Advertisement

ರಾಜಕಾರಣದಲ್ಲಿ ಮೌಲ್ಯ ಕುಸಿತ: ಕೃಷ್ಣ

09:11 PM Aug 10, 2019 | Team Udayavani |

ಚಾಮರಾಜನಗರ: ಇಂದಿನ ರಾಜಕಾರಣದಲ್ಲಿ ಮೌಲ್ಯಗಳು ಹಾಳಾಗಿದ್ದು ಯಾವುದೇ ರಾಜಕಾರಣಿ ತಪ್ಪು ಮಾಡಿದರೆ ಅವರವರ ಜಾತಿಯವರು ಅವರನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ವಿಧಾನಸಭೆ ಮಾಜಿ ಸ್ಪೀಕರ್‌ ಕೆ.ಆರ್‌.ಪೇಟೆ ಕೃಷ್ಣ ವಿಷಾದಿಸಿದರು. ನಗರದ ಜೆ.ಎಚ್‌.ಪಟೇಲ್‌ ಸಭಾಂಗಣದಲ್ಲಿ ಬಿ. ರಾಚಯ್ಯ ಪ್ರತಿಷ್ಠಾನದಿಂದ ಶನಿವಾರ ನಡೆದ ಮಾಜಿ ರಾಜ್ಯಪಾಲ ದಿ.ಬಿ.ರಾಚಯ್ಯ ಅವರ 97ನೇ ಜನ್ಮ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

Advertisement

ಬಿ.ಎಸ್‌.ಯಡಿಯೂರಪ್ಪ ಹೊಸದಾಗಿ ಯೋಜನೆ ಜಾರಿಗೊಳಿಸಿದರೆ, ಯಾರೂ ಮಾಡದೇ ಇರುವುದನ್ನು ಯಡಿಯೂರಪ್ಪ ಮಾಡಿದ್ದಾರೆ ಬಿಡಿ ಎಂದು ಲಿಂಗಾಯತರು ಸಮರ್ಥಿಸಿಕೊಳ್ಳುತ್ತಾರೆ. ಎಚ್‌.ಡಿ.ದೇವೇಗೌಡ, ಕುಮಾರಸ್ವಾಮಿ ತಪ್ಪು ಮಾಡಿದರೆ ಅದು ಸಣ್ಣ ತಪ್ಪು ಬಿಡಿ ಸ್ವಾಮಿ, ಯಾರೂ ಮಾಡದಿರುವುದನ್ನು ಮಾಡಿದ್ದಾರಾ ಎಂದು ಒಕ್ಕಲಿಗರು ಸಮರ್ಥಿಸಿಕೊಳ್ಳುತ್ತಾರೆ. ಒಟ್ಟಾರೆ ಜಾತಿ, ಜಾತಿಯ ಹೆಸರಿನಲ್ಲಿ ಸಮಾಜವನ್ನು ಛಿದ್ರ ಛಿದ್ರ ಮಾಡುತ್ತಿದ್ದಾರೆಂದು ಟೀಕಿಸಿದರು.

ಯಾವುದೇ ಸರ್ಕಾರ ಬಂದರೂ ಭ್ರಷ್ಟಾಚಾರ ತಗ್ಗಿಲ್ಲ. ಕುಮಾರಸ್ವಾಮಿಯೇ ಬರಲಿ, ಯಡಿಯೂರಪ್ಪನವರೇ ಬರಲಿ, ತಾಲೂಕು ಕಚೇರಿ, ಲೋಕೋಪಯೋಗಿ ಇಲಾಖೆ ಮತ್ತಿತರ ಸರ್ಕಾರಿ ಕಚೇರಿಗಳಲ್ಲಿ ಮಾಮೂಲಿ ತೆಗೆದುಕೊಳ್ಳುವುದನ್ನು ನಿಲ್ಲಿಸುತ್ತಾರಾ. ತಪ್ಪು ಮಾಡಿದವರನ್ನು ಶಿಕ್ಷಿಸದೇ ಇದ್ದ ಮೇಲೆ ಅದೆಂತ ಸರ್ಕಾರ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂತಹ ಸಂದರ್ಭಗಳಲ್ಲಿ ಬಿ.ರಾಚಯ್ಯನವರು ನೆನಪಾಗುತ್ತಾರೆ. ರಾಚಯ್ಯನವರು ಸೌಮ್ಯ ಸ್ವಭಾವದವರಾದರೂ ಹಿಡಿದ ಕೆಲಸ ಸಾಧಿಸಬೇಕೆಂಬ ಹಠವಾದಿಗಳಾಗಿದ್ದರು. ಎಂದಿಗೂ ಸಹ ತಮ್ಮವರನ್ನು ಹತ್ತಿರಕ್ಕೆ ಸೇರಿಸಿಕೊಂಡವರಲ್ಲ. ಇತ್ತೀಚಿನ ರಾಜಕಾರಣಿಗಳಲ್ಲಿ ಎಲ್ಲಾ ವಿಚಾರಗಳಿಗೂ ಶಿಫಾರಸು ಮಾಡುವುದು ರೂಢಿ ಎಂದರು.

ನಾವೆಲ್ಲರೂ ರಾಜಕಾರಣದಲ್ಲಿ ಬಿ.ರಾಚಯ್ಯ ಅವರನ್ನು ನೋಡಿ ಅವರ ಕಾರ್ಯ ವೈಖರಿ ಕಣ್ಣಾರೆ ಕಂಡು ಬೆಳೆದವರು. ತಾನೂ ಯುವಕನಾಗಿದ್ದಾಗ ಶಾಸಕನಾಗಿ, ಸಚಿವನಾಗಿದ್ದೆ. ಆ ವೇಳೆ ರಾಚಯ್ಯ ಅವರು ನಮ್ಮ ಜೊತೆಗೆ ಸಂಪುಟದಲ್ಲಿದ್ದರು. ಎಂದೂ ಅವರು ಇಂತಹ ಕಾರ್ಯವಾಗಬೇಕು ಎಂದು ಶಿಫಾರಸು ಮಾಡಿದವರಲ್ಲ ಎಂದರು.

Advertisement

ಪ್ರಾದೇಶಿಕ ಪಕ್ಷಗಳು ಕುಟುಂಬದ ಪಕ್ಷವಾಗಿವೆ. ಯಾವುದೇ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ರಚನೆಗೊಂಡರೆ ಅದು ಆ ಕುಟುಂಬದ ಪಕ್ಷವಾಗಿ ಬಿಡುತ್ತದೆ. ಕರ್ನಾಟಕದಲ್ಲಿರುವ ದೇವೇಗೌಡರ ಪಕ್ಷದ ಬಗ್ಗೆ ತಾನು ಮಾತನಾಡುತ್ತಿಲ್ಲ. ಇತರೇ ರಾಜ್ಯಗಳಿರುವ ಪ್ರಾದೇಶಿಕ ಪಕ್ಷಗಳ ಕತೆ ನೋಡಿ.

ಹೀಗಾಗಿ ಚುನಾವಣಾ ಆಯೋಗ ಇಂತಹ ಪ್ರಾದೇಶಿಕ ಪಕ್ಷಗಳಿಗೆ ಚುನಾವಣೆಗೆ ಸ್ಪರ್ಧೆ ಮಾಡದಂತೆ ಕಾಯ್ದೆ ರೂಪಿಸಬೇಕು. ನಮ್ಮ ದೇಶಕ್ಕೆ ಪ್ರಜಾಪ್ರಭುತ್ವಕ್ಕಿಂತ ಅಧ್ಯಕ್ಷೀಯ ಮಾದರಿ ಚುನಾವಣೆ ಅಗತ್ಯ. ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಚುನಾವಣೆ ಗಮನಿಸಿದರೆ, ನಾವು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇದ್ದೇವೆಯೇ ಎಂಬ ಭಯ ಕಾಡುತ್ತಿದೆ. ಇದರ ಬಗ್ಗೆ ಹೆಚ್ಚಿನ ಚರ್ಚೆಯಾಗಬೇಕು ಎಂದು ತಿಳಿಸಿದರು.

ಅರಣ್ಯ-ಪರಿಸರ ಇಲಾಖೆಯ ನಿವೃತ್ತ ಕಾರ್ಯದರ್ಶಿ ಎ.ಸಿ.ಲಕ್ಷ್ಮಣ್‌, ರಾಚಯ್ಯನವರು ಮೇರು ವ್ಯಕ್ತಿತ್ವವುಳ್ಳವರು. ಅರಣ್ಯ ಖಾತೆ ನಿರ್ವಹಿಸುತ್ತಿದ್ದರೂ ಇತರೇ ಇಲಾಖೆ ಸಚಿವರನ್ನು ಜಿಲ್ಲೆಗೆ ಆಹ್ವಾನಿಸಿ, ಅವರಿಂದ ಆಗಬೇಕಾಗಿರುವ ಕೆಲಸ ಕಾರ್ಯ ಮಾಡಿಸಿಕೊಳ್ಳುವ ಜಾಣ್ಮೆ ಅವರಿಗಿತ್ತು. ಅವರು ಸಚಿವರಾಗಿದ್ಧಾಗ ಚಾಮರಾಜನಗರಕ್ಕೆ ಎಲ್ಲ ಮಂತ್ರಿಗಳನ್ನು ಪ್ರತಿ 2 ತಿಂಗಳಿಗೊಮ್ಮೆ ಕರೆಸುತ್ತಿದ್ದರು. ಈ ಭಾಗದಲ್ಲಿ ಬಹಳಷ್ಟು ಜನರಿಗೆ ಜಮೀನು ಮನೆ ನೀಡಿ ಅವರನ್ನು ಆರ್ಥಿಕ ಅಭಿವೃದ್ಧಿಯತ್ತ ಕೊಂಡೊಯ್ಯಲು ಶ್ರಮವಹಿಸಿದ್ದಾರೆ ಎಂದರು.

ಲೇಖಕ, ರಂಗಕರ್ಮಿ ಕೆ.ವೆಂಕಟರಾಜು, ಬಿ.ರಾಚಯ್ಯ, ಎಂ.ಸಿ.ಬಸಪ್ಪ, ಎಸ್‌.ಪುಟ್ಟಸ್ವಾಮಿ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ ಜಿಲ್ಲೆಯ ರಾಜಕಾರಣಿಗಳು. ಆದರೆ ಬಸಪ್ಪ ಹಾಗೂ ಪುಟ್ಟಸ್ವಾಮಿ ಅವರನ್ನು ಸ್ಮರಿಸಿಕೊಳ್ಳುವ ಯಾವುದೇ ಕಾರ್ಯಕ್ರಮ ನಡೆಯದಿರುವುದು ವಿಷಾದನೀಯ ಎಂದರು. ಬರಹಗಾರ ಎಸ್‌.ಲಕ್ಷಿನರಸಿಂಹ ಅವರನ್ನು ಸನ್ಮಾನಿಸಲಾಯಿತು. ಕೊಳ್ಳೇಗಾಲದ ಬೌದ್ಧ ವಿಹಾರದ ಜೇತವನದ ಮನೋರಖೀತ ಬಂತೇಜಿ ಸಾನ್ನಿಧ್ಯ ವಹಿಸಿದ್ದರು.

ಮೈಮುಲ್‌ ಮಾಜಿ ಅಧ್ಯಕ್ಷ ಸಿದ್ದಮಲ್ಲಯ್ಯ, ಜಿಪಂ ಉಪಾಧ್ಯಕ್ಷ ಕೆ.ಎಸ್‌.ಮಹೇಶ್‌, ಬಿ.ರಾಚಯ್ಯ ಪ್ರತಿಷ್ಠಾನದ ಅಧ್ಯಕ್ಷ ಮಾಜಿ ಶಾಸಕ ಎ.ಆರ್‌.ಕೃಷ್ಣಮೂರ್ತಿ, ಜಿಪಂ ಸದಸ್ಯ ಆರ್‌.ಬಾಲರಾಜು, ಮುಖಂಡ ಕೂಡೂÉರು ಹನುಮಂತಶೆಟ್ಟಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next