ಮಂಗಳೂರು: ಪರಿಸರ ಸಂರಕ್ಷಣೆ ನಮ್ಮೆಲ್ಲರ ಸಾಮಾಜಿಕ ಜವಾಬ್ದಾರಿಯಾಗಿದೆ ಎಂದು ಮಂಗಳೂರು ವಿಭಾಗ ಅರಣ್ಯ ಇಲಾಖೆಯ ಎ.ಸಿ.ಎಫ್ ಪಿ. ಶ್ರೀಧರ್ ಹೇಳಿದ್ದಾರೆ.
ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿ (ಎಂ.ಐ. ಒ) ಸ್ಪೆಷಾಲಿಟಿ ಕ್ಯಾನ್ಸರ್ ಆಸ್ಪತ್ರೆ ಪಂಪ್ ವೆಲ್ ಹಾಗೂ ಕರ್ನಾಟಕ ಅರಣ್ಯ ಇಲಾಖೆ ಮಂಗಳೂರು ವಿಭಾಗದ ಸಹಯೋಗದಲ್ಲಿ ನಡೆದ ಸಹಸ್ರ ವೃಕ್ಷಾಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಪರಿಸರ ಸಂರಕ್ಷಣೆ ನಮ್ಮೆಲ್ಲರ ಸಾಮಾಜಿಕ ಜವಾಬ್ದಾರಿಯಾಗಿದೆ. ಕ್ಯಾನ್ಸರ್ ಭಾದಿತರಿಗೆ ಮತ್ತವರ ಆರೈಕೆದಾರರಿಗೆ ವೃಕ್ಷ ನೀಡಿ ಅದರಂತೆ ಅವರ ಜೀವನವು ಹಸಿರಾಗಲಿ ಎಂದು ಆಶಿಸುವುದು ಚಿಕಿತ್ಸೆಯಷ್ಟೇ ಶ್ರೇಷ್ಠ ಕೆಲಸ ಎಂದರು.
ಬಳಿಕ ಮಾತನಾಡಿದ ಎಂ.ಐ. ಒ ನಿರ್ದೇಶಕರಾದ ಡಾ.ಸುರೇಶ್ ರಾವ್ ಪರಿಸರ ಸಂರಕ್ಷಣೆಗೆ ಮರಗಿಡಗಳ ಉಳಿವಿಗೆ ಅರಣ್ಯ ಇಲಾಖೆ ಮಾಡುತ್ತಿರುವ ಈ ಎಲ್ಲ ಕಾರ್ಯಗಳು ಬಹಳಷ್ಟು ಮಹತ್ವದ್ದಾಗಿದ್ದು ಪ್ರತ್ತಿಯೊಬ್ಬರು ಅವರವರ ಜವಾಬ್ದಾರಿಯನ್ನು ಅರಿತು ಹೆಜ್ಜೆ ಇಡಬೇಕು ಎಂದರು.
ಕಾರ್ಯಕ್ರಮದಲ್ಲಿ ಎಂ.ಐ ಒ ರೇಡಿಯೇಷನ್ ಆಂಕಾಲಜಿಸ್ಟ್ ಡಾ.ವೆಂಕಟ್ರಮನ್ ಕಿಣಿ, ಅರಣ್ಯ ಇಲಾಖೆಯ ಡಿ.ಆರ್.ಎಫ್.ಒ ಸಂಜಯ್, ಬೀಟ್ ಫಾರೆಸ್ಟರ್ ಶ್ರೀಮತಿ ವೀಣಾ, ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶ್ರೀ.ರಾಜೇಶ್ ಶೆಟ್ಟಿ ಎಂ.ಐ. ಒ ಕಾರ್ಯಕ್ರಮ ನಿರೂಪಿಸಿದರು.
ಇದನ್ನೂ ಓದಿ: ಬಜೆಟ್: ಹುಸಿಯಾದ ಕೊಬ್ಬರಿ ಬೆಳೆಗಾರರ ನಿರೀಕ್ಷೆ