ಕನ್ನಡದಲ್ಲಿ ಅನೇಕ ನಾಟಕ ಮತ್ತು ಕಾದಂಬರಿಗಳು ಸಿನಿಮಾಗಳಾಗಿವೆ. ಆ ಸಾಲಿಗೆ ಈಗ “ಅಮ್ಮಚ್ಚಿಯೆಂಬ ನೆನಪು’ ಚಿತ್ರ ಹೊಸ ಸೇರ್ಪಡೆ. ಹೌದು, ಲೇಖಕಿ ಡಾ. ವೈದೇಹಿ ಅವರ ಮೂರು ಕಾದಂಬರಿಗಳನ್ನು ಸೇರಿಸಿಕೊಂಡು “ಅಮ್ಮಚ್ಚಿಯೆಂಬ ನೆನಪು’ ಚಿತ್ರ ಮಾಡಲಾಗಿದೆ. “ಹಕ್ಕು’, “ಅಮ್ಮಚ್ಚಿಯೆಂಬ ನೆನಪು’ ಹಾಗು “ಪುಟ್ಟಮ್ಮತ್ತೆ ಮತ್ತು ಮೊಮ್ಮಗ’ ಕಾದಂಬರಿಗಳು ಈ ಹಿಂದೆ ನಾಟಕಗಳಾಗಿ ಸುದ್ದಿಯಾಗಿದ್ದವು. ಈಗ ಈ ಮೂರು ಕಾದಂಬರಿಗಳು ಚಿತ್ರವಾಗಿವೆ. ವಿಶೇಷವೆಂದರೆ, ರಂಗಾಸಕ್ತರೆಲ್ಲರೂ ಸೇರಿಕೊಂಡು ನಾಟಕಗಳನ್ನು ಸಿನಿಮಾರೂಪಕ್ಕೆ ತಂದಿದ್ದಾರೆ. “ಎ’ ಚಿತ್ರದ ಮೂಲಕ ಕಂಠದಾನ ಕಲಾವಿದೆಯಾಗಿ ಗುರುತಿಸಿಕೊಂಡು ಇದುವರೆಗೆ ಸುಮಾರು ಐನೂರು ಚಿತ್ರಗಳಿಗೆ ಡಬ್ಬಿಂಗ್ ಮಾಡಿರುವ ಚಂಪಾ ಶೆಟ್ಟಿ ಈ ಚಿತ್ರದ ನಿರ್ದೇಶನ ಮಾಡಿದ್ದಾರೆ.
ಅಂದಹಾಗೆ, ಇದು 80ರ ಕಾಲಘಟ್ಟದ ಹೆಣ್ಣು ಮಕ್ಕಳ ಕಥೆ ಹೊಂದಿದೆ. ಇಲ್ಲಿ ನಾಯಕಿ ಅಮ್ಮಚ್ಚಿ, ಸ್ವಾತಂತ್ರ್ಯವಿಲ್ಲದೆ ಅನುಭವಿಸುವ ನೋವು, ಎದುರಾಗುವ ಸಮಸ್ಯೆಗಳನ್ನು ಹೇಗೆ ಎದುರಿಸುತ್ತಾಳೆ. ಆ ಬಳಿಕ ಅವೆಲ್ಲವನ್ನೂ ಹೇಗೆ ಮೆಟ್ಟಿ ನಿಲ್ಲುತ್ತಾಳೆ ಎಂಬುದು ಕಥೆ. ಅಮ್ಮಚ್ಚಿ ಪಾತ್ರದಲ್ಲಿ ವೈಜಯಂತಿ ಅಡಿಗ ಕಾಣಿಸಿಕೊಂಡರೆ, ಅವರ ಗೆಳತಿ ಪಾತ್ರದಲ್ಲಿ ದಿಯಾ ಪಾಲಕ್ಕಲ್ ಕಾಣಿಸಿಕೊಂಡಿದ್ದಾರೆ. ಇನ್ನು, ವಿಶೇಷ ಪಾತ್ರವೊಂದರಲ್ಲಿ ರಾಜ್ ಬಿ. ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಅವರೊಬ್ಬ ಅನಕ್ಷರಸ್ಥ ಕೃಷಿಕನಾಗಿ ತನ್ನದೇ ವಿಚಾರದಲ್ಲಿ ಗಟ್ಟಿಯಾಗಿ ಬದುಕುವ ಮತ್ತು ಸ್ತ್ರೀ ಸ್ವತಂತ್ರಕ್ಕೆ ಧಕ್ಕೆ ತರುವ ಪಾತ್ರದಲ್ಲಿ ನಟಿಸಿದ್ದಾರೆ.
ಚಿತ್ರಕ್ಕೆ ಪ್ರಕಾಶ್ ಶೆಟ್ಟಿ, ವಂದನಾ ಇನಾಂದಾರ್, ಗೌರಮ್ಮ ಹಾಗೂ ಕಲಾ ಕದಂಬ ಆರ್ಟ್ ಸೆಂಟರ್ ಚಿತ್ರದ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡರೆ, ನಿರ್ಮಾಣಕ್ಕೆ ಸಾಥ್ ಕೊಟ್ಟಿರುವ ಗೀತಾ ಸುರತ್ಕಲ್, ಶೃಂಗೇರಿ ರಾಮಣ್ಣ, ರಾಧಾಕೃಷ್ಣ ಉರಾಳ, ವಿಶ್ವನಾಥ ಉರಾಳ, ಚಂದ್ರಹಾಸ ಉಳ್ಳಾಲ ಇತರರು ಸಹ ನಟಿಸಿದ್ದಾರೆ.
ಈ ಚಿತ್ರದ ಮತ್ತೂಂದು ಹೊಸ ವಿಶೇಷವೆಂದರೆ, ಕುಂದಾಪುರ ಭಾಷೆಯ ಸಂಭಾಷಣೆ ಇದೆ. ವೈದೇಹಿ ಅವರ ಮಾತುಗಳು ಇಲ್ಲಿರಲಿವೆ. “ಮಫ್ತಿ’ ಖ್ಯಾತಿಯ ನವೀನ್‌ಕುಮಾರ್ ಛಾಯಾಗ್ರಹಣ ಮಾಡಿದರೆ, ಸಂಗೀತ ಕಟ್ಟಿ ಅವರ ಸಂಗೀತವಿದೆ. ಹರೀಶ್ ಕೊಮ್ಮೆ ಸಂಕಲನವಿದೆ. ಶಶಿಧರ ಅಡಪ ಅವರ ಕಲಾ ನಿರ್ದೇಶನವಿದೆ. ಅನುರಾಧ ಭಟ್, ಡಾ. ಶಮಿತಾ ಮಲಾ°ಡ್ ಇತರರು ಹಾಡಿದ್ದಾರೆ. ದಕ್ಷಿಣ ಕನ್ನಡದ ಪಡುಬಿದ್ರೆಯ ಕರ್ನಿರೆ ಗ್ರಾಮದ ಸುತ್ತಮುತ್ತಲು ಚಿತ್ರೀಕರಣ ಮಾಡಲಾಗಿದೆ. “ಅಮ್ಮಚ್ಚಿಯೆಂಬ ನೆನಪು’ ಇಷ್ಟರಲ್ಲೇ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದೆ.