Advertisement

Valmiki Nigama Scam; ವಾಲ್ಮೀಕಿ ನಿಗಮದ ಹಣ ಮದ್ಯ ಖರೀದಿಗೆ ಬಳಕೆ!

01:33 AM Jul 18, 2024 | Team Udayavani |

ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ವರ್ಗಾವಣೆಯಾದ ಹಣ ಲೋಕಸಭಾ ಚುನಾ
ವಣೆ ವೇಳೆ ಮದ್ಯ ಖರೀದಿಗೆ ಬಳಕೆಯಾಗಿದೆ ಎಂಬ ಕಳವಳಕಾರಿ ಅಂಶವನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಬಹಿಂಗಗೊಳಿಸಿದೆ.

Advertisement

ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಇ.ಡಿ., ಆಂಧ್ರ ಮತ್ತು ತೆಲಂಗಾಣದಲ್ಲಿ ಈ ಹಣ ಚುನಾವಣೆ ಸಂದರ್ಭ ದುರ್ಬಳಕೆಯಾದ ಬಗ್ಗೆ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ದೃಢಪಡಿಸಿದೆ. ಇದು ಸರಕಾರಕ್ಕೆ ಮತ್ತೂಂದು ಮುಜುಗರ ತಂದೊಡ್ಡಿದೆ.

ಬಿ. ನಾಗೇಂದ್ರ ಹಾಗೂ ನಿಗಮದ ಅಧ್ಯಕ್ಷ ಬಸವನಗೌಡ ದದ್ದಲ್‌ ನಿವಾಸದಲ್ಲೇ ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಜಪ್ತಿ ಮಾಡಿ ಕೊಳ್ಳಲಾಗಿದೆ. ಸಾರ್ವತ್ರಿಕ ಚುನಾವಣೆ ಗಳಿಗೆ ಸ್ವಲ್ಪ ಮೊದಲು ದೊಡ್ಡ ಪ್ರಮಾಣದ ಮದ್ಯವನ್ನು ಸಂಗ್ರಹಿಸಲು ದೊಡ್ಡ ಮೊತ್ತದ ದುಡ್ಡು ಬಳಸಲಾಗಿದೆ. ಬಂದ ಆದಾಯವನ್ನು ಬಳಸಿಕೊಂಡು ಲಂಬೋರ್ಗಿನಿ ಸೇರಿದಂತೆ ಉನ್ನತ-ಮಟ್ಟದ ವಾಹನಗಳನ್ನು ಖರೀದಿಸ ಲಾಗಿದೆ ಎಂದು ಇಡಿ ತಿಳಿಸಿದೆ.
ದಾಖಲೆ ವಶ
ಬಿ. ನಾಗೇಂದ್ರ ಮತ್ತು ಬಸನಗೌಡ ದದ್ದಲ್‌ ಅವರ (ನಿಗಮದ ಅಧ್ಯಕ್ಷ) ನಿವಾಸದಲ್ಲಿ ಶೋಧ ಸಂದರ್ಭ ನಾಗೇಂದ್ರ ಅವರೊಂದಿಗೆ ನಿಕಟ ಸಂಪರ್ಕ ಹೊಂದಿರುವವರು ಅಕ್ರಮ ಹಣ ವರ್ಗಾವಣೆಯಲ್ಲಿ ಶಾಮೀಲಾಗಿರುವುದು ಕಂಡು ಬಂದಿದೆ.

89.62 ಕೋಟಿ ರೂ. ದುರುಪಯೋಗ
ನಿಗಮಕ್ಕೆ ಸೇರಿದ 89.62 ಕೋಟಿ. ರೂ.ಗಳ ದುರುಪಯೋಗ ಆರೋಪದಲ್ಲಿ ನಾಗೇಂದ್ರ ಅವರನ್ನು ಜುಲೈ 12ರಂದು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ), 2002ರ ನಿಬಂಧನೆಗಳ ಅಡಿಯಲ್ಲಿ ಇಡಿ ಅಧಿಕಾರಿಗಳು ಬಂಧಿಸಿದ್ದರು.

ಇದಕ್ಕೂ ಮೊದಲು ಜುಲೈ 10ರಂದು 4 ರಾಜ್ಯಗಳಲ್ಲಿ 23 ಕಡೆ ಶೋಧ ಮತ್ತು ಹಗರಣಕ್ಕೆ ಸಂಬಂಧಿಸಿದ ದಾಖಲೆ ವಶಪಡಿಸಿಕೊಳ್ಳುವ ಕಾರ್ಯಾಚರಣೆಗಳನ್ನು ನಡೆಸಿತ್ತು. ಮೇ 26ರಂದು ನಿಗಮದ ಉದ್ಯೋಗಿ ಚಂದ್ರಶೇಖರ್‌ ಆತ್ಮಹತ್ಯೆಯ ಅನಂತರ ಕರ್ನಾಟಕ ಪೊಲೀಸ್‌ ಮತ್ತು ಸಿಬಿಐ ದಾಖಲಿಸಿದ ಎಫ್ಐಆರ್‌ಗಳ ಆಧಾರದ ಮೇಲೆ ಇಡಿ ತನಿಖೆಯನ್ನು ಪ್ರಾರಂಭಿಸಿತ್ತು.

Advertisement

ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ 18 ನಕಲಿ ಖಾತೆಗಳಿಗೆ 90 ಕೋಟಿ ರೂ. ಅಕ್ರಮವಾಗಿ ವರ್ಗ ಮಾಡಲಾಗಿದೆ. ಈ ಖಾತೆಗಳಿಂದ ಆರೋಪಿಗಳು ನಗದು ಹಾಗೂ ಚಿನ್ನಾಭರಣದ ರೂಪದಲ್ಲಿ ಈ ಸಂಪತ್ತನ್ನು ಪಡೆದಿದ್ದಾರೆ ಎಂಬ ವಿಚಾರ ಇಡಿ ತನಿಖೆಯಲ್ಲಿ ಕಂಡು ಬಂದಿದೆ.

ಇಂದು ನಾಗೇಂದ್ರ ಕಸ್ಟಡಿ ಅಂತ್ಯ
ನಾಗೇಂದ್ರ ಅವರಿಗೆ ಇ.ಡಿ. ವಿಚಾರಣೆ ಮುಂದುವರಿದಿದೆ. ಅವರನ್ನು ವಶಕ್ಕೆ ಪಡೆದ ಅವಧಿ ಗುರುವಾರಕ್ಕೆ ಮುಕ್ತಾಯಗೊಳ್ಳಲಿದ್ದು ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಮತ್ತೆ ನಾಗೇಂದ್ರ ಅವರನ್ನು ಕಸ್ಟಡಿಗೆ ಇಡಿ ಅಧಿಕಾರಿಗಳು ಕೇಳುವ ಸಾಧ್ಯತೆಗಳಿವೆ. ಕಸ್ಟಡಿಗೆ ನೀಡದಿದ್ದರೆ ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಬೇಕಾಗಿದೆ.

ನಾಗೇಂದ್ರ ಪತ್ನಿಗೂ ಇ.ಡಿ. ಸಂಕಷ್ಟ
ಬೆಂಗಳೂರು, ಜು. 17: ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಸಚಿವ ಬಿ. ನಾಗೇಂದ್ರ ಪತ್ನಿ ಮಂಜುಳಾ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಬುಧವಾರ ತಮ್ಮ ಕಚೇರಿಗೆ ಕರೆಸಿ ಸುದೀರ್ಘ‌ ವಿಚಾರಣೆ ನಡೆಸಿದ್ದಾರೆ. ರಾತ್ರಿ ಮತ್ತೆ ಅವರ ನಿವಾಸಕ್ಕೆ ಕರೆದೊಯ್ದು ಬಿಟ್ಟಿದ್ದಾರೆ. ಹಗರಣದ ವಿಚಾರವನ್ನು ನಾಗೇಂದ್ರ ನಿಮ್ಮ ಬಳಿ ಹಂಚಿಕೊಂಡಿದ್ದರೇ? ಆರೋಪಿಗಳಿಂದ ನಾಗೇಂದ್ರ ಪರ ಹಣ ಪಡೆದಿದ್ದೀರಾ? ಎಂಬಿತ್ಯಾದಿ ಪ್ರಶ್ನೆಗಳನ್ನು ಮುಂದಿಟ್ಟು ಹೇಳಿಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next