Advertisement

Rice: ಅನ್ನವೇ ಚಿನ್ನ ವ್ಯರ್ಥ ಮಾಡದಿರಿ… ಆಹಾರದ ಹಿಂದಿದೆ ರೈತರ ಪರಿಶ್ರಮ

03:49 PM Oct 15, 2023 | Team Udayavani |

“ಆಹಾರವೇ ನಿಮ್ಮ ಔಷಧವಾಗಿರಲಿ; ಔಷಧವೇ ನಿಮ್ಮ ಆಹಾರವಾಗದಿರಲಿ’ ಎಂದು ಹಿಪ್ಪೊಕ್ರೇಟ್ಸ್‌ ಹೇಳಿದ ಮಾತು ನಿಜಕ್ಕೂ ಅಕ್ಷರಶಃ ಸತ್ಯ. ಆಹಾರ ಪ್ರತಿಯೊಂದು ಜೀವಿಗೂ ಮೂಲಭೂತ ಆವಶ್ಯಕತೆಗಳಲ್ಲಿ ಒಂದು. ಉತ್ತಮ ಆಹಾರವು ಮನುಷ್ಯನ ಮುಖದ ಮೇಲೆ ನಗುವನ್ನು ಪ್ರಕಾಶಿಸುವಂತೆ ಮಾಡುತ್ತದೆ.

Advertisement

ಆಹಾರ ಮನುಷ್ಯನ ಜೀವನಕ್ಕೆ ಅತ್ಯಮೂಲ್ಯವಾಗಿದ್ದರೂ, ಇಂದಿಗೂ ಲಕ್ಷಾಂತರ ಜನರು ಹಸಿವಿನಿಂದ ನರಳುತ್ತಿದ್ದಾರೆ. ಇದಕ್ಕೆ ಕಾರಣ ಉಳಿದವರು ಮಾಡುತ್ತಿರುವ ಆಹಾರದ ಪೋಲು ಎಂದರೆ ತಪ್ಪಿಲ್ಲ. ನಾವು ಪ್ರತಿನಿತ್ಯ ಆಹಾರ ಹಾಳು ಮಾಡುವ ಮೊದಲು ಇದೇ ಆಹಾರ ಹಸಿದವರ ಹೊಟ್ಟೆ ತುಂಬಿಸುತ್ತಿತ್ತು ಎಂಬುದನ್ನು ಎಂದಿಗೂ ಮರೆಯಬಾರದು. ಆಹಾರದ ಪೋಲನ್ನು ಕಡಿಮೆಮಾಡಲು, ಆಹಾರದ ಮಹತ್ವದ ಕುರಿತು ಅರಿವು ಮೂಡಿಸುವ ಸಲುವಾಗಿಯೇ ಪ್ರತೀವರ್ಷ ವಿಶ್ವಾದ್ಯಂತ ಅಕ್ಟೋಬರ್‌ 16ರನ್ನು “ವಿಶ್ವ ಆಹಾರ ದಿನ’ ವನ್ನಾಗಿ ಆಚರಿಸಲಾಗುತ್ತಿದೆ.

ಭೂಮಿಯ ಮೇಲಿನ ಪ್ರತಿಯೊಬ್ಬರಿಗೂ ಆಹಾರ ಸೇವಿಸುವ ಹಕ್ಕಿದೆ. ಸಮೀಕ್ಷೆಯೊಂದರ ಪ್ರಕಾರ ಜಗತ್ತಿನಲ್ಲಿ ಪ್ರತೀ ವರ್ಷ 5 ದಶಲಕ್ಷ ಮಕ್ಕಳು ಹಸಿವಿನಿಂದ ಸಾವಿಗೀಡಾಗುತ್ತಿ¨ªಾರೆ. ಈ ಪೈಕಿ 5 ವರ್ಷದ ಒಳಗಿನ ಮಕ್ಕಳೇ ಹೆಚ್ಚು. ಇದಕ್ಕೆ ಕಾರಣ ಮಕ್ಕಳಿಗೆ ಪೌಷ್ಟಿಕ ಆಹಾರದ ಕೊರತೆ. ಬಡ ರಾಷ್ಟ್ರಗಳಲ್ಲಿ ಶೇ. 50ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಹಾಗಾಗಿ ವಿಶ್ವ ಆಹಾರ ದಿನದಡಿಯಲ್ಲಿ 40 ದೇಶಗಳಲ್ಲಿ ಹಸಿವಿನಿಂದ ಬಳಲುವವರ ಸಂಖ್ಯೆಯನ್ನು ಕಡಿಮೆ ಮಾಡಲು ಪಣ ತೊಡಲಾಗಿದೆ. ಸೆಂಟ್ರಲ್‌ ಆಫ್ರಿಕನ್‌ ರಿಪಬ್ಲಿಕ್‌, ಚಾದ್‌, ಯೆಮೆನ್‌, ಮಡಗಾಸ್ಕರ್‌, ಸಿರಿಯಾ, ಜಾಂಬಿಯಾ, ಸಿಯೆರಾ ಲಿಯೋನ್‌, ಹೈಟಿ, ಸೂಡಾನ್‌, ಅಫ್ಘಾನಿಸ್ಥಾನ ಆಹಾರ ಸಮಸ್ಯೆ ಎದುರಿಸುತ್ತಿರುವ ಪ್ರಮುಖ ದೇಶಗಳಾಗಿವೆ.

ಆಹಾರ ತ್ಯಾಜ್ಯವನ್ನು ಕಡಿಮೆ ಮಾಡಲು ಏನು ಮಾಡಬೇಕು?
ಆಹಾರ ತ್ಯಾಜ್ಯ ಕಡಿಮೆ ಮಾಡುವಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆ ಹೇಳುತ್ತದೆ. ಪ್ರತಿಯೊಬ್ಬರೂ ಆರೋಗ್ಯಕರ ಆಹಾರವನ್ನು ಸೇವಿಸಿ, ಈ ಮೂಲಕ ಆರೋಗ್ಯಕರ ದೇಹ ಮತ್ತು ಪರಿಸರವನ್ನು ಕಾಪಾಡಿಕೊಳ್ಳಬೇಕು. ಉತ್ಪನ್ನಗಳನ್ನು ಆಯ್ಕೆ ಮಾಡುವ ಮೊದಲು ಲೇಬಲ್‌ ಮತ್ತು ಪ್ಯಾಕೇಜಿಂಗ್‌ ಅನ್ನು ಎಚ್ಚರಿಕೆಯಿಂದ ಓದಬೇಕು. ಆಹಾರ ಸಂಗ್ರಹಣೆಯನ್ನು ಸುಧಾರಣೆ ಮಾಡುವುದರ ಮೂಲಕ ಆಹಾರ ವ್ಯರ್ಥವಾಗದಂತೆ ನೋಡಿಕೊಳ್ಳಬೇಕು. ಸಾಧ್ಯವಾದಷ್ಟು ಮರುಬಳಕೆ ಮಾಡಿ. ಉಳಿದ ಆಹಾರದಿಂದ ಗೊಬ್ಬರ ತಯಾರಿಸಲು ಪ್ರಯತ್ನಿಸಬೇಕು. ಸ್ಥಳೀಯ ಪರಿಸರ ವ್ಯವಸ್ಥೆಗಳನ್ನು ಪೋಷಿಸಲು ಸಣ್ಣ ರೈತರು ಮತ್ತು ಸ್ಥಳೀಯ ಉತ್ಪಾದಕರನ್ನು ಬೆಂಬಲಿಸಬೇಕು.

ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡುವ ರೈತರು, ಕಾರ್ಮಿಕರು, ಮಹಿಳೆಯರು, ವಲಸಿಗರು ಮತ್ತು ನಗರಗಳಲ್ಲಿ ದುಡಿಯುವ ಅತ್ಯಂತ ದುರ್ಬಲ ವರ್ಗದ ಜನರಿಗೆ ಅನುಕೂಲವಾಗುವ ಸಾರ್ವಜನಿಕ ನೀತಿಗಳನ್ನು ಉತ್ತೇಜಿಸಿ, ಪ್ರತೀ ಮಗುವಿನಿಂದ ವೃದ್ಧರವರೆಗೆ ಆಹಾರ ಸಿಗುವಂತೆ ನೋಡಿಕೊಳ್ಳಬೇಕಾಗಿರುವುದು ನಮ್ಮ ಸರಕಾರಗಳ ಕರ್ತವ್ಯವಾಗಬೇಕು ಹಾಗೂ ನಾವು ಸಹ ತಿನ್ನುವ ಆಹಾರವನ್ನು ಪೋಲು ಮಾಡದಂತೆ ಸರಿಯಾಗಿ ಬಳಸಿಕೊಳ್ಳಬೇಕು.

Advertisement

2023ರ ಧ್ಯೇಯ
“ನೀರು ಜೀವ, ನೀರೇ ಆಹಾರ. ಯಾರನ್ನೂ ಹಿಂದೆ ಬಿಡಬೇಡಿ’. ಭೂಮಿಯ ಮೇಲಿನ ಜೀವನಕ್ಕೆ ನೀರಿನ ನಿರ್ಣಾಯಕ ಪಾತ್ರದ ಕುರಿತು ಒತ್ತಿ ಹೇಳುವುದು ಈ ವರ್ಷದ ಉದ್ದೇಶ.

ಹಿನ್ನೆಲೆ
ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್ಎಒ) 1979ರಲ್ಲಿ ಮೊದಲ ಬಾರಿಗೆ ವಿಶ್ವ ಆಹಾರ ದಿನವನ್ನು ಗುರುತಿಸಿತು. ಅಕ್ಟೋಬರ್‌ 16, 1945ರಲ್ಲಿ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ಸ್ಥಾಪನೆಗೊಂಡ ದಿನದ ಸ್ಮರಣಾರ್ಥವಾಗಿ ಪ್ರತೀ ವರ್ಷ ಅ. 16ರನ್ನು ವಿಶ್ವ ಆಹಾರ ದಿನವಾಗಿ ಆಚರಿಸಲಾಗುತ್ತದೆ.

-  ಬಸವರಾಜ ಎಂ. ಯರಗುಪ್ಪಿ, ಶಿರಹಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next