Advertisement
ಈಗ ಶೇಖ್ ಜಲೀಲ್ ಸಾಹೇಬ್ ಮತ್ತು ಅವರ ಸಹೋದರ ಅಕ್ಬರ್ ಸಾಹೇಬ್ ವಾಲಗ ಸೇವೆಯಲ್ಲಿ ನಿರತರಾಗಿದ್ದಾರೆ. ಅವರ ತಂದೆ (ಪಿತ) ದಿ| ಬಾಬನ್ ಸಾಹೇಬ್, ತಾತ (ಪಿತಾಮಹ) ಇಮಾಮ್ ಸಾಹೇಬ್, ಮುತ್ತಾತ (ಪ್ರಪಿತಾಮಹ) ಮುಗ್ಧಂ ಸಾಹೇಬ್, ಹಿರಿ ಮುತ್ತಜ್ಜ (ಜ್ಯೇಷ್ಠ ಪ್ರಪಿತಾಮಹ) ಮತ್ತ ಸಾಹೇಬ್ ಹೀಗೆ ಐದು ತಲೆಮಾರುಗಳ ಇತಿಹಾಸ ಮನೆತನಕ್ಕಿದೆ.
Related Articles
Advertisement
ಜಲೀಲ್ ಅವರ ಮುತ್ತಾತ ಮುಗ್ಧಂ ಸಾಹೇಬ್ ಅವರಿಗೆ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಬಂಗಾರದ ನಾಗಸ್ವರವನ್ನು ನೀಡುವ ಬಗ್ಗೆ ಪ್ರಸ್ತಾವನೆ ಬಂದಿತ್ತು. ಆದರೆ ಕಳ್ಳಕಾಕರ ಭಯದಿಂದ ಅದನ್ನು ಪಡೆಯಲು ನಿರಾಕರಿಸಿದ್ದರು. ಆದರೂ ಹಠ ಬಿಡದ ಅಂದಿನ ಆಡಳಿತದವರು ಬೆಳ್ಳಿಯ ನಾಗಸ್ವರಕ್ಕೆ ಬಂಗಾರದ ಗುಬ್ಬಿಯನ್ನು ಜೋಡಿಸಿಕೊಟ್ಟಿದ್ದರು. 70-80 ವರ್ಷಗಳಿಂದಲೂ ಅದನ್ನು ಅತ್ಯಂತ ಜೋಪಾನವಾಗಿಟ್ಟುಕೊಂಡು ಬಂದಿರುವ ಶೇಖ್ ಜಲೀಲ್ ಸಾಹೇಬ್ ಈಗಲೂ ಪ್ರತೀ ಮಂಗಳವಾರ ಹೊಸ ಮಾರಿಗುಡಿಗೆ ಅದನ್ನು ಕೊಂಡೊಯ್ದು ವಾಲಗ ಸೇವೆ ನುಡಿಸುತ್ತಾರೆ.
ದೇವರ ಸೇವೆಯಿಂದ ಬೆಳೆದಿದ್ದೇವೆ
ಮನೆಯಲ್ಲಿದ್ದಾಗಲೆಲ್ಲ ಸಮುದಾಯದ ಧಾರ್ಮಿಕ ರೀತಿ, ನೀತಿ, ರಿವಾಜುಗಳನ್ನು ನಡೆಸುತ್ತೇವೆ. ಮಸೀದಿಗೆ ಹೋಗುವ ಸಮಯದಲ್ಲಿ ಮಸೀದಿಗೆ ಹೋಗುತ್ತೇವೆ. ದೇವರ ಸೇವೆ ಮಾಡುತ್ತೇವೆ. ದೇವರ ಸೇವೆ ಪರಂಪರಾಗತವಾಗಿ ಬಂದಿರುವ ಜವಾಬ್ದಾರಿಯಾಗಿದೆ. ಪವಿತ್ರ ರಮ್ಜಾನ್ ಮಾಸಾಚರಣೆಯಲ್ಲಿ ಉಪವಾಸವಿದ್ದಾಗಲೂ ದೇವರು ವಾಲಗ ಸೇವೆ ಮಾಡುವ ಶಕ್ತಿ ನೀಡುತ್ತಾನೆ. ಹಿರಿಯರ ಕಾಲದಿಂದಲೂ ದೇವರ ಆಶೀರ್ವಾದ ನಮ್ಮ ಜತೆಗಿದ್ದು, ನಮ್ಮನ್ನು ದೇವರೇ ರಕ್ಷಿಸುತ್ತಾರೆ. ಯಾರು ಏನೇ ಹೇಳಿದರೂ ದೇವರ ಸೇವೆಯನ್ನು ಮಾತ್ರ ನಿಲ್ಲಿಸುವುದಿಲ್ಲ. ಕಾಪು ಸಾವಿರ ಸೀಮೆಯ ದೈವ ದೇವರುಗಳ ಅನುಗ್ರಹದಿಂದಲೇ ನಮ್ಮ ಕುಟುಂಬ ಬೆಳೆದಿದೆ, ಬೆಳಗುತ್ತಿದೆ. ಮುಂದೆಯೂ ಇದೇ ನಂಬಿಕೆ ನಮ್ಮನ್ನು ಬೆಳೆಸುತ್ತದೆ ಎನ್ನುತ್ತಾರೆ ಶೇಖ್ ಜಲೀಲ್ ಸಾಹೇಬ್.
ನನ್ನ ಅಜ್ಜ ಇಮಾಮ್ ಸಾಹೇಬ್ ಅವರು ತೀರಿ ಹೋಗುವಾಗ ನನಗೆ 18 ವರ್ಷ. ಅಜ್ಜ ತೀರಿ ಹೋದ ಬಳಿಕ ತಂದೆಯ ಜತೆಗೆ ಸೇರಿಕೊಂಡು ಕಳೆದ 34 ವರ್ಷಗಳಿಂದ ವಾಲಗ ಸೇವೆ ನಡೆಸುತ್ತಾ ಬಂದಿದ್ದೇನೆ. ತಂದೆ ತೀರಿ ಹೋದ ಬಳಿಕ ಕಳೆದ 10 ವರ್ಷಗಳಿಂದ ಸಹೋದರ ಅಕ್ಬರ್ ಸಾಹೇಬ್ ನನ್ನೊಂದಿಗೆ ಕೈಜೋಡಿಸುತ್ತಿದ್ದಾನೆ. ನನ್ನಲ್ಲಿ ಗಂಡು ಸಂತಾನವಿಲ್ಲ, ಸಹೋದರರಿಗೆ ಗಂಡು ಸಂತಾನವಿದೆ. ಅವರು ಮುಂದುವರಿಸಿಕೊಂಡು ಹೋಗಬೇಕೆಂಬ ಆಶಯವಿದೆ. -ಶೇಖ್ ಜಲೀಲ್ ಸಾಹೇಬ್