ತಾಲೂಕಿನ ವಳಗೆರೆಹಳ್ಳಿ ಗ್ರಾಮದಲ್ಲಿ 6 ಸಾವಿರಕ್ಕೂ ಅಧಿಕ ಜನರಿದ್ದು, ಎಲ್ಲಾ ಜನಾಂಗ ದವರಿರುವ ಗ್ರಾಮದಲ್ಲಿ ಹಲವು ಸಮಸ್ಯೆಗಳಿವೆ.
Advertisement
ಸರ್ಕಾರದ ಸೌಲಭ್ಯವನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಅಧಿಕಾರಿಗಳು ಸಂಪೂರ್ಣ ವಿಫಲರಾಗಿರುವ ಬಗ್ಗೆ ಸ್ಥಳೀಯ ಸಾರ್ವಜನಿಕರ ಟೀಕೆಗೆ ಗುರಿಯಾಗಿದ್ದಾರೆ.
ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಉಂಟಾಗಿದ್ದು, ರಸ್ತೆ ಬದಿಯಲ್ಲಿ ಆಳೇತ್ತರದ ಗಿಡಗಂಟೆಗಳು ಬೆಳೆದು ನಿಂತು ವಿಷ ಜಂತುಗಳ ವಾಸ ಸ್ಥಾನವಾಗಿ ಮಾರ್ಪಟ್ಟಿದೆ. ಕಳೆದ ಹಲವು ವರ್ಷಗಳಿಂದಲೂ ಗ್ರಾಮದಲ್ಲಿ ಕೆಲ ಬೀದಿಗಳಿಗೆ ರಸ್ತೆ ಡಾಂಬರೀಕರಣ ಕಾಣದೆ ಅದ್ವಾನ ಗೊಂಡಿದೆ. ಇದರಿಂದ ಸ್ಥಳೀಯ ಸಾರ್ವಜನಿಕರು, ದ್ವಿಚಕ್ರ ವಾಹನ ಸವಾರರು,
ಪಾದಚಾರಿಗಳು ಪರದಾಡುವ ಪರಿಸ್ಥಿತಿ ಬಂದಿದೆ.
Related Articles
Advertisement
ಕ್ರೀಡಾಂಗಣದ ಕಾಮಗಾರಿ ಅಪೂರ್ಣ: ಗ್ರಾಮದಲ್ಲಿ 2006-07ನೇ ಸಾಲಿನ ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 5 ಲಕ್ಷ ರೂ., ವೆಚ್ಚದಲ್ಲಿ ನಿರ್ಮಿಸಿರುವ ಕ್ರೀಡಾಂಗಣದಲ್ಲಿ ಹಲವು ಅದ್ವಾನಗಳು ಕಂಡು ಬಂದಿದೆ. ಸ್ಥಳೀಯಸಾರ್ವಜನಿಕರು ತಿಪ್ಪೆ ರಾಶಿ ಹಾಗೂ ಹುಲ್ಲಿನ ಮೆದೆಗಳನ್ನು ಹಾಕಲು ಮೀಸಲಿಟಿರುವುದು ಅಧಿಕಾರಿಗಳ ಕರ್ತವ್ಯಕ್ಕೆ ಹಿಡಿದ ಕನ್ನಡಿಯಂತಾಗಿದೆ. ಗ್ರಾಮೀಣ ಪ್ರತಿಭೆಗಳನ್ನು ಕ್ರೀಡೆಗಳಲ್ಲಿ ಪ್ರೋತ್ಸಾಹಿಸುವ ಉದ್ದೇಶದಿಂದ ಅಂದಿನ ಮಂಡ್ಯ ಜಿಲ್ಲಾ ಉಸ್ತುವಾರಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಸಚಿವರಾಗಿದ್ದ ಎಸ್.ಡಿ.ಜಯರಾಮು ಅವರು 5 ಲಕ್ಷ ರೂ., ವಳಗೆರೆಹಳ್ಳಿ ಕ್ರೀಡಾಂಗಣ ಅಭಿವೃದ್ಧಿಗೆ
ನೀಡಿದ್ದರೂ, ಇದುವರೆಗೆ ಕ್ರೀಡಾಂಗಣದ ಕಾಮಗಾರಿ ಪೂರ್ಣಗೊಂಡಿಲ್ಲ.
ಪ್ರೋತ್ಸಾಹಿಸದಿರುವುದು ವಿಪರ್ಯಾಸವೇ ಸರಿ. ಸುಮಾರು 10 ಎಕರೆ ಪ್ರದೇಶ ಹೊಂದಿರುವ ಕ್ರೀಡಾಂಗಣದಲ್ಲಿ ಗಿಡಗಂಟೆಗಳು ಬೆಳೆದು ನಿಂತಿದೆ. ಅಲ್ಲದೆ, ಮುರಿದುಬಿದ್ದ ಕಾಂಪೌಂಡ್, ಎಲ್ಲೆಂದರಲ್ಲಿ ಕಂಡು ಬರುವ ಮದ್ಯದ ಪ್ಯಾಕೇಟ್‌ಗಳು ಇನ್ನಿತರೆ ಅವ್ಯವಸ್ಥೆಗಳು ಕಂಡು ಬಂದಿದ್ದ ರೂ, ಸಂಬಂಧಿಸಿದ ಅಧಿಕಾರಿಗಳು ಇದುವರೆವಿಗೂ ಯಾವುದೇ ಕ್ರಮಕ್ಕೆ ಮುಂದಾಗದೆ ನಿರ್ಲಕ್ಷ್ಯ ಧೋರಣೆ
ಅನುಸರಿಸಿದ್ದಾರೆ. ಅನುದಾನ ಬಳಕೆಗೆ ತಾತ್ಸಾರ:
ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಗ್ರಾಮ ಅಭಿವೃದ್ಧಿಗೆ ಸಾಕಷ್ಟು ಅನುದಾನ ಬಿಡುಗಡೆಯಾಗಿದ್ದರೂ, ಸಮರ್ಪಕವಾಗಿ ಅನುದಾನವನ್ನು ಬಳಕೆ ಮಾಡಿಕೊಳ್ಳಲು ಅಧಿಕಾರಿಗಳು ತಾತ್ಸಾರ ಹೊಂದಿದ್ದಾರೆ. ನರೇಗಾ ಯೋಜನೆಯಡಿ ಕೋಟ್ಯಂತರ ರೂ. ಅನುದಾನವನ್ನು ಬಳಕೆ ಮಾಡಿಕೊಂಡು ಕ್ರೀಡಾಂಗಣ ಅಭಿವೃದ್ಧಿಗೆ ಆದ್ಯತೆ ನೀಡಬೇಕಾದ ಚುನಾಯಿತ ಜನಪ್ರತಿನಿಧಿಗಳು,
ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗದೆ ವಿಳಂಬ ಧೋರಣೆ ಅನುಸರಿಸಿದ್ದಾರೆ. ಮಾದರಿ ಗ್ರಾಮಕ್ಕೆ ಸದಸ್ಯರು ಶ್ರಮಿಸಲಿ: ಗ್ರಾಪಂ ಚುನಾವಣೆಯಲ್ಲಿ ಈಗಾಗಲೇ ಹತ್ತು ಮಂದಿ ಗ್ರಾಪಂ ಸದಸ್ಯರಾಗಿ ಆಯ್ಕೆಯಾಗಿದ್ದು, ವಳಗೆರೆಹಳ್ಳಿ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿಸಲು ಪ್ರತಿಯೊಬ್ಬ ಸದಸ್ಯರು ಶ್ರಮಿಸಬೇಕಿದೆ. ಅಲ್ಲದೆ,
ಗ್ರಾಮಕ್ಕೆ ಮೂಲ ಸೌಲಭ್ಯ ಕಲ್ಪಿಸುವ ಜತೆಗೆ ಕಳೆದ ಹಲವಾರು ವರ್ಷದಿಂದ ಡಾಂಬರೀಕರಣ ಕಾಣದೆ ಹಾಳಾಗಿರುವ ರಸ್ತೆಗಳನ್ನು ದುರಸ್ತಿಗೊಳಿಸಿ ಸಾರ್ವಜನಿಕರ ಅನುಕೂಲ ಕಲ್ಪಿಸುವರೇ ಕಾದು ನೋಡಬೇಕಾಗಿದೆ. ಕಳೆದ 14 ವರ್ಷದಿಂದ ನನೆಗುದ್ದಿಗೆ ಬಿದ್ದಿರುವ ಕ್ರೀಡಾಂಗಣವನ್ನು ಅಭಿವೃದ್ಧಿಗೊಳಿಸಿ, ಗ್ರಾಮೀಣ ಕ್ರೀಡಾ ಪ್ರತಿಭೆಗಳ ಅನಾವರಣಕ್ಕೆ ಅವಕಾಶ ಕಲ್ಪಿಸುವ ಜತೆಗೆ ಗ್ರಾಮಾಭಿವೃದ್ಧಿಗೆ ಮೂಲ ಸೌಲಭ್ಯ ಕಲ್ಪಿಸಲು ಸಂಬಂಧಿಸಿದ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಇತ್ತ ಗಮನಹರಿಸಬೇಕಾಗಿದೆ. – ಎಸ್.ಪುಟ್ಟಸ್ವಾಮಿ