Advertisement

ಖಜಾನೆಯಿಂದ ಮೇಲುಕೋಟೆಗೆ ವೈರಮುಡಿ ಕಿರೀಟ; ದಾರಿಯುದ್ದಕ್ಕೂ ಗ್ರಾಮಸ್ಥರಿಂದ ಪೂಜೆ

03:16 PM Mar 14, 2022 | Team Udayavani |

ಮಂಡ್ಯ: ಕಳೆದ ಎರಡು ವರ್ಷಗಳಿಂದ ನಿಂತಿದ್ದ ವಿಶ್ವಪ್ರಸಿದ್ಧ ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿಯ ವೈರಮುಡಿ ಉತ್ಸವ ಹಿನ್ನೆಲೆಯಲ್ಲಿ ನಗರದ ಜಿಲ್ಲಾ ಖಜಾನೆಯಿಂದ ಅನುಚಾನೂಪದ್ಧತಿಯಂತೆ ವೈರಮುಡಿ ಕಿರೀಟ ಹಾಗೂ ತಿರುವಾಭರಣಗಳನ್ನು ಮೇಲುಕೋಟೆಗೆ ಕೊಂಡೊಯ್ಯಲಾಯಿತು.

Advertisement

ಸೋಮವಾರ ಬೆಳಿಗ್ಗೆ 8 ಗಂಟೆಗೆ ಜಿಲ್ಲಾಧಿಕಾರಿ ಎಸ್.ಅಶ್ವತಿ ನೇತೃತ್ವದಲ್ಲಿ ಖಜಾನೆಯನ್ನು ತೆರೆಯಲಾಯಿತು. ವಜ್ರಖಚಿತ ಕಿರೀಟ ಹಾಗೂ ತಿರುವಾಭರಣಗಳಿಗೆ ಮೇಲುಕೋಟೆ ದೇವಾಲಯದ ಸ್ಥಾನೀಕ ಅರ್ಚಕರು ವಿಶೇಷ ಪೂಜೆ ಸಲ್ಲಿಸಿದರು. ನಂತರ ಮೇಲುಕೋಟೆಯಿಂದ ಆಗಮಿಸಿದ ಪರಕಾಲ ಮಠದ ವಾಹನದಲ್ಲಿ ಪೊಲೀಸ್ ಬಿಗಿ ಭದ್ರತೆಯೊಂದಿಗೆ ಕೊಂಡೊಯ್ಯಲಾಯಿತು.

ಲಕ್ಷ್ಮೀ ಜನಾರ್ಧನ ದೇವಾಲಯದಲ್ಲಿ ಪೂಜೆ: ಸಂಪ್ರದಾಯದಂತೆ ಜಿಲ್ಲಾ ಖಜಾನೆಯಿಂದ ಹೊರಟ ಆಭರಣಗಳನ್ನು ನಗರದ ಲಕ್ಷ್ಮೀಜನಾರ್ಧನ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಶ್ರೀರಂಗಪಟ್ಟಣ ಮಾರ್ಗವಾಗಿ ವಾಹನ ಸಾಗಿತು. ಜಿಪಂ ಸಿಇಒ ದಿವ್ಯಾಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ ಸೇರಿದಂತೆ ಮತ್ತಿತರರಿದ್ದರು.

ಇದನ್ನೂ ಓದಿ:ವೈರಮುಡಿ ಕಿರೀಟ ತರುವ ವಿಚಾರದಲ್ಲಿ ಗೊಂದಲ: ವಾಹನಕ್ಕೆ ತಡೆ

ಗ್ರಾಮಗಳಲ್ಲಿ ಪೂಜೆ: ಶ್ರೀರಂಗಪಟ್ಟಣ ಮಾರ್ಗವಾಗಿ ಸಾಗಿದ ಆಭರಣ ಇದ್ದ ವಾಹನವು ಇಂಡುವಾಳು, ಕಾಳೇನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಗ್ರಾಮಸ್ಥರು ಆಭರಣಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ಅಲ್ಲದೆ, ಗ್ರಾಮದ ಮುಖಂಡರು ಆಭರಣಗಳನ್ನು ಹೊತ್ತು ಭಕ್ತಿಭಾವ ಮೆರೆದರು.

Advertisement

ಒಂದು ಗಂಟೆ ತಡವಾಗಿ ಬಂದ ವಾಹನ: ವೈರಮುಡಿ ಕಿರೀಟ ತರುವ ವಿಚಾರದಲ್ಲಿ ಸ್ಥಾನೀಕರು ಹಾಗೂ ಅಧಿಕಾರಿಗಳ ನಡುವೆ ನಡೆದ ಗೊಂದಲದಿಂದ ವಾಹವನ್ನು ಮೇಲುಕೋಟೆಯಲ್ಲಿ ತಡೆಯಲಾಗಿತ್ತು. ಇದರಿಂದ ಬೆಳಿಗ್ಗೆ 7ಕ್ಕೆ ಜಿಲ್ಲಾ ಖಜಾನೆಯನ್ನು ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಮೇಲುಕೋಟೆಯಲ್ಲಿ ನಡೆದ ಅಧಿಕಾರಿಗಳು ಹಾಗೂ ಸ್ಥಾನೀಕರ ವಾಗ್ವಾದದಿಂದ ಪರಕಾಲ ಮಠದ ವಾಹನ ಒಂದು ಗಂಟೆ ತಡವಾಗಿ ಆಗಮಿಸಿತು. ನಂತರ 8.30ಕ್ಕೆ ಖಜಾನೆ ತೆರೆದು ಆಭರಣಗಳಿಗೆ ಪೂಜೆ ಸಲ್ಲಿಸಲಾಯಿತು.

ಪೊಲೀಸ್ ಬಿಗಿ ಭದ್ರತೆ: ಜಿಲ್ಲಾ ಖಜಾನೆಯ ವೈರಮುಡಿ ಆಭರಣಗಳನ್ನು ಮೇಲುಕೋಟೆಗೆ ಕೊಂಡೊಯ್ಯುವ ಹಿನ್ನೆಲೆಯಲ್ಲಿ ನಗರದಲ್ಲಿ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಅಲ್ಲದೆ, ವಾಹನ ಸಂಚರಿಸುವ ಮೇಲುಕೋಟೆಯುದ್ದಕ್ಕೂ ಪೊಲೀಸ್ ಕಣ್ಗಾವಲು ಇಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next