ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾಲಯಕ್ಕೆ ಶ್ರೀ ವಾಲ್ಮೀಕಿ ಮಹರ್ಷಿ ಹೆಸರಿಡುವ ಜೊತೆಗೆ ಶ್ರೀ ವಾಲ್ಮೀಕಿ ಮಹರ್ಷಿ ಭಾವಚಿತ್ರವನ್ನೇ ಲಾಂಛನವನ್ನಾಗಿ ಅಳವಡಿಸಬೇಕು ಎಂದು ದಾವಣಗೆರೆ ವಿಶ್ವವಿದ್ಯಾಲಯ ಅಭಿವೃದ್ಧಿ ಕ್ರಿಯಾಶೀಲ ಸಮಿತಿ ಒತ್ತಾಯಿಸಿದೆ.
ಭಾನುವಾರ ಸಮಿತಿ ಕಚೇರಿಯಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ದಾವಣಗೆರೆ ವಿಶ್ವವಿದ್ಯಾಲಯಕ್ಕೆ ಶ್ರೀ ವಾಲ್ಮೀಕಿ ಮಹರ್ಷಿ ಹೆಸರಿಡುವ ಜೊತೆಗೆ ಶ್ರೀ ವಾಲ್ಮೀಕಿ ಮಹರ್ಷಿ ಭಾವಚಿತ್ರವನ್ನೇ ಲಾಂಛನವನ್ನಾಗಿ ಅಳವಡಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸುವ ಸರ್ವಾನುಮತದ ನಿರ್ಣಯ ಅಂಗೀಕರಿಸಲಾಯಿತು.
ಸಮಿತಿ ಅಧ್ಯಕ್ಷ ಎಂ.ಎಸ್.ಕೆ. ಶಾಸ್ತ್ರಿ ಮಾತನಾಡಿ, ಶ್ರೀ ವಾಲ್ಮೀಕಿ ಮಹರ್ಷಿ ಬರೆದಿರುವ ರಾಮಾಯಣ ಭಾರತ ಮಾತ್ರವಲ್ಲ ಜಪಾನ್, ಸಿಂಗಾಪುರ, ಕೊರಿಯಾ, ಇಸ್ರೆಲ್, ಥೈಲ್ಯಾಂಡ್… ಮುಂತಾದ ದೇಶಗಳಲ್ಲಿ ಮೊಳಗುತ್ತಿದೆ. ರಾಮಾಯಣ ಜಗತ್ತಿನ ಬೇರೆ ಬೇರೆ ದೇಶಗಳ ಭಾಷೆಯಲ್ಲಿ ರಚನೆಯಾಗುವ ಮೂಲಕ ಶ್ರೀ ವಾಲ್ಮೀಕಿ ಮಹರ್ಷಿ ಜಗದ್ವಿಖ್ಯಾತರಾಗಿದ್ದಾರೆ.
ದಾವಣಗೆರೆ ವಿಶ್ವವಿದ್ಯಾಲಯಕ್ಕೆ ಅಂತಹವರ ಹೆಸರಿಡುವ ಜೊತೆಗೆ ಭಾವಚಿತ್ರವನ್ನೇ ಲಾಂಛನವನ್ನಾಗಿ ಅಳವಡಿಸಬೇಕು ಎಂದು ಒತ್ತಾಯಿಸಿದರು. ಸರ್ಕಾರ ಯಾವುದೇ ಪಕ್ಷಪಾತ, ಜಾತಿ-ಮತ ರಾಜಕಾರಣದ ಅಂಶಗಳನ್ನು ಲೇಪನ ಮಾಡದೆ ದಾವಣಗೆರೆ ವಿಶ್ವವಿದ್ಯಾಲಯಕ್ಕೆ ಶ್ರೀ ವಾಲ್ಮೀಕಿ ಮಹರ್ಷಿ ಹೆಸರಿಡುವಂತಾಗಬೇಕು. ಶ್ರೀ ವಾಲ್ಮೀಕಿ ಮಹರ್ಷಿ ಹೆಸರಿಡುವುದರಿಂದ ದಾವಣಗೆರೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೂ ಒಳ್ಳೆಯದಾಗುತ್ತದೆ ಎಂದರು. ಡಾ| ಎಂ. ಸುರೇಶ್, ಎ.ಸಿ. ನಾಗರಾಜ್, ಟಿ.ಆರ್. ಮಹೇಶ್ವರಪ್ಪ ಭಾನುವಳ್ಳಿ, ಆರ್. ದಿನೇಶ್ ಬಾಬು, ಕೆ.ಆರ್. ರಂಗಪ್ಪ, ಎನ್. ವಿಜಯ್ ಕುಮಾರ್ ನಾಯಕ್, ಎಂ.ಎನ್. ಸಿದ್ದಪ್ಪ, ಟಿ.
ರಂಗಸ್ವಾಮಿ, ಮಹದೇವಪ್ಪ ಬಿ. ತಳವಾರ್, ಮಧುಸೂದನ್ ತಳವಾರ್ ಇತರರಿದ್ದರು.