ಬೆಂಗಳೂರು: ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ನಡೆದ ಹಗರಣದ ಮೇಲಿನ ಚರ್ಚೆ ಹಾಗೂ ಅದಕ್ಕೆ ಮುಖ್ಯಮಂತ್ರಿಯವರ ಉತ್ತರದ ವಿಚಾರದಲ್ಲಿ ವಿಧಾನಸಭೆಯಲ್ಲಿ ನಡೆದ ಪ್ರಹಸನಕ್ಕೆ ವಿಧಾನಪರಿಷತ್ತೂ ಸೋಮವಾರ ಸಾಕ್ಷಿಯಾಯಿತು.
ಗಲಾಟೆಯ ಮಧ್ಯೆಯೇ ಉತ್ತರ ನೀಡಿದ ಸಿಎಂ ಸಿದ್ದರಾಮಯ್ಯ ವಿಪಕ್ಷಗಳ ವಿರುದ್ಧ ಹರಿಹಾಯ್ದರು. ಜತೆಗೆ ಪರಿಶಿಷ್ಟ ಜಾತಿ-ಪಂಗಡದವರ ಅಭಿವೃದ್ಧಿಗೆ ಹೊಸದಾಗಿ ಕಾಯ್ದೆಗಳನ್ನು ತಂದವರು ನಾವು, ಇರುವ ಕಾನೂನುಗಳಿಗೆ ತಿದ್ದಪಡಿ ತಂದವರು ನಾವು, ಕಾರ್ಯಕ್ರಮ-ಯೋಜನೆಗಳನ್ನು ಜಾರಿಗೆ ತಂದವರು ನಾವು. ದಲಿತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದ, ಆರಂಭದಿಂದಲೂ ದಲಿತ-ದಮನಿತ ಸಮುದಾಯಗಳ ವಿರೋಧಿಯಾಗಿರುವ ಬಿಜೆಪಿಯಿಂದ ದಲಿತರ ಕಾಳಜಿಯ ಬಗ್ಗೆ ನಾವು ಪಾಠ ಕಲಿಯಬೇಕಾಗಿಲ್ಲ ಎಂದು ಸಮರ್ಥನೆ ನೀಡಿದರು.
ಗಲಾಟೆ, ಗದ್ದಲ, ಸದನದ ಬಾವಿಗಿಳಿದು ಪ್ರತಿಭಟನೆ, ಕಲಾಪ ಮುಂದೂಡಿಕೆ ನಡೆದು ಮುಖ್ಯಮಂತ್ರಿಯವರು ವಿಧಾನಸಭೆಯಲ್ಲಿ ಎರಡನೇ ದಿನ ಉತ್ತರ ನೀಡಿದರು. ಆದರೆ ವಿಧಾನಪರಿಷತ್ತಿನಲ್ಲಿ ಮೊದಲು ಉತ್ತರ ಕೊಟ್ಟು, ಅನಂತರ ಲಿಖೀತ ಉತ್ತರ ಓದಿ, ಕೊನೆಗೆ ವಿಪಕ್ಷಗಳ ಗಲಾಟೆ ಜೋರಾಗುತ್ತಿದ್ದಂತೆ ಇನ್ನುಳಿದ ಲಿಖೀತ ಉತ್ತರವನ್ನು ಸದನದ ಮುಂದೆ ಮಂಡಿಸಿದರು.
ಮೇಲ್ಮನೆಯಲ್ಲಿ ವಿಪಕ್ಷಗಳ ಚರ್ಚೆಗೆ ಮುಖ್ಯಮಂತ್ರಿಯವರು ಸೋಮವಾರ ಉತ್ತರ ನೀಡಲು ಸದನಕ್ಕೆ ಬಂದರು. ಪ್ರಶ್ನೋತ್ತರ ಬಳಿಕ ಅವರು ಸರಕಾರದ ಪರವಾಗಿ ಉತ್ತರಿಸಲು ಎದ್ದು ನಿಂತರು. ಆಗ ವಿಪಕ್ಷದವರು ಗಲಾಟೆ ಎಬ್ಬಿಸಿದರು. ಆಡಳಿತ ಪಕ್ಷಗಳ ಸದಸ್ಯರೂ ತಿರುಗೇಟು ಕೊಟ್ಟರು. ಈ ಗಲಾಟೆಯ ನಡುವೆ ಸಿಎಂ ಉತ್ತರ ಆರಂಭಿಸಿದರು. ಲಿಖಿತ ಉತ್ತರ ಓದಲಾರಂಭಿಸಿದಾಗ ಆಕ್ಷೇಪ ವ್ಯಕ್ತಪಡಿಸಿದ ವಿಪಕ್ಷ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟಿಸಿದರು.
ಗದ್ದಲ, ಧಿಕ್ಕಾರ ಘೋಷಣೆ ನಡುವೆ ಅರ್ಧ ಉತ್ತರ ಓದಿದಿ ಸಿಎಂ ಅದನ್ನು ಮೊಟಕುಗೊಳಿಸಿ ಇನ್ನುಳಿದ ಉತ್ತರವನ್ನು ಸದನದ ಮುಂದೆ ಮಂಡಿಸಿದರು. ಗಲಾಟೆ ಜೋರಾಗುತ್ತಿದ್ದಂತೆ ಸಭಾಪತಿಯವರು ಸದನವನ್ನು ಸ್ವಲ್ಪ ಕಾಲ ಮುಂದೂಡಿದರು. ಮತ್ತೆ ಕಲಾಪ ಆರಂಭಗೊಂಡಾಗ ಸದನ ಕ್ರಮಬದ್ಧವಿಲ್ಲದಿದ್ದಾಗ ಸಿಎಂ ಉತ್ತರ ಕೊಟ್ಟಿದ್ದು ಸರಿಯಲ್ಲ ಎಂದು ವಿಪಕ್ಷಗಳು ತಗಾದೆ ತೆಗೆದವು. ಕಲಾಪ ತಹಬದಿಗೆ ತರಲು ನಾನು ಸಾಕಷ್ಟು ಪ್ರಯತ್ನಪಟ್ಟೆ, ಅದು ಸಾಧ್ಯವಾಗದಿದ್ದಾಗ ಲಿಖೀತ ಉತ್ತರ ಓದುವ ಸಂದರ್ಭ ಸೃಷ್ಟಿಯಾಯಿತು. ಈಗ ಸಿಎಂ ಉತ್ತರ ಕೊಟ್ಟಾಗಿದೆ ಎಂದ ಸಭಾಪತಿ ಬಸವರಾಜ ಹೊರಟ್ಟಿ ಸದನವನ್ನು ಭೋಜನ ವಿರಾಮಕ್ಕೆ ಮುಂದೂಡಿದರು.
ನಾವು ಅಷ್ಟೊಂದು ದಡ್ಡರಾ?: ಕೇಶವಪ್ರಸಾದ್
ಸಂವಿಧಾನ ರಚನೆ ಮಂಡಳಿ ಸಭೆಯಲ್ಲಿ 1949ರ ನ. 25ರಂದು ಡಾ| ಬಿ.ಆರ್. ಅಂಬೇಡ್ಕರ್ ಅವರು ಮಾಡಿದ ಭಾಷಣ ಈ ಬಿಜೆಪಿಯವರಿಗೆ ಅರ್ಥ ಆಗುತ್ತದೋ ಗೊತ್ತಿಲ್ಲ ಎಂದು ಸಿಎಂ ಹೇಳಿದಾಗ, ಯಾಕೆ ನಾವು ಅಷ್ಟೊಂದು ದಡ್ಡರಾ ಎಂದು ಬಿಜೆಪಿಯ ಕೇಶವ ಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದರು.
ಸಿಎಂ ಹೇಳುತ್ತಿರುವುದೆಲ್ಲ ಸುಳ್ಳು, ಹಗರಣದ ಬಗ್ಗೆ ಉತ್ತರ ಕೊಡುವುದು ಬಿಟ್ಟು ರಾಜಕೀಯ ಭಾಷಣ ಮಾಡುತ್ತಿದ್ದಾರೆ. ವಿಷಯಾಂತರ ಮಾಡಿ, ಬಿಜೆಪಿಯವರು ದಲಿತ ವಿರೋಧಿಗಳು ಎಂದು ಬಿಂಬಿಸಲು ಹೊರಟಿದ್ದಾರೆ, ಇದು ಸಹಿಸುವುದಿಲ್ಲ ಎಂದು ಬಿಜೆಪಿಯ ರವಿಕುಮಾರ್, ಸಿ.ಟಿ. ರವಿ ವಾಗ್ಧಾಳಿ ನಡೆಸಿದರು. ಈ ವೇಳೆ ಸಿ.ಟಿ. ರವಿ ಮತ್ತು ರವಿ ಕುಮಾರ್ ನಡುವೆ ವಿಪಕ್ಷ ನಾಯಕ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿದೆ. ಅದಕ್ಕಾಗಿ ಪದೇಪದೆ ಎದ್ದು ಮಾತನಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಸದಸ್ಯರು ಕಾಲೆಳೆದರು.