Advertisement

Mysore Dasara 2023; ವಜ್ರಮುಷ್ಟಿ ಕಾಳಗ: ಕೇವಲ 13 ಸೆಕೆಂಡ್ ನಲ್ಲಿ ಚಿಮ್ಮಿದ ರಕ್ತ

01:01 PM Oct 24, 2023 | Team Udayavani |

ಮೈಸೂರು: ವಿಜಯ ದಶಮಿ ಹಿನ್ನೆಲೆಯಲ್ಲಿ ಅರಮನೆಯ ಶ್ವೇತ ವರಹ ದೇವಸ್ಥಾನದಲ್ಲಿ ವಜ್ರ ಮುಷ್ಟಿ ಕಾಳಗ ನಡೆಯಿತು. ಮಹಾರಾಜರು ವಿಜಯ ಯಾತ್ರೆಗೆ ಹೊರಡುವ ಮುನ್ನ ನಡೆಯುವ ಈ ಜಟ್ಟಿ ಕಾಳಗದಲ್ಲಿ ಚನ್ನಪ್ಪಟ್ಟಣ ಪ್ರವೀಣ್ ಜಟ್ಟಿ ಕೇವಲ 13 ಸೆಕೆಂಡ್ ನಲ್ಲಿ ಎದುರಾಳಿಯ ರಕ್ತ ಚಿಮ್ಮಿಸಿದರು.

Advertisement

ರಾಜವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪಟ್ಟದ ಕತ್ತಿಗೆ ಪೂಜೆ ಸಲ್ಲಿಸಿದ ಕೂಡಲೇ ಕಾಳಗ ಪ್ರಾರಂಭಗೊಂಡಿತು.

ಈ ಪೈಕಿ ಚನ್ನಪಟ್ಟಣದ ಉಸ್ತಾದ್ ಪುರುಷೋತ್ತಮ್ ಜಟ್ಟಿ ಶಿಷ್ಯ ಪ್ರವೀಣ್ ಜಟ್ಟಿ ತನ್ನ ಎದುರಾಳಿ ಮೈಸೂರಿನ ಉಸ್ತಾದ್ ಬಾಲಾಜಿ ಅವರ ಶಿಷ್ಯ ಎಸ್.ಪ್ರದೀಪ್ ಜಟ್ಟಿ ತಲೆಭಾಗಕ್ಕೆ ವಜ್ರನಖ ದಿಂದ ಹೊಡೆದು 13 ಸೆಕೆಂಡಿನಲ್ಲೇ ರಕ್ತ ಚಿಮ್ಮಿದರು.

ಮೈಸೂರಿನ ಉಸ್ತಾದ್ ಬಾಲಾಜಿ ಅವರ ಶಿಷ್ಯ ಎಸ್.ಪ್ರದೀಪ್ ಜಟ್ಟಿ ಮತ್ತು ಚನ್ನಪಟ್ಟಣದ ಉಸ್ತಾದ್ ಪುರುಷೋತ್ತಮ್ ಜಟ್ಟಿ ಶಿಷ್ಯ ಪ್ರವೀಣ್ ನಡುವೆ ಕಾಳಗ ನಡೆಯಿತು. ಎರಡನೇ ಜೋಡಿಯಾಗಿ ಚಾಮರಾಜನಗರದ ಉಸ್ತಾದ್ ಬಂಗಾರ ಜಟ್ಟಿ ಶಿಷ್ಯ ವೆಂಕಟೆಶ್ ಜಟ್ಟಿ ಮತ್ತು ಬೆಂಗಳೂರಿನ ಬೆಂಗಳೂರಿನ ಉಸ್ತಾದ್ ಕೃಷ್ಣ ಜಟ್ಟಿ ಶಿಷ್ಯ ಬಂಗಾರ ಪ್ರಮೋದ್ ನಡುವೆ ಕಾಳಗ ಜರುಗಿತು.

ಆ ಪೈಕಿ ಪ್ರದೀಪ್ ಜಟ್ಟಿ ಮತ್ತು ಪ್ರವೀಣ್ ಜಟ್ಟಿಗಳ ನಡುವಿನ ಕಾಳಗ ರೋಮಾಂಚಕಾರಿಯಾಗಿತ್ತು. ಮದಗಜಗಳಂತೆ ಒಬ್ಬರ ಮೇಲೊಬ್ಬರು ಎರಗಿ ಮುಷ್ಠಿ ಪ್ರಯೋಗಕ್ಕೆ ಮುಂದಾಗುತ್ತಿದ್ದರು. ಹುರಿಗಟ್ಟಿದ ಮೈಯನ್ನು ಅರಳಿಸುತ್ತ, ಕೆಂಗಣ್ಣಿನಿಂದ ದಿಟ್ಟಿಸುತ್ತಾ ಪ್ರವೀಣ್ ಜಟ್ಟಿ ಛಂಗನೆ ಎಗರಿ ಮಿಂಚಿನ ವೇಗದಲ್ಲಿ ಎದುರಾಳಿ ಪ್ರದೀಪ್ ಜಟ್ಟಿ ತಲೆಭಾಗಕ್ಕೆ ವಜ್ರನಖ ದಿಂದ ಹೊಡೆದು ಕ್ಷಣಾರ್ಧದಲ್ಲೇ ರಕ್ತ ಚಿಮ್ಮಿಸಿದರು.

Advertisement

ಮತ್ತೊಂದು ಕಾಳಗದಲ್ಲಿ ಬೆಂಗಳೂರಿನ ಉಸ್ತಾದ್ ಕೃಷ್ಣ ಜಟ್ಟಿ ಶಿಷ್ಯ ಪ್ರಮೋದ್ ಜಟ್ಟಿ ತನ್ನ ಎದುರಾಳಿ ಚಾಮರಾಜನಗರದ ಉಸ್ತಾದ್ ಬಂಗಾರ ಜಟ್ಟಿ ಶಿಷ್ಯ ವೆಂಕಟೆಶ್ ಜಟ್ಟಿ ತಲೆಭಾಗಕ್ಕೆ ವಜ್ರನಖ ದಿಂದ ಹೊಡೆದು 15 ಸೆಕೆಂಡಿನಲ್ಲೇ ರಕ್ತ ಚಿಮ್ಮಿದರು. ಕಾತರದಿಂದ ಗಂಟೆಗಟ್ಟಲೆ ಕಾದು ಕುಳಿತಿದ್ದವರಿಗೆ ಕಾಳಗವನ್ನು ಕಣ್ತುಂಬಿಕೊಂಡಿದ್ದು 15 ಸೆಕೆಂಡ್ ಮಾತ್ರ. ಕಾಳಗದಲ್ಲಿ ರಕ್ತ ಚಿಮ್ಮಿದ ಕಾರಣ ಶುಭಸೂಚಕ ಎಂಬಂತೆ ಅಲ್ಲಿಗೆ ಕಾಳಗಕ್ಕೆ ಮಂಗಳ ಹಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next