ದಾವಣಗೆರೆ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಳೆದ 15-20 ವರ್ಷದಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ 270 ಪೌರ ಕಾರ್ಮಿಕರನ್ನು ಕಾಯಂ ಮಾಡಬೇಕು. ಜಿಲ್ಲಾಡಳಿತ ಪ್ರಕಟಿಸಿರುವ 34 ಜನರ ನೇರ ನೇಮಕಾತಿ ತಾತ್ಕಾಲಿಕ ಪಟ್ಟಿ ರದ್ದುಗೊಳಿಸಬೇಕು ಎಂದು ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಪೌರ ಕಾರ್ಮಿಕರ ಮಹಾ ಸಂಘದ ರಾಜ್ಯ ಉಪಾಧ್ಯಕ್ಷ ಎಲ್.ಎಂ. ಹನುಮಂತಪ್ಪ ಒತ್ತಾಯಿಸಿದ್ದಾರೆ.
ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ 270 ಪೌರ ಕಾರ್ಮಿಕರನ್ನು ಫೆ. 1ರ ಒಳಗಾಗಿ ಏಕಕಾಲಕ್ಕೆ ಕಾಯಂ ಮಾಡಬೇಕು. ಇಲ್ಲದಿದ್ದಲ್ಲಿ, ಫೆ. 2 ರಿಂದ ಎಲ್ಲಾ ರೀತಿಯ ಸ್ವಚ್ಛತಾ ಕಾರ್ಯ ಸ್ಥಗಿತಗೊಳಿಸಿ, ನಗರಪಾಲಿಕೆಗೆ ಮುತ್ತಿಗೆ ಹಾಕಲಾಗುವುದು. ಮೈಮೇಲೆ ಮಲ-ಮೂತ್ರ ಸುರಿದುಕೊಂಡು ಪ್ರತಿಭಟನೆ ನಡೆಸಲಾಗುವುದು. ರಾಜ್ಯ ಸಮಿತಿಯೊಂದಿಗೆ ಚರ್ಚಿಸಿ, ವಿಧಾನ ಸೌಧ ಮುತ್ತಿಗೆ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲಾಡಳಿತ 74 ಜನ ಪೌರ ಕಾರ್ಮಿಕರನ್ನು ನೇರ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿತ್ತು. ಜ.5 ರಂದು 34 ಜನರಿಗೆ ಮಾತ್ರ ನೇರ ನೇಮಕಾತಿಯಲ್ಲಿ ಕಾಯಂಗೊಳಿಸಲು ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿರುವುದಕ್ಕೆ ನಮ್ಮ ವಿರೋಧ ಇದೆ. ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಇರುವವರು ನಮ್ಮವರೇ. ಆದರೆ, ಆ 34 ಜನರನ್ನು ಮಾತ್ರ ನೇರ ನೇಮಕಾತಿ ಮಾಡಿಕೊಳ್ಳುವುದರಿಂದ ಇನ್ನುಳಿದರಿಗೆ ಅನ್ಯಾಯ ಆಗುತ್ತದೆ. ಹಾಗಾಗಿ ಜಿಲ್ಲಾಡಳಿತ ಪ್ರಕಟಿಸಿರುವ ತಾತ್ಕಾಲಿಕ ಆಯ್ಕೆ ಪಟ್ಟಿ ರದ್ದುಗೊಳಿಸಿ, ಏಕ ಕಾಲಕ್ಕೆ ಎಲ್ಲಾ 270 ಜನರನ್ನ ಕಾಯಂ ಮಾಡುವ ಮೂಲಕ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ದಾವಣಗೆರೆ ಮಹಾನಗರ ಪಾಲಿಕೆಯ 270 ಜನರು ಒಳಗೊಂಡಂತೆ ರಾಜ್ಯದ ಇತರೆ ನಗರಪಾಲಿಕೆ, ನಗರಸಭೆ, ಪುರಸಭೆಯ ಕೆಲಸ ಮಾಡುತ್ತಿರುವವರ ಕಾಯಂಗೆ ಒತ್ತಾಯಿಸಿ ಹಲವಾರು ಹೋರಾಟ ಕೈಗೊಂಡಿದ್ದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದ ಎಚ್. ಆಂಜನೇಯ ಇತರರು ಎಲ್ಲರನ್ನೂ ಏಕಕಾಲಕ್ಕೆ ಕಾಯಂಗೊಳಿಸುವ ತೀರ್ಮಾನ ತೆಗೆದುಕೊಂಡು ಆದೇಶವನ್ನೂ ಹೊರಡಿಸಿದ್ದರು. ಈಗ ಹಿಂದಿನ ಸರ್ಕಾರದ ಆದೇಶವನ್ನೇ ಉಲ್ಲಂಘಿಸಿ, ಕೆಲವರ ನೇರ ನೇಮಕಾತಿಗೆ ಮಾತ್ರ ಮುಂದಾಗಿರುವುದು ಸರಿಯಲ್ಲ. ನಮ್ಮ ಬೇಡಿಕೆಯಂತೆ ಎಲ್ಲರನ್ನೂ ಏಕ ಕಾಲಕ್ಕೆ ಕಾಯಂ ಮಾಡಬೇಕು ಎಂದು ಒತ್ತಾಯಿಸಿದರು.
ಪೌರ ಹಾಗೂ ಕೊಳಚೆ ನಿರ್ಮೂಲನಾ ಗುತ್ತಿಗೆ ಸಫಾಯಿ ಕರ್ಮಚಾರಿಗಳ ಸಂಘದ ಜಿಲ್ಲಾ ಅಧ್ಯಕ್ಷ ಎಲ್.ಡಿ. ಗೋಣೆಪ್ಪ ಮಾತನಾಡಿ, ನಗರಪಾಲಿಕೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ 260 ಪೌರ ಕಾರ್ಮಿಕರಲ್ಲಿ 34 ಜನರಿಗೆ ಮಾತ್ರ ಕಾಯಂ ಮಾಡಲು ಜಿಲ್ಲಾಡಳಿತ ಪ್ರಕಟಿಸಿರುವ ತಾತ್ಕಾಲಿಕ ಆಯ್ಕೆ ಪಟ್ಟಿಗೆ ಸಂಘದಿಂದ ಆಕ್ಷೇಪಣೆ ಸಲ್ಲಿಸಲಾಗಿದೆ. ತಾತ್ಕಾಲಿಕ ಆಯ್ಕೆ ಪಟ್ಟಿ ರದ್ದುಪಡಿಸಿ, ಎಲ್ಲಾ 270 ಜನರನ್ನು ಏಕ ಕಾಲಕ್ಕೆ ಕಾಯಂ ಮಾಡಬೇಕು ಎಂದು ಒತ್ತಾಯಿಸಿ ಫೆ. 2 ರಂದು ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಕೆ.ಸಿ. ಮಂಜುನಾಥ್, ಮತ್ತೂರಮ್ಮ, ಎಚ್. ರವಿವರ್ಧನ್, ಎಸ್. ಸಂದೀಪ್, ಎನ್. ಶಿವರಾಜ್, ಎಂ. ಓಮೇಶ್, ಎಸ್. ರಾಮಚಂದ್ರಪ್ಪ, ಆರ್. ಮೂರ್ತಿ, ಎಸ್. ರವಿಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.