ಬೆಂಗಳೂರು: ಕರ್ನಾಟಕ ಏಕೀಕರಣದ ನಂತರ ಉತ್ತರ ಕರ್ನಾಟಕಕ್ಕೆ ಎಲ್ಲಾ ರೀತಿಯಿಂದಲೂ ಅನ್ಯಾಯವಾಗುತ್ತಿದ್ದು ಇದನ್ನು ಖಂಡಿಸಿ ಆ.2ರಂದು ವಿಧಾನ ಸೌಧ ಮುತ್ತಿಗೆ ಹಾಕಲು ತೀರ್ಮಾನಿಸಲಾಗಿದೆ ಎಂದು ಕನ್ನಡ ಚಳುವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗಕ್ಕೆ ಹಲವು ರೀತಿಯಲ್ಲಿ ಅನ್ಯಾಯವಾಗುತ್ತಿದ್ದರೂ, ಆ ಭಾಗದ ಶಾಸಕರು ಮತ್ತು ಸಂಸದರು ದನಿ ಎತ್ತುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಏಕೀಕರಣದ ನಂತರ ಅಧಿಕಾರ ನಡೆಸಿರುವ ಎಲ್ಲಾ ಸರ್ಕಾರಗಳು ಉತ್ತರ ಕರ್ನಾಟಕ ಮತ್ತು ಹೈದ್ರಾಬಾದ್ ಕರ್ನಾಟಕವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿವೆ. ಸರ್ಕಾರದ ಈ ಧೋರಣೆಯನ್ನು ಖಂಡಿಸಿ, ವಿವಿಧ ಕನ್ನಡ ಪರ ಸಂಘಟನೆಗಳ ಜತೆಗೂಡಿ ಆ.2 ರಂದು ವಿಧಾನ ಸೌಧ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ಇದುವರೆಗೂ ರಾಜ್ಯದಲ್ಲಿ ಆಳ್ವಿಕೆ ನಡೆಸಿರುವ ಸರ್ಕಾರಗಳು ಉತ್ತರ ಕರ್ನಾಟಕ ಅಭಿವೃದ್ಧಿಗೆ ನೀಡಿರುವ ಕೊಡುಗೆಗಳ ಕುರಿತು ಶ್ವೇತ ಪತ್ರ ಹೊರಡಿಸಬೇಕು. ಅಲ್ಲದೆ, ಬೆಳಗಾವಿಯ ಸುವರ್ಣ ಸೌಧದಲ್ಲಿ ವಿಶೇಷ ಅಧಿವೇಶನ ಕರೆದು 15 ದಿನಗಳ ಕಾಲ ಚರ್ಚೆ ನಡೆಯಬೇಕು. ಆ ಭಾಗದ ಶಾಸಕರು ಈ ಚರ್ಚೆಯಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಜೆಡಿಎಸ್-ಕಾಂಗ್ರೆಸ್ ಸಮಿಶ್ರ ಸರ್ಕಾರದಲ್ಲೂ ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯವಾಗಿದೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಮುಖಂಡರು ಮುಂದಾಗಬೇಕು. ಕೂಡಲೇ ಉತ್ತರ ಕರ್ನಾಟಕ ಭಾಗಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು. ಯಾವುದೇ ಕಾರಣಕ್ಕೂ ಅಖಂಡ ಕರ್ನಾಟಕವನ್ನು ಇಬ್ಭಾಗಮಾಡುವ ಹೇಳಿಕೆಗಳನ್ನು ರಾಜಕೀಯ ಮುಖಂಡರುಗಳು ನೀಡಬಾರದು ಎಂದು ಮನವಿ ಮಾಡಿದರು.