Advertisement
ವಿಧಾನಸಭೆಯಲ್ಲಿ ಮಾತನಾಡಿ, ನೂರಕ್ಕೆ ನೂರರಷ್ಟು ಹಣ ಟಕಾಟಕ್ ಎಂದು ಲೂಟಿ ಹಗರಣವಿದು. ವಾಲ್ಮೀಕಿ ಸಮುದಾಯದ ಅಭಿವೃದ್ಧಿಗೆ ಖರ್ಚಾಗಬೇಕಿದ್ದ ಹಣ ಚುನಾವಣೆಗೆ ಸಂದಾಯವಾಗಿದ್ದು, ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ. ಇದು ಒಂದು ರೀತಿಯಲ್ಲಿ ಹಲ್ಕಾ ಕೆಲಸ. ಈ ಪ್ರಕರಣದಲ್ಲಿ ಲೂಟಿ ಹೊಡೆದವರೂ ದಲಿತರು, ಆತ್ಮಹತ್ಯೆ ಮಾಡಿಕೊಂಡವರೂ ದಲಿತರು. ದಲಿತರ ಚಾಂಪಿಯನ್ ಎಂದು ಹೇಳಿಕೊಳ್ಳುವ ಸಿಎಂ ಸಿದ್ದರಾಮಯ್ಯ, ಹಣ ವರ್ಗಾವಣೆ ನನ್ನ ಗಮನಕ್ಕೇ ಬಂದಿಲ್ಲ ಎಂದಿರುವುದು ಬೇಜವಾಬ್ದಾರಿ. ಹಾಗಿದ್ದರೆ ಜನರ ತೆರಿಗೆ ಹಣಕ್ಕೆ ಏನು ಬೆಲೆ? ಎಂದು ಪ್ರಶ್ನಿಸಿದರು.
2023-24ನೇ ಸಾಲಿನ ಬಜೆಟ್‌ನಲ್ಲಿ ವಾಲ್ಮೀಕಿ ಸಮುದಾಯದ ಅಭಿವೃದ್ಧಿಗೆಂದು 175 ಕೋಟಿ ರೂ.ಗಳನ್ನೂ ಸರಕಾರ ನಿಗದಿಪಡಿಸಿತ್ತು. ಇದರಲ್ಲಿ ಸ್ವದ್ಯೋಗ ಯೋಜನೆ, ನೇರ ಸಾಲ ಸೌಲಭ್ಯ, ತಳ್ಳುವ ಗಾಡಿ ಕೊಳ್ಳಲು 15 ಕೋಟಿ ರೂ. ಇಡಲಾಗಿತ್ತು. ತಳ್ಳುವ ಗಾಡಿಗೆಂದು ಇಟ್ಟಿದ್ದ ಹಣವನ್ನು ಹೈದರಾಬಾದ್ ಸೇರಿ ಹಲವೆಡೆ ತಳ್ಳಿಬಿಟ್ಟಿದ್ದಾರೆ. ಭೂರಹಿತ ಎಸ್‌ಟಿ ಮಹಿಳೆಯರಿಗೆ ಭೂಒಡೆತನ ಯೋಜನೆಯಡಿ 15 ಕೋಟಿ ರೂ., ಕೌಶಲಾಭಿವೃದ್ಧಿ ತರಬೇತಿಗೆ 10 ಕೋಟಿ ರೂ., ಮಹಿಳಾ ಸ್ವಸಹಾಯ ಸಂಘಗಳಿಗೆ 10 ಕೋಟಿ ರೂ., ಗಂಗಾ ಕಲ್ಯಾಣ ಯೋಜನೆಗೆ 50 ಕೋಟಿ ರೂ. ಮೀಡಲಿಡಲಾಗಿತ್ತು. ಫಲಾನುಭವಿಗಳ ಪಟ್ಟಿಯೂ ಸಿದ್ಧವಿತ್ತು. ಇನ್ನೇನು ಹಂಚಿಕೆ ಮಾಡಬೇಕು ಎನ್ನುವಷ್ಟರಲ್ಲಿ ಲೂಟಿ ಮಾಡಲಾಗಿದೆ. ಅದರಲ್ಲೂ ಮಾ. 30ರಂದು ಶೇ. 7.6 ಬಡ್ಡಿದರದಲ್ಲಿ 50 ಕೋಟಿ ರೂ.ಗಳ ನಿಶ್ಚಿತ ಠೇವಣಿ ಇಟ್ಟು, ಶೇ. 14 ಬಡ್ಡಿದರದಲ್ಲಿ 40 ಕೋಟಿ ರೂ. ಸಾಲ ಪಡೆಯಲಾಗಿದೆ. ಅದೇ ದಿನ ಹೈದರಾಬಾದ್‌ನ ರತ್ನಾಕರ್ ಬ್ಯಾಂಕ್‌ಗೆ ಅಷ್ಟೂ ಹಣ ವರ್ಗಾವಣೆ ಆಗಿದೆ ಎಂದರು.
Related Articles
ವಾಲ್ಮೀಕಿ ನಿಗಮದ ಹಣ ಚುನಾವಣೆಗೆ ಬಳಕೆಯಾಗಿದೆ ಎಂದು ಜಾರಿ ನಿರ್ದೇಶನಾಲಯ ರಿಮಾಂಡ್ ಅರ್ಜಿಯಲ್ಲಿ ತಿಳಿಸಿದೆಯೇ ಹೊರತು ಅದನ್ನು ಮಾಜಿ ಸಚಿವ ಬಿ. ನಾಗೇಂದ್ರ ಒಪ್ಪಿಕೊಂಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಆರ್.ಅಶೋಕ್ ಮಾತನಾಡುತ್ತ, ನಾಗೇಂದ್ರ ಒಬ್ಬನೇ ಇದರ ಹಿಂದೆ ಇಲ್ಲ. ಪಾಪ ಆತನಿಗೆ ಕಮ್ಮಿ ಸಿಕ್ಕಿದೆ. ಶೇ. 20-25ರಷ್ಟು ಮಾತ್ರ ಸಿಕ್ಕಿರಬಹುದು. ಉಳಿದದ್ದು ಎಲ್ಲಿ ಹೋಗಿದೆ? ಜಾರಿ ನಿರ್ದೇಶನಾಲಯದ ತನಿಖೆಯಲ್ಲಿ ಇವೆಲ್ಲವೂ ಬಹಿರಂಗಗೊಂಡಿದೆ ಎಂದರು.
Advertisement
ಮಧ್ಯಪ್ರವೇಶಿಸಿದ ಸಿಎಂ, ಅದು ಇಡಿ ಸಲ್ಲಿಸಿರುವ ರಿಮಾಂಡ್ ಅಪ್ಲಿಕೇಶನ್‌ನಲ್ಲಿ ಉಲ್ಲೇಖವಾಗಿರುವ ಅಂಶವೇ ವಿನಾ ನಾಗೇಂದ್ರ ಅದನ್ನು ಒಪ್ಪಿಕೊಂಡಿಲ್ಲ. ಪದೇಪದೆ 187 ಕೋಟಿ ರೂ. ಹಗರಣ ಎನ್ನುತ್ತೀರಿ. ಅದು 187 ಕೋಟಿ ರೂ. ಅಲ್ಲ, 89 ಕೋಟಿ ರೂ. ಮಾತ್ರ ಎಂದರು.
ಬಿಜೆಪಿಯ ಚನ್ನಬಸಪ್ಪ, ನೀವೇ ಒಪ್ಪಿಕೊಂಡಿರಲ್ಲ ಹಗಲು ದರೋಡೆಯ ಬಗ್ಗೆ ಎನ್ನುತ್ತಿದ್ದಂತೆ ಆಡಳಿತ-ವಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಮಾತು ಮುಂದುವರಿಸಿದ ಸಿಎಂ, ನಾನು ಯಾರನ್ನೂ ಸಮರ್ಥಿಸಿಕೊಳ್ಳುತ್ತಿಲ್ಲ. ದಾಖಲೆಗೆ ಸುಳ್ಳು ಹೋಗಬಾರದು ಎನ್ನುತ್ತಿದ್ದಂತೆ, ರಿಮಾಂಡ್ ಅಪ್ಲಿಕೇಶನ್ ದಾಖಲೆ ಅಲ್ಲವೇ ಎಂದು ಅಶೋಕ್ ಪ್ರಶ್ನಿಸಿದರು.
ಅಶೋಕ್‌ಗೆ ಯತ್ನಾಳ್ ಚಾಟಿನಿಮ್ಮ ಸಿಎಂ ತನಿಖೆ ಆಗಲಿ ಎನ್ನುತ್ತಾರೆ, ನೀವು ತಪ್ಪೇ ನಡೆದಿಲ್ಲ ಎನ್ನುತ್ತಿದ್ದೀರಿ. ಇಬ್ಬರೂ ಒಂದೇ ಪಕ್ಷ, ಒಂದೇ ಸರಕಾರದಲ್ಲಿ ಇದ್ದೀರಿ ಎಂದುಕೊಂಡಿದ್ದೇವೆ. ನಿಮ್ಮದೇ ಪಕ್ಷದ ಬಿ.ಕೆ. ಹರಿಪ್ರಸಾದ್ ಅವರು, ದಲಿತರ ಹಣ ಲೂಟಿ ಆಗಿದೆ. ಬಿಜೆಪಿಯವರು ಬಿಟ್ಟರೂ ನಾನು ಬಿಡುವುದಿಲ್ಲ ಎಂದಿದ್ದಾರೆ ಎಂದು ಆರ್.ಅಶೋಕ್ ಹೇಳಿದರು. ಕುಳಿತಲ್ಲೇ ಅಶೋಕ್‌ಗೆ ಚಾಟಿ ಬೀಸಿದ ಯತ್ನಾಳ್, ಬಿಟ್ಟು ಬಿಡಬೇಕು ಎಂದುಕೊಂಡಿದ್ದಿರಾ ಹೇಗೆ? ಒಳ ಒಪ್ಪಂದ ಆಗಬಾರದು. ಗಟ್ಟಿಯಾಗಿ ನಿಲ್ಲಬೇಕು ಎಂದರು. ಗಟ್ಟಿಯಾಗಿ ನಿಲ್ಲುವುದನ್ನು ನೀವೇ ಹೇಳಿಕೊಟ್ಟಿದ್ದೀರಲ್ಲ ಯತ್ನಾಳರೇ ಎಂದು ನಕ್ಕ ಅಶೋಕ್, ಮಾತು ಮುಂದುವರಿಸಿದರು. ನಾಗೇಂದ್ರ ಯಾವುದೇ ತಪ್ಪು ಮಾಡಿಲ್ಲ: ಡಿಸಿಎಂ ಡಿಕೆಶಿ
ಅವನು ಏನೂ ತಪ್ಪು ಮಾಡಿಲ್ಲ. ನಾನೂ ಕೇಳಿದ್ದೇನೆ. ಅವನೂ ತಪ್ಪು ಮಾಡಿಲ್ಲ ಎಂಬುದನ್ನು ಹೇಳಿದ್ದಾನೆ. ನಾವ್ಯಾರೂ ರಾಜೀನಾಮೆ ಕೇಳಿರಲಿಲ್ಲ. ಆದರೂ ತನಿಖೆಯ ದೃಷ್ಟಿಯಿಂದ ನಾಗೇಂದ್ರ ರಾಜೀನಾಮೆ ಕೊಟ್ಟಿದ್ದಾನಷ್ಟೇ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿ. ಹೇಳಿದರು. ಇದೊಂದು ಪೂರ್ವನಿಯೋಜಿತ ಅಕ್ರಮ ಕೂಟ ಎಂದ ಆರ್.ಅಶೋಕ್, ಆತ್ಮಹತ್ಯೆ ಮಾಡಿಕೊಂಡಿರುವ ಅಧಿಕಾರಿ ಪ್ರಾಮಾಣಿಕ ಎಂದು ಪ್ರಶಸ್ತಿ ಪಡೆದವರು. ಅವರು ಸಾಯುವ ಮುನ್ನ ಬರೆದಿರುವ 6 ಪುಟಗಳ ಮರಣಪತ್ರದಲ್ಲಿ ಹಗರಣದ ಬಗ್ಗೆ ವಿವರಿಸಿದ್ದಾರೆ. ಆತನ ಲ್ಯಾಪ್‌ಟಾಪ್‌ನಲ್ಲಿದ್ದ ಅಂಶಗಳನ್ನು ಅಳಿಸಿ ಹಾಕಲು ಪೊಲೀಸರು ಪ್ರಯತ್ನಿಸಿರುವ ಅನುಮಾನವಿದೆ. ಇದೊಂದು ಸರಕಾರಿ ಪ್ರಾಯೋಜಿತ ಕೊಲೆ. ಇಷ್ಟಾದರೂ ನಾಗೇಂದ್ರ, ಬಸವನಗೌಡ ದದ್ದಲ್ ತಪ್ಪು ಮಾಡಿಲ್ಲ ಎನ್ನುವಂತೆ ಡಿಸಿಎಂ ಹೇಳಿಕೆ ಕೊಟ್ಟಿದ್ದಾರೆ ಎನ್ನುತ್ತಿದ್ದಂತೆ ಎದ್ದುನಿಂತ ಶಿವಕುಮಾರ್ ಸ್ಪಷ್ಟನೆ ನೀಡಿದರು.