Advertisement

ಬ್ರಿಗೇಡ್‌  ವಾಕ್ಸಮರ: ಬಿಎಸ್‌ವೈ, ಈಶ್ವರಪ್ಪ ಬಣಗಳ ಚಕಮಕಿ

03:45 AM Jan 22, 2017 | Harsha Rao |

ಬೆಂಗಳೂರು/ಕಲಬುರಗಿ: ಬಿಸಿಲ ನಾಡು ಕಲಬುರಗಿಯಲ್ಲಿ ಶನಿವಾರ ದಿಂದ 2 ದಿನಗಳ ರಾಜ್ಯ ಬಿಜೆಪಿ ಕಾರ್ಯಕಾರಿಣಿ
ಆರಂಭವಾಗಿದ್ದು, ಕಾರ್ಯಕಾರಿಣಿಯ ಮೊದಲ ದಿನವೇ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಕುರಿತಂತೆ ಗದ್ದಲ ನಡೆಯಿತು.
ಪರಸ್ಪರ ಘೋಷಣೆ, ಸವಾಲು-ಪ್ರತಿ ಸವಾಲುಗಳಿಗೆ ವೇದಿಕೆಯಾಯಿತು.

Advertisement

ಕಾರ್ಯಕಾರಿಣಿ ಆರಂಭವಾಗುತ್ತಿದ್ದಂತೆ ಬರ ಪರಿಸ್ಥಿತಿ ಕುರಿತು ಪಕ್ಷ ನಡೆಸಿದ ಸಮೀಕ್ಷೆಯ ವರದಿ ಕುರಿತು ಚರ್ಚೆ
ನಡೆಯಿತು. ಜತೆಗೆ, ರಾಜ್ಯ ಬಿಜೆಪಿ ಘಟಕ ಹಾಗೂ ಜಿಲ್ಲಾ ಘಟಕಗಳಲ್ಲಿ ನಡೆದಿರುವ ಚಟುವಟಿಕೆಗಳ ಬಗ್ಗೆ ವರದಿ ಒಪ್ಪಿಸಲಾಯಿತು. ಈ ವೇಳೆ, ಕೆಲವು ಪದಾಧಿಕಾರಿಗಳು ಬ್ರಿಗೇಡ್‌ ವಿಚಾರ ಪ್ರಸ್ತಾಪಿಸಿದರು. ಇದು ಗದ್ದಲಕ್ಕೆ ಮೂಲ ಕಾರಣವಾಯಿತು. ಹಲವು ಜಿಲ್ಲೆಗಳ ಅಧ್ಯಕ್ಷರು ಸೇರಿದಂತೆ ಕೆಲ ನಾಯಕರು, ಬ್ರಿಗೇಡ್‌ ಗೊಂದಲದಿಂದಾಗಿ ಕಾರ್ಯ
ಕರ್ತರಲ್ಲೂ ಗೊಂದಲ ಸೃಷ್ಟಿಯಾಗಿದೆ.

ಹಿರಿಯ ನಾಯಕರು ಪರಸ್ಪರ ಬಣ ಗಳನ್ನು ರಚಿಸಿಕೊಂಡು ಪ್ರತ್ಯೇಕವಾಗಿ ಸಭೆಗಳನ್ನು ನಡೆಸುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ ಎಂಬ ವಾತಾವರಣ ಇರುವಾಗ ಈ ರೀತಿಯ ಸಮಸ್ಯೆಗಳು ಎದುರಾಗಿ ಪಕ್ಷ ಅಧಿಕಾರ ಕಳೆದುಕೊಳ್ಳುವಂತಾಗಬಾರದು. ಅದಕ್ಕೆ ಈಗಲೇ ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದರು. ಈ ವೇಳೆ, ಬ್ರಿಗೇಡ್‌ ಸಭೆಗಳಲ್ಲಿ ಪಾಲ್ಗೊಳ್ಳುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಆಪ್ತರಾಗಿರುವವರು ಒತ್ತಾಯಿಸಿದರೆ, ತಾಕತ್ತಿದ್ದರೆ ಕ್ರಮ ಕೈಗೊಳ್ಳಿ ಎಂದು ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ಅವರ ಬಣದವರು ಸವಾಲು ಹಾಕಿದರು. ಎರಡೂ
ಬಣಗಳ ನಡುವೆ ಮಾತಿನ ಚಕಮಕಿ ನಡೆದು, ಗದ್ದಲ ಸೃಷ್ಟಿಯಾಯಿತು. ಈ ವೇಳೆ, ಬ್ರಿಗೇಡ್‌ ವಿಷಯ ಪ್ರಸ್ತಾಪಿಸಿದವರ ವಿರುದ್ಧ ಬಿಎಸ್‌ವೈ ಹರಿಹಾಯ್ದರು. ಈ ಮಧ್ಯೆ, ಬ್ರಿಗೇಡ್‌ ವಿಚಾರದಲ್ಲಿ ಉಂಟಾಗಿರುವ ಗೊಂದಲ ಬಗೆಹರಿಸ ಬೇಕು.

ನಂತರ, ಇತರ ಕಾರ್ಯಕ್ರಮ ಆರಂಭಿಸಬೇಕು ಎಂದು ಕೆಲವು ಪದಾಧಿಕಾರಿಗಳು ಪಟ್ಟು ಹಿಡಿದರು. ವಿಷಯ ತಿಳಿದು ಅಲ್ಲಿಗೆ ಆಗಮಿಸಿದ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ ರಾವ್‌, ಎರಡೂ ಕಡೆಯ ವರಿಗೆ ಸುಮ್ಮನಿರುವಂತೆ ತಾಕೀತು ಮಾಡಿದರು. ಈ ಕುರಿತು ಏನೇ ಭಿನ್ನಾಭಿಪ್ರಾಯವಿದ್ದರೂ ತಮ್ಮೊಂದಿಗೆ ವೈಯಕ್ತಿಕವಾಗಿ ಮಾತನಾಡಿ ಎಂದು ಸೂಚಿಸಿ, ಕೆಲವರನ್ನು ಪ್ರತ್ಯೇಕವಾಗಿ ಕರೆದು ಮಾತುಕತೆ ನಡೆಸಿದರು.

ಬಿಎಸ್‌ವೈ-ಈಶ್ವರಪ್ಪ ಮುನಿಸು ಮುಂದುವರಿಕೆ:ಈ ಮಧ್ಯೆ, ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಿನ ಮುನಿಸು ಕಾರ್ಯಕಾರಿಣಿ ಯಲ್ಲೂ ಮುಂದುವರಿದಿದ್ದು, ಪರಸ್ಪರ ಚರ್ಚಿಸದೆ ದೂರವೇ ಉಳಿದಿದ್ದರು. ಇದು ಕೂಡ ಪಕ್ಷದ ಪದಾಧಿಕಾರಿಗಳ ಅಸಮಾಧಾನಕ್ಕೆ ಕಾರಣವಾಯಿತು. ಕೆಲವರು ಅದನ್ನು ಬಹಿರಂಗವಾಗಿಯೂ ಹೇಳಿಕೊಂಡರು ಎನ್ನಲಾಗಿದೆ.

Advertisement

ಈಶ್ವರಪ್ಪ ಜತೆ ಮುರಳೀಧರರಾವ್‌ ಸಭೆ: ಈ ಮಧ್ಯೆ, ಈಶ್ವರಪ್ಪ ಜತೆ ಮುರಳೀಧರರಾವ್‌ ಪ್ರತ್ಯೇಕ ಮಾತುಕತೆ ನಡೆಸಿದರು. ಯಡಿಯೂರಪ್ಪ ಅವರ ವಿರುದ್ಧ ನೀಡಿದ ಹೇಳಿಕೆಗಳ ಬಗ್ಗೆ ಮುರಳೀಧರರಾವ್‌ ಪ್ರಸ್ತಾಪಿಸಿದ್ದು, ಈ ಸಂದರ್ಭದಲ್ಲಿ ತಮ್ಮ ಹೇಳಿಕೆಯ ಕುರಿತು ಈಶ್ವರಪ್ಪ ಸ್ಪಷ್ಟನೆ ನೀಡಿದರು. ಅಲ್ಲದೆ, ಪಕ್ಷದ ರಾಷ್ಟ್ರೀಯ ನಾಯಕರೇ ಮಧ್ಯಪ್ರವೇಶಿಸಿ ಗೊಂದಲ ಬಗೆಹರಿಸಬೇಕು ಎಂದು ಆಗ್ರಹಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿ ಯಡಿಯೂರಪ್ಪ ಜತೆಗೂ ಪ್ರತ್ಯೇಕವಾಗಿ ಚರ್ಚಿಸುತ್ತೇನೆ. ಇಬ್ಬರ ಅಭಿಪ್ರಾಯಗಳನ್ನೂ ವರಿಷ್ಠರ ಗಮನಕ್ಕೆ ತರುತ್ತೇನೆ ಎಂದು ಹೇಳಿ ಮಾತುಕತೆಗೆ ತೆರೆ ಎಳೆದಿದ್ದಾರೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next