Advertisement

ವಾಲ್ಮೀಕಿ ರಾಮಾಯಣ ವೈಶಿಷ್ಟ್ಯಗಳ ಆಗರ: ಮಾಲಿನಿ

09:24 PM Oct 19, 2019 | Lakshmi GovindaRaju |

ಗುಂಡ್ಲುಪೇಟೆ: ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಎಂಬುದು ಹಲವಾರು ವೈಶಿಷ್ಟ್ಯಗಳ ಆಗರ ಎಂದು ಮೈಸೂರು ವಿವಿ ಪ್ರಾಧ್ಯಾಪಕಿ ಡಾ.ಸುತ್ತೂರು ಎಸ್‌.ಮಾಲಿನಿ ಹೇಳಿದರು.

Advertisement

ಪಟ್ಟಣದ ಗುರುಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು. ವಾಲ್ಮೀಕಿ ರಚಿಸಿದ ರಾಮಾಯಣ ಐದು ಸಾವಿರ ವರ್ಷಗಳಾದರೂ ಅದು ತನ್ನ ಮಹತ್ವ ಉಳಿಸಿಕೊಂಡಿದೆ. ವಿಶ್ವದಲ್ಲಿಯೇ ಅತಿ ಹೆಚ್ಚಿನ ಭಾಷೆಗಳಲ್ಲಿ ಭಾಷಾಂತರವಾಗಿ ಸಂಶೋಧನೆಗಳಿಗೆ ಕಾರಣವಾಗಿದೆ ಎಂದು ಹೇಳಿದರು.

ಆದರ್ಶಗಳೇ ಕೊಡುಗೆ: ವಾಲ್ಮೀಕಿ ಕೇವಲ ಸಾಹಿತಿಯಲ್ಲ, ಪುಷ್ಪಕ ವಿಮಾನ, ಕ್ಷಿಪಣಿ ಮುಂತಾದ ತಾಂತ್ರಿಕ ಹಾಗೂ ವಿಜ್ಞಾನದ ಆವಿಷ್ಕಾರಗಳ ಮೂಲ ಜ್ಞಾನಿ, ತತ್ವಜ್ಞಾನಿ, ರಾಮರಾಜ್ಯ, ಮರ್ಯಾದಾ ಪುರುಷೋತ್ತಮ, ಏಕಪತ್ನಿ ವತ್ರಸ್ಥ ಮುಂತಾದ ಆದರ್ಶ ಕಲ್ಪನೆಗಳನ್ನು ಕೊಡುಗೆಯಾಗಿ ನೀಡಿದ ಮೇಧಾವಿ ಎಂದರು.

ಸಮುದಾಯಕ್ಕೆ ಸೀಮಿತರಲ್ಲ: ವಾಲ್ಮೀಕಿ ಅವರನ್ನು ಕೇವಲ ಒಂದು ಸಮುದಾಯಕ್ಕೆ ಸೀಮಿತಗೊಳಿಸದೆ ಪ್ರತಿ ದಿನವೂ ಅವರ ಸಿದ್ದಾಂತ ಪಾಲಿಸಿದರೆ ಮಾತ್ರ ಮುಂದುವರಿಯಲು ಸಾಧ್ಯವಾಗಲಿದೆ. ಎಲ್ಲಾ ಸರ್ಕಾರಗಳೂ ರಾಮರಾಜ್ಯ ಪರಿಕಲ್ಪನೆಯಲ್ಲಿಯೇ ಕಾರ್ಯನಿರ್ವಸುತ್ತಿವೆ.

ಆದ್ದರಿಂದ ವಾಲ್ಮೀಕಿ ನಾಯಕ ಸಮುದಾಯವು ತಮ್ಮ ಮಕ್ಕಳಿಗೆ ಸಂಪೂರ್ಣ ಶಿಕ್ಷಣ ಕೊಡುವ ಮೂಲಕ ಮುಂದೆ ಬರಬೇಕೆಂದು ಮನವಿ ಮಾಡಿದರು. ಸಂಸದ ಶ್ರೀನಿವಾಸಪ್ರಸಾದ್‌ ಮಾತನಾಡಿ, ನಾಯಕ ಸಮುದಾಯಕ್ಕೆ ಹೆಚ್ಚಿನ ಮೀಸಲಾತಿ ಕಲ್ಪಿಸಲು ತಾವು ಹಿಂದಿನಿಂದಲೂ ನೆರವಾಗಿದ್ದೇನೆ. ಮುಂಬರುವ ದಿನಗಳಲ್ಲಿ ಈ ಸಮುದಾಯದ ಬೇಡಿಕೆ ಈಡೇರಲಿದೆ ಎಂದರು.

Advertisement

ಮಹತ್ವ ಪಡೆದಿದೆ: ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‌ಕುಮಾರ್‌ ಮಾತನಾಡಿ, ವಾಲ್ಮೀಕಿ ರಾಮಾಯಣ ಮಹಾಗ್ರಂಥ ರಚಿಸದಿದ್ದರೆ ಭಾರತಕ್ಕೆ ಆತ್ಮವೇ ಇಲ್ಲದಂತಾಗುತ್ತಿತ್ತು. ಇಂದು ಅವರು ಜೀವಿಸಿದ್ದರೆ ನೊಬೆಲ್‌ ಪ್ರಶಸ್ತಿ ಪಡೆದುಕೊಳ್ಳುತ್ತಿದ್ದರು. ಐದು ಸಾವಿರ ವರ್ಷ ಕಳೆದರೂ ರಾಮಾಯಣ ತನ್ನದೇ ಆದ ಮಹತ್ವ ಪಡೆದಿದೆ ಎಂದರು.

ಅಭಿವೃದ್ಧಿ ಕಾರ್ಯ: ಶಾಸಕ ನಿರಂಜನಕುಮಾರ್‌ ಮಾತನಾಡಿ, ತಾಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಎಸ್‌ಸಿ, ಎಸ್‌ಟಿ ಬಡಾವಣೆಗಳಿಗೆ ಚರಂಡಿ, ಕಾಂಕ್ರೀಟ್‌ ರಸ್ತೆ ಕಾಮಗಾರಿಗಳನ್ನು ನಡೆಸುತ್ತಿದ್ದು ಎಲ್ಲಾ ಸಮುದಾಯದ ಹಿತಕಾಪಾಡಲು ಸಿದ್ಧನಿದ್ದೇನೆಂದರು.

ಜಿಪಂ ಉಪಾಧ್ಯಕ್ಷ ಕೆ.ಎಸ್‌.ಮಹೇಶ್‌, ಸದಸ್ಯ ಬೊಮ್ಮಯ್ಯ, ಚನ್ನಪ್ಪ, ಪುರಸಭೆ ಸದಸ್ಯ ಪಿ.ಗಿರೀಶ್‌, ಪುರಸಭೆ ಮಾಜಿ ಅಧ್ಯಕ್ಷ ಎಂ.ಪುಟ್ಟರಂಗನಾಯಕ್‌, ಬಿಜೆಪಿ ಮಂಡಲಾಧ್ಯಕ್ಷ ಎನ್‌.ಮಲ್ಲೇಶ್‌, ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಎಸ್‌ಪಿ ಆನಂದಕುಮಾರ್‌, ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಕೊಡಸೋಗೆ ಶಿವಬಸಪ್ಪ, ಜ್ಯೂ.ಶ್ರೀರಾಮುಲು ಸುರೇಶ್‌, ಸುರೇಶ್‌ ನಾಯಕ್‌ ಮತ್ತಿತರರಿದ್ದರು.

ಇದೇ ವೇಳೆ ನಾಯಕ ಸಮುದಾಯದ ಪ್ರತಿಭಾವಂತರಿಗೆ ಗಣ್ಯರು ಸನ್ಮಾನ ಮಾಡಿದರು. ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರವನ್ನು ಬೆಳ್ಳಿ ರಥದಲ್ಲಿಸಿ ಪಟ್ಟಣ ಪ್ರಮುಖ ಬೀದಿಗಳಲ್ಲಿ ಬ್ಯಾಂಡ್‌, ಮಂಗಳ ವಾದ್ಯ, ಗೊರವರ ಕುಣಿತ, ಕರಗ ಮುಂತಾದ ಜನಪದ ಕಲಾತಂಡಗಳೊಂದಿಗೆ ಮೆರವಣಿಗೆ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next