ಮಂಡ್ಯ: ವಿಶ್ವವಿಖ್ಯಾತ ಶ್ರೀ ಚೆಲುವನಾರಾಯಣ ಸ್ವಾಮಿ ವೈರಮುಡಿ ಉತ್ಸವ ಬುಧವಾರ ರಾತ್ರಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಮೇಲುಕೋಟೆ ರಾಜಬೀದಿಯಲ್ಲಿ ವೈಭವದಿಂದ ನಡೆಯಿತು.
ಭಗವಂತನ ಕಿರೀಟ ಎಂದೇ ನಂಬಿರುವ “ವೈರಮುಡಿ’ ಕಿರೀಟ ಧರಿಸಿದ ಸ್ವಾಮಿಯ ಸೊಬಗನ್ನು ಭಕ್ತರು ಕಣ್ತುಂಬಿಕೊಂಡರು. ಗರುಡಾರೂಢನಾದ ಶ್ರೀ ಚೆಲುವನಾರಾಯಣನನ್ನು ಅಲಂಕರಿಸಿದ್ದ ವರ್ಣಮಯ ಪುಷ್ಪಾಹಾರಗಳು ಉತ್ಸವದ ಚೆಲುವಿಗೆ ಮತ್ತಷ್ಟು ಮೆರುಗು ನೀಡಿದ್ದವು.
ರಾತ್ರಿಯಾಗಶಾಲೆ ಮತ್ತು ಗರುಡದೇವನ ಮೆರವಣಿಗೆ ನಂತರ ಮಹಾಮಂಗಳಾರತಿಯ ಪ್ರಾರ್ಥನೆ ಸಲ್ಲಿಸಿದ ಬಳಿಕ ರಾತ್ರಿ 9.45ಕ್ಕೆ ಆರಂಭವಾದ ವೈರಮುಡಿ ಉತ್ಸವ ಮುಂಜಾನೆ 3.30 ಗಂಟೆವರೆಗೂ ಸಾಂಗವಾಗಿ ನಡೆಯಿತು.
ವೈರಮುಡಿ ಮೆರವಣಿಗೆ: ಬೆಳಗ್ಗೆ ಮಂಡ್ಯ ಜಿಲ್ಲಾ ಖಜಾನೆಯಿಂದ ಬಿಗಿ ಪೊಲೀಸ್ ಭದ್ರತೆಯಲ್ಲಿ ತರಲಾದ ವೈರಮುಡಿ ಮತ್ತು ರಾಜಮುಡಿ ಕಿರೀಟಗಳನ್ನು ಪಾರ್ವತಿ ಮಂಟಪದ ಬಳಿಯಿಂದ ಬಂಗಾರದ ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆಯಲ್ಲಿ ಸಂಜೆ 6.30ಕ್ಕೆ ಶ್ರೀ ಚಲುವನಾರಾಯಣಸ್ವಾಮಿ ದೇವಸ್ಥಾನಕ್ಕೆ ತರಲಾಯಿತು.
ವೈರಮುಡಿ ಧಾರಣೆ: ದೇವಸ್ಥಾನದ ಪ್ರಧಾನ ಅರ್ಚಕರ ಸಮ್ಮುಖದಲ್ಲಿ ವೈರಮುಡಿಯನ್ನು ಪಡೆದು ಶ್ರೀ ರಾಮಾನುಜ ಚಾರ್ಯರ ಸನ್ನಿಧಿಯಲ್ಲಿ ಶ್ರೀ ಚಲುವನಾರಾಯಣಸ್ವಾಮಿ ಉತ್ಸವ ಮೂರ್ತಿಗೆ ಎಲ್ಲ ಆಭರಣಗಳೊಂದಿಗೆ ವೈರಮುಡಿ ಕಿರೀಟ ಧಾರಣೆ ಮಾಡಿ ಉತ್ಸವಕ್ಕೆ ಅಣಿಗೊಳಿಸಲಾಯಿತು. ರಾತ್ರಿ 8.30ರ ಹೊತ್ತಿಗೆ ಶ್ರೀ ಚಲುವನಾರಾಯಣಸ್ವಾಮಿ ವೈರಮುಡಿ ಉತ್ಸವ ರಾಜಬೀದಿಗೆ ಬರುತ್ತಿದ್ದಂತೆ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ತಮಿಳುನಾಡು, ಆಂಧ್ರಪ್ರದೇಶ, ಕೇರಳ ಹಾಗೂ ಕರ್ನಾಟಕದ ವಿವಿಧ ಭಾಗಗಳಿಂದ ಭಕ್ತರು ತಂಡೋಪತಂಡವಾಗಿ ಆಗಮಿಸಿದ್ದರು.