Advertisement
ಅದೇ, ಪ್ರೀತಿ…
Related Articles
Advertisement
ನಿನ್ನ ಹೆಸರೇ ನೆನಪಿರಲಿಲ್ಲ ಮೊದಲು. ನಿನ್ನ ಹೆಸರು ಬೇಕಾಗಿಯೂ ಇರಲಿಲ್ಲ. ನಿನ್ನ ಪ್ರೀತಿಗೆ, ಮಾತಾಡೋ ರೀತಿಗೆ, ನಗುವ ಕಂಗಳಿಗೆ ನಾನೇ ನೆನಪಾಗೋ ಹೆಸರಿಟ್ಟಾಗಿತ್ತು. ಮನಸು ಆ ಹೆಸರ ಕರೆಯುತ್ತಿತ್ತು ಬಿಟ್ಟರೆ ಹೊರಗೆ ಹೇಳಿದ್ದಿಲ್ಲ. ಭಾವನೆಗಳನ್ನು ನಿನ್ನಲ್ಲಿ ಹಂಚಿದಷ್ಟು ಇನ್ನೊಬ್ಬರಿಗೆ ತಿಳಿಸಿದ್ದಿಲ್ಲ.
ಬಹುಶಃ ನಮ್ಮ ಪ್ರೀತಿಗೆ ನಾವಿಬ್ಬರೂ ಆಡಿದ ಜಗಳಗಳೂ ಸಾಥ್ ಕೊಟ್ಟಿರಬೇಕು. ಅದ್ಯಾರೋ ಪ್ರೇಮಿಗಳು ಮೊದಲೇ ಹೇಳಿದ್ದಾರೆಲ್ಲವೇ, ಜಗಳವಾಡಿದ್ರೇನೆ ಪ್ರೀತಿ ಹೆಚ್ಚಾಗೋದಂತೆ; ಹಾಗೇನೆ. ಜಗಳದ ನಂತರ, ಮಾತು ನಿಂತಾದ ಮೇಲೆ, ಕ್ಷಣಗಳಿಗೊಮ್ಮೆ ಮನಸು ಭಾರವಾಗುತ್ತ ಹೋದಂತೆ ಅನಿಸಿದಾಗ ಕೇಳುವ ಆ ‘SORRY’ ಪದ ತನ್ನಲ್ಲೇ ಮುಗಿಯದಷ್ಟು ಪ್ರೀತಿ ತಂದಿರುತ್ತದೆ. ದೂರ ಹೋಗು ಅಂದಿದ್ದ ಹೃದಯ ಹತ್ತಿರ ಬಾ ಎಂದು ಕೂಗಿ ಕರೆಯುತ್ತದೆ.
ಭಾವನೆಗಳಿಗೆ ಬೇಕಾದ ಬಣ್ಣ ಹಚ್ಚಿ ನಮಗಿಬ್ಬರಿಗೆ ಮಾತ್ರ ಕಾಣುವಂತೆ ಚಿತ್ರಿಸಿ ದಿನವೂ ನೋಡಿ ಖುಷಿಪಡುತ್ತಿದ್ದಿದ್ದು ನೆನಪಿರಬಹುದು ನಿನಗೆ. ಹುಟ್ಟಿದ ಹಬ್ಬದ ದಿನ ನೀ ಹೇಳಿದ ಶುಭಾಶಯಗಳು, ನೀ ಕೊಡಿಸಿದ ನೀಲಿ ಬಣ್ಣದ ಲೇಖನಿಯಲ್ಲಿರೋ ನಿನ್ನ ಹಸ್ತಾಕ್ಷರ, ಸಂಜೆ ಕುಳಿತು ಕುಡಿದ ಕಾಫಿ, ಜೊತೆಗೆ ನಡೆದು ಸವೆಸಿದ ಹೆಜ್ಜೆಗಳು, ಹಾದಿಗಳು….ಪ್ರೀತಿಯ ಹಬ್ಬಗಳ ತುಂಬಿರೋ ಹೊಸ ಸಂವತ್ಸರ.
ಇನ್ನೇನಿದೆ ಹೇಳೋಕೆ?…
ಮನಸಿನ ಅಪ್ಸರೆಯೆ ಕನಸಲ್ಲೂ ಕನವರಿಸು
ನಾ ಬಂದು ಮುದ್ದಿಸುವೆ ಮನಸು ಹೇಳುವಷ್ಟು
ಹೃದಯದ ಅರಮನೆಯ ಬಾಗಿಲೊಳಗೆ ಕಾಲಿರಿಸು
ಕೈ ಹಿಡಿದು ಕರೆದೊಯ್ವೆ, ದಾರಿ ಮುಗಿಯದಷ್ಟು.
ನಿನ್ನ ಪ್ರೇಮಲೋಕದ ಕಥೆಗಾರ- ಮೃಗಾಂಕ (ಶ್ರೀಶ)