Advertisement
ಪ್ರಾಣವೇ ನೀನೆನ್ನುತ ಪ್ರೇಮಿಸಿದ ಜೋಡಿಯದು, ಅದರ ಕುರುಹು ಆಡುತಿಹ ಕಂದಮ್ಮನೇ ಆಗಿಹುದು! ಕಾಲ ಕಳೆದಂತೆಲ್ಲ, ಅಲೆಯು ಅಪ್ಪಳಿಸಿದಂತೆಲ್ಲ ಸವೆದ ಸಂಬಂಧವದು, ಎಲ್ಲದರಿಂದ ಬೇಸತ್ತು ಬೇರಾಗ ಬಯಸಿಹುದು.
Related Articles
Advertisement
ʼಒಂದು ಕ್ಷಣ ತಡಿಯಣ್ಣ…ʼ ಅವನೆಂದಾಗ ಅಲೆಯೊಂದು ಗಹಗಹಿಸಿಹುದು, ʼದಿನವೂ ಒಂದೇ ನಾಟಕವೇ..!?ʼ ಎಂದಿಹುದು. ಕಳೆದ ದಿನದ ನೆನಪು ಮತ್ತೆ ಮರುಕಳಿಸಿಹುದು. ಭಾಸ್ಕರನ ನುಂಗಲು ಕಡಲು ಬಾಯ್ತೆರೆದು ನಿಂತಿದೆ. ಶಶಿಗೆ ಅದ ನೋಡಿ ಅಳುವೇ ಬಂದಂತಿದೆ.
ಇಬ್ಬರ ದುಃಖವನು ಮಗುವು ನೋವಿನಲಿ ನೋಡುತಿದೆ, ನಾಳೆ ನನಗೂ ಇದು ಕಾದಿದೆಯೇ ಎಂಬುದ ನೆನೆನೆನೆದು ನಿಂತಲ್ಲೇ ಬೆದರುತಿದೆ.
ತಂದೆಯ ನೆರಳಿದ್ದರೆ ಹಿಡಿದ ತಾಯಿಯ ಕೈಬೆರಳು ಸಡಿಲಾಗುವ ಭಯ, ಜನನಿಯ ಕೈತುತ್ತು ಸವಿಯ ಬಯಸಿದರೆ ಜನಕನ ಹೆಗಲಿಂದ ಜಾರುವ ಆತಂಕ.. ಆಗ ಒಬ್ಬರಿಲ್ಲದೆ ಇನ್ನೊಬ್ಬರಿರುತ್ತಿರಲಿಲ್ಲ, ಈಗ ಒಬ್ಬರಿರುವಲ್ಲಿ ಇನ್ನೊಬ್ಬರು ಇರಬಯಸುತ್ತಿಲ್ಲ.
ಸೂರ್ಯ ಚಂದ್ರರ ನೋವ ನೋಡಲಾಗುತ್ತಿಲ್ಲ, ಒಟ್ಟಿಗಿದ್ದ ಕ್ಷಣಗಳ ಮರೆಯಲಾಗುತ್ತಿಲ್ಲ..
ಉತ್ತರ ದಕ್ಷಿಣಗಳು ಮುಖಾಮುಖಿಯಾಗಿಹವು, ಕಣ್ಣಾಲಿಯ ತುಂಬಿಕೊಂಡು ಪರಸ್ಪರ ನೋಡಿಕೊಂಡಿಹವು. ಮಗುವಿನ ಮೊಗದಲ್ಲಿ ಮುಗುಳ್ನಗು ಮೂಡಿಹುದು, ಹೆತ್ತವರು ಹತ್ತಿರಾದುದ ನೋಡಿ ಹರ್ಷಿಸುತಲಿಹುದು.
ಮುಳುಗುತ್ತ ರವಿಯೆಂದ, ನಾವಂತೂ ಒಂದಾಗಲಿಲ್ಲ, ನಮ್ಮ ವೇದನೆಯ ನೋಡಿ ಅವರಾದರೂ ಒಂದಾದರಲ್ಲ. ಬಾರದ ನಗುವ ತಾ ತೊಡುತ ಬಾನಂಗಳವನೇರುತ ಶಶಿಯು ಉಸುರಿಹಳು, ‘ತನ್ನ ಆಟವನು ಆ ದೇವರೇ ಬಲ್ಲ’.
ಆಕೆ ನುಡಿದಿಹಳು, ನೀನೇ ನನಗೆಲ್ಲಾ. ಆತನೆಂದಿಹ, ನೀನಿಲ್ಲದೆ ನಾನು ಏನೂ ಅಲ್ಲ
ಮೈತ್ರಿ. ಎಸ್ ಅಶ್ವತ್ಥಪುರ
ಸಂತ ಅಲೋಶಿಯಸ್ ಕಾಲೇಜು, ಮಂಗಳೂರು