Advertisement

Valentine’s Day: ಓ ಗುಲಾಬಿಯೇ ನೀನೆಷ್ಟು ದುಬಾರಿ?

11:51 AM Feb 13, 2024 | Team Udayavani |

ಬೆಂಗಳೂರು:  ಪ್ರೇಮಿಗಳ ದಿನಾಚರಣೆಗೆ ಒಂದು ದಿನ ಮಾತ್ರ ಬಾಕಿ ಇದೆ. ಈ ದಿನ ಆತ್ಮೀಯ ಸಂಗಾತಿಗೆ ಬಗೆ ಬಗೆಯ ಉಡುಗೊರೆ ನೀಡಲಾಗುತ್ತದೆ. ಪ್ರೇಯಸಿ, ಪ್ರಿಯಕರನಿಗೆ ವಿಭಿನ್ನ, ಅಚ್ಚರಿಯ ಗಿಫ್ಟ್ ನೀಡಿ, ಆ ದಿನ ನೆನಪಿನಲ್ಲಿ ಉಳಿಯುವಂತೆ ಮಾಡಲಾಗುತ್ತದೆ. ಎಂತಹದ್ದೇ ಗಿಫ್ಟ್ ನೀಡಿದರೂ ಒಂದು ಗುಲಾಬಿ ಹೂ ಇರಲೇಬೇಕು. ಇದಕ್ಕಾಗಿ ಮಾರುಕಟ್ಟೆಯಲ್ಲಿ ಗುಲಾಬಿ ಹೂಗಳ ಖರೀದಿ ಭರಾಟೆ ಜೋರಾಗಿದೆ. ಒಂದು ವಾರದಿಂದಲೇ ಗುಲಾಬಿ ವ್ಯಾಪಾರು ಬಿರುಸು ಪಡೆದಿದೆ.

Advertisement

ದೇಶ-ವಿದೇಶಕ್ಕೆ ಹೂವು ಪೂರೈಕೆ ಮಾಡುವ ಹೆಬ್ಟಾಳದಲ್ಲಿನ ಬೆಂಗಳೂರು ಅಂತಾರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರ(ಐಎಫ್ಎಬಿ)ದಲ್ಲಿ ಇತರೆ ಹೂವುಗಳಿಗಿಂತ ಕೆಂಗುಲಾಬಿ, ಡಚ್‌ ರೋಸ್‌ಗೆ ಹೆಚ್ಚು ಬೇಡಿಕೆ ಇದೆ. ಡಚ್‌ ರೋಸ್‌ಗಳು ಸಾಧಾರಣವಾಗಿ ಕೆಂಪು, ಬಿಳಿ, ಪಿಂಕ್‌, ಹಳದಿ, ಕಿತ್ತಳೆ ಬಣ್ಣಗಳಲ್ಲಿ ಇರುತ್ತವೆ. ಕೆಂಗುಲಾಬಿಯ ಬೇಡಿಕೆ ಶೇ.45ರಷ್ಟು ಹೆಚ್ಚಾಗಿದೆ.

ಹೊಸೂರು ಸೇರಿದಂತೆ ಬೆಂಗಳೂರು ಗ್ರಾಮಾಂತರದ ವಿವಿಧ ಹಳ್ಳಿಗಳಲ್ಲಿ ರೈತರು ಬೆಳೆದ ಬಣ್ಣ-ಬಣ್ಣದ ಗುಲಾಬಿಗಳು, ಜಿಪೊÕàಫಿಲ್ಲಾ, ಬರ್ಡ್‌ ಆಫ್ ಪ್ಯಾರಡೈಸ್‌ (ಬಿಒಪಿ), ಸೇವಂತಿಗೆ, ಆರ್ಕಿಡ್ಸ್‌ ಒಳಗೊಂಡಂತೆ ವಿವಿಧ ಹೂವುಗಳನ್ನು ಈ ಕೇಂದ್ರಕ್ಕೆ ತರಲಾಗುತ್ತದೆ. ಫೆ.14ರ ವ್ಯಾಲೆಂಟೈನ್ಸ್‌ ಡೇ ಪ್ರಯುಕ್ತ ಕಳೆದ ಒಂದು ವಾರದಿಂದಲೇ ಗುಲಾಬಿಗಳಿಗೆ ಅಧಿಕ ಬೇಡಿಕೆ ಕಂಡು ಬಂದಿದ್ದು, ಸೋಮವಾರ ಒಂದೇ ದಿನಕ್ಕೆ 9 ಲಕ್ಷದಷ್ಟು ಗುಲಾಬಿ ಹೂವುಗಳು ಮಾರಾಟ­ವಾಗಿವೆ. ಪ್ರೇಮಿಗಳ ದಿನಕ್ಕೆ ಪೂರಕವಾಗಿ ಮಂಗಳವಾರದಂದು 10 ಲಕ್ಷದಷ್ಟು ಗುಲಾಬಿ ಹೂವುಗಳು ಮಾರಾಟವಾಗುವ ನಿರೀಕ್ಷೆ ಇದೆ.

ಬೆಂಗಳೂರಿನ ವಿವಿಧ ಹೂವು ಮಾರುಕಟ್ಟೆಗಳು ಹಾಗೂ ದೆಹಲಿ, ಕೋಲ್ಕತಾ, ವಿಶಾಖಪಟ್ಟಣಂ, ಪುಣೆ, ಮುಂಬೈ, ಹೈದರಾಬಾದ್‌, ಒಡಿಶಾ, ಗುಜರಾತ್‌, ಕೇರಳ ಮತ್ತು ದೇಶದ ಇತರೆ ಪ್ರಮುಖ ನಗರಗಳು ಸೇರಿದಂತೆ ಸಿಂಗಾಪುರ್‌, ಆಸ್ಟ್ರೇಲಿಯಾ, ಮಾಲ್ಡೀವ್ಸ್‌, ಜಪಾನ್‌, ನ್ಯೂಜಿಲೆಂಡ್‌, ಮಲೇಶಿಯಾ, ಅರಬ್‌ ರಾಷ್ಟ್ರಗಳಿಗೆ ಪ್ರತಿದಿನ ಲಕ್ಷಾಂತರ ಗುಲಾಬಿಗಳು ಈ ಕೇಂದ್ರದಿಂದ ರಫ್ತಾಗುತ್ತವೆ. ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ದಿನಕ್ಕೆ ಸುಮಾರು 5 ರಿಂದ 6 ಲಕ್ಷದಷ್ಟು ಹೂವುಗಳು ಮಾರಾಟವಾದರೆ, ಈ ಬಾರಿ 9 ಲಕ್ಷಕ್ಕೂ ಹೆಚ್ಚಿನ ಗುಲಾಬಿಗಳು ಮಾರಾಟವಾಗಿವೆ.

ಸಾಮಾನ್ಯ ದಿನಗಳಲ್ಲಿ ನಾಲ್ಕೈದು ಲಕ್ಷ ಹೂವುಗಳು ಮಾರಾಟವಾಗುತ್ತಿದ್ದು, ಸುಮಾರು 30 ಲಕ್ಷ ರೂ.ಗಳಷ್ಟು ವಹಿವಾಟು ನಡೆಯುತ್ತದೆ. ಆದರೆ, ಪ್ರೇಮಿಗಳ ದಿನಾಚರಣೆ ಅಂಗವಾಗಿ ಭಾನುವಾರ 8 ಲಕ್ಷ, ಸೋಮವಾರ 9 ಲಕ್ಷ ಗುಲಾಬಿಗಳ ಮಾರಾಟವಾಗಿದ್ದು, ಸುಮಾರು 80 ಲಕ್ಷ ರೂ.ಗಳ ವಹಿವಾಟು ನಡೆದಿದೆ. ದರದಲ್ಲಿಯೂ ಏರಿಕೆ ಕಂಡಿದ್ದು, ಸಾಮಾನ್ಯ ದಿನಗಳಲ್ಲಿ  6 ರಿಂದ 7 ರೂ.ಗೆ ಒಂದು

Advertisement

ಗುಲಾಬಿ ಮಾರಾಟವಾದರೆ, ವ್ಯಾಲೆಂಟೈನ್‌ ಡೇ ಪ್ರಯುಕ್ತ 10 ರಿಂದ 15 ರೂ.ಗಳಿಗೆ ಒಂದು ಗುಲಾಬಿ ಮಾರಾಟವಾಗುತ್ತಿದ್ದು, ಗುಲಾಬಿಗಳ ವಹಿವಾಟು ಜೋರಾಗಿ ನಡೆಯುತ್ತಿದೆ ಎಂದು ಕೇಂದ್ರದ ಅಧಿಕಾರಿಯೊಬ್ಬರು ತಿಳಿಸುತ್ತಾರೆ.

ಹರಾಜಿನಲ್ಲಿ ನೋಂದಣಿಯಾದವರು ಮಾತ್ರ ಭಾಗಿ: ಐಎಫ್‌ಎಬಿ ಕೇಂದ್ರದಲ್ಲಿ ನೋಂದಣಿಯಾದ ರೈತರು ಹಾಗೂ ಖರೀದಿದಾರರಿಗೆ ಮಾತ್ರ ವಹಿವಾಟು ನಡೆಸಲು ಅವಕಾಶವಿದೆ. ಇಲ್ಲಿ 325 ರೈತರು ಹಾಗೂ 235 ಜನ ಖರೀದಿದಾರರು ನೋಂದಣಿ ಮಾಡಿ­ಕೊಂಡಿದ್ದಾರೆ. 30 ರಿಂದ 40 ಜನ ಖರೀದಿದಾರರು ಮತ್ತು 60ಕ್ಕೂ ಜನ ರೈತರು ನಿತ್ಯ ನಡೆಯುವ ವಹಿವಾಟಿನಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಅವರು ತಿಳಿಸಿದರು.

ಐಎಫ್ಎಬಿನಲ್ಲಿ ಕೋಲ್ಡ್‌ ರೂಂ ವ್ಯವಸ್ಥೆ :

ರೈತರು ಹೂವುಗಳನ್ನು ಕಟಾವು ಮಾಡಿದ ನಂತರದಿಂದ ಸುಮಾರು 7 ರಿಂದ 10 ದಿನಗಳವರೆಗೆ ತಾಜಾತನ ಇರುವಂತೆ ಶೀತಲೀಕರಣ ವ್ಯವಸ್ಥೆಯನ್ನು ಐಎಫ್ಎಬಿ ಹೊಂದಿದೆ. ಇದರಿಂದಾಗಿ ಹರಾಜು ಪ್ರಕ್ರಿಯೆಯ ನಂತರವು ದೂರದ ಸ್ಥಳಗಳಿಗೆ ರಫ್ತು ಮಾಡುವ ಉದ್ದೇಶದಿಂದ ವಾರದವರೆಗೆ ತಾಜಾತನದಿಂದ ಇರುವಂತಹ ವಿಶೇಷ ಗುಣವನ್ನು ಇಲ್ಲಿಯ ಹೂವುಗಳು ಹೊಂದಿರುತ್ತವೆ ಎಂದು ಐಎಫ್ಎಬಿನ ಸಹಾಯಕ ಮುಖ್ಯ ವ್ಯವಸ್ಥಾಪಕಿ ವೀಣಾ ತಿಳಿಸುತ್ತಾರೆ.

ಕಳೆದ ವರ್ಷದ ವ್ಯಾಲೆಂಟೈನ್‌ ಡೇ ಗೆ ಹೋಲಿಸಿದರೆ, ಗುಲಾಬಿ ಹರಾಜು ಪ್ರಕ್ರಿಯೆಯಲ್ಲಿ ಈ ಬಾರಿ 30ರಿಂದ 40ರಷ್ಟು ಹೆಚ್ಚು ವಹಿವಾಟು ಹೆಚ್ಚಾಗಿದೆ. ಬೆಂಗಳೂರು ಸುತ್ತಲಿನ ಪ್ರದೇಶಗಳಲ್ಲಿ ಬೆಳೆಯುವ ಗುಲಾಬಿಗಳು ಉತ್ತಮ ಗುಣಮಟ್ಟದ್ದಾಗಿದ್ದು, ಸುಮಾರು ಒಂದು ವಾರದವರೆಗೆ ತಾಜಾತನ ಹೊಂದಿರುತ್ತವೆ. ಆದ್ದರಿಂದ ದೇಶ-ವಿದೇಶದಿಂದಲೂ ಬೇಡಿಕೆ ಹೆಚ್ಚಾಗಿದೆ.-ಎಂ.ವಿಶ್ವನಾಥ್‌, ವ್ಯವಸ್ಥಾಪಕ ನಿರ್ದೇಶಕ, ಐಎಫ್ಎಬಿ  

ಭಾರತಿ ಸಜ್ಜನ್‌

Advertisement

Udayavani is now on Telegram. Click here to join our channel and stay updated with the latest news.

Next