ಆಟೋ ಚಾಲಕ

ಯಾತ್ರಿಕರು ಗೋಳು ಹೇಳುತ್ತಿರುತ್ತಾರೆ
ಹತ್ತಾರು ವರ್ಷಗಳಿಂದ ಹೊಟೇಲು ನಡೆಸುತ್ತಿದ್ದೇನೆ. ಈ ಹೆದ್ದಾರಿ ರಸ್ತೆಯಲ್ಲಿ ಪ್ರಯಾಣಿಸುವವರೆಲ್ಲರೂ ನನ್ನ ಮಿನಿ ಹೊಟೇಲಿಗೆ ಲಘು ಉಪಾಹಾರಕ್ಕೆಂದು ಬರುತ್ತಿರುತ್ತಾರೆ. ಅವರೆಲ್ಲರೂ ರಸ್ತೆ ಅಸಮರ್ಪಕ ಬಗ್ಗೆ ಗೋಳು ಹೇಳುತ್ತಿರುತ್ತಾರೆ.
ಸಂತೋಷ್‌ ಕಳಿಗೆ, ಮಿನಿ ಕ್ಯಾಂಟಿನ್‌

Advertisement

Udayavani is now on Telegram. Click here to join our channel and stay updated with the latest news.

Next