Advertisement

Vaibhavi Shandilya: ಮಾರ್ಟಿನ್‌ ಪ್ರೀತಿ ಪಾತ್ರಳು ನಾನು…; ವೈಭವಿ ಕಣ್ತುಂಬ ನಿರೀಕ್ಷೆ

12:31 PM Oct 04, 2024 | Team Udayavani |

ಕನ್ನಡ ಸೇರಿದಂತೆ 13 ಭಾಷೆಗಳಲ್ಲಿ, ದೇಶ-ವಿದೇಶಗಳಲ್ಲೂ ಬಿಡುಗಡೆಗೊಳ್ಳುತ್ತಿರುವ “ಮಾರ್ಟಿನ್‌’ (Martin) ಚಿತ್ರಕ್ಕೆ ನಾಯಕ ನಟಿಯಾಗಿರುವ ವೈಭವಿ ಕಣ್ಣಲ್ಲಿ ಈಗ ಕಣ್ತುಂಬ ಕನಸು.. ದೊಡ್ಡ ಚಿತ್ರದ ಮೂಲಕ ದೊಡ್ಡ ಮಟ್ಟದಲ್ಲಿ ಕಾಣಿಸಿಕೊಳ್ಳುತ್ತಿರುವ ವೈಭವಿ ಶಾಂಡಿಲ್ಯ (Vaibhavi shandilya) ಆ ಚಿತ್ರದ ಮೇಲೆ ನಿರೀಕ್ಷೆಯಿಂದ ಎದುರು ನೋಡುತ್ತಿದ್ದಾರೆ. ಬಿಡುಗಡೆಯ ಹೊಸ್ತಿಲಿನಲ್ಲಿ ಚಿತ್ರದಲ್ಲಿನ ನಟನೆ, ಪಾತ್ರ, ಪ್ಯಾನ್‌ ಇಂಡಿಯಾ ವಿಚಾರವಾಗಿ ವೈಭವಿ ಮಾತನಾಡಿದ್ದಾರೆ. ಅದನ್ನಿಲ್ಲಿ ಅವರ ಮಾತಲ್ಲೇ ನೀಡಲಾಗಿದೆ.

Advertisement

ಹೊಸ ಜವಾಬ್ದಾರಿ ಕೊಟ್ಟ ಸಿನಿಮಾ

ಮಾರ್ಟಿನ್‌ ಚಿತ್ರತಂಡದಿಂದ ನನಗೆ 2021ರಲ್ಲಿ ಕರೆ ಬಂದಿತ್ತು. ನನ್ನ ಪ್ರೊಫೈಲ್‌ ಕಳಿಸಿದ್ದೆ. ಅದಾದ ಮೂರು ತಿಂಗಳವರೆಗೂ ಚಿತ್ರತಂಡದಿಂದ ಯಾವುದೇ ಮಾಹಿತಿ ಇರಲಿಲ್ಲ. ಆಗಷ್ಟೇ ಗಾಳಿಪಟ-2 ಸಿನಿಮಾ ಚಿತ್ರೀಕರಣ ಮುಕ್ತಾಯವಾಗಿತ್ತು. ಮಾರ್ಟಿನ್‌ಗೆ ಆಯ್ಕೆಗೆಂದು ಹೋದಾಗ ಗಾಳಿಪಟ-2 ಚಿತ್ರದ ಸಂಭಾಷಣೆಗಳನ್ನೇ ಹೇಳಿದ್ದೆ. ಅದಾದ ನಂತರ ಬೆಂಗಳೂರಿಗೆ ಕರೆಸಿದರು. ಅಲ್ಲಿವರೆಗೂ ನಾನು ಚಿತ್ರಕ್ಕೆ ಆಯ್ಕೆಯಾಗಿದ್ದೇನೋ ಇಲ್ಲವೋ ಎಂಬುದರ ಬಗ್ಗೆ ಯಾವುದೇ ಸ್ಪಷ್ಟತೆ ಇರಲಿಲ್ಲ. ಕೊನೆಗೆ ನನ್ನ ಒಂದಿಷ್ಟು ಲುಕ್‌ ಟೆಸ್ಟ್‌ ನಂತರ, ಚಿತ್ರತಂಡದವರೇ ಸೋಶಿಯಲ್‌ ಮಿಡಿಯಾದಲ್ಲಿ ನನ್ನ ಹೆಸರು ಘೋಷಿಸಿದರು. ಮೊದಲಿಗೆ ಇದು ಇಷ್ಟು ದೊಡ್ಡಮಟ್ಟದ ಚಿತ್ರ ಎಂದು ತಿಳಿದಿರಲಿಲ್ಲ. ಒಬ್ಬ ನಟಿಯಾಗಿ ಉತ್ತಮ ಚಿತ್ರಗಳಲ್ಲಿ ನಟಿಸಬೇಕು, ಪ್ರೇಕ್ಷಕರನ್ನು ರಂಜಿಸಬೇಕು ಎಂಬ ಉದ್ದೇಶ ಹೊಂದಿದವಳು ನಾನು. ಮಾರ್ಟಿನ್‌ ಇಷ್ಟು ದೊಡ್ಡಮಟ್ಟದಲ್ಲಿ ನಿರ್ಮಾಣವಾಗುತ್ತಿದೆ ಎಂದು ತಿಳಿದಾಗ ನನಗೆ ಹೊಸ ಜವಾಬ್ದಾರಿ ಬಂದಂತಾಯಿತು.

ಪಾತ್ರಕ್ಕೆ ಭಾಷೆಯೇ ಸವಾಲು

Advertisement

“ಮಾರ್ಟಿನ್‌’ ಸಿನಿಮಾದಲ್ಲಿ “ಪ್ರೀತಿ’ ನನ್ನ ಪಾತ್ರದ ಹೆಸರು. ಗಟ್ಟಿ ಮನಸ್ಸಿನ, ವಿಶ್ವಾಸದಿಂದಿರುವ, ಧೈರ್ಯವಂತೆಯ ಪಾತ್ರ ನನ್ನದು. ನಟನೆ ದೃಷ್ಟಿಯಿಂದ ಇದಕ್ಕೆ ಒಗ್ಗಿಕೊಳ್ಳುವುದು ನನಗೆ ಹೆಚ್ಚು ಸಮಯ ಹಿಡಿಯಲಿಲ್ಲ. ಆದರೆ, ಭಾಷೆ ಬಗ್ಗೆ ಹೆಚ್ಚು ತಯಾರಿ ಮಾಡಿಕೊಳ್ಳಬೇಕಾಗಿತ್ತು. ಸಂಭಾಷಣೆಗಳ ಎಲ್ಲ ಸಾಲುಗಳನ್ನು ಮನನ ಮಾಡಿಕೊಂಡು ಅಭಿನಯಿಸಬೇಕಿತ್ತು. ಚಿತ್ರಕ್ಕೆ ಕನ್ನಡದಲ್ಲಿ ನಾನೇ ಡಬ್‌ ಮಾಡಬೇಕೆಂಬ ಬಹಳ ಆಸೆ ಇತ್ತು. ಆದರೆ, ನಾನು ಕನ್ನಡತಿಯಲ್ಲ. ಮೇಲಾಗಿ ನನ್ನ ಪಾತ್ರ ಸಣ್ಣ ಊರಿನವಳದ್ದಾಗಿತ್ತು. ಭಾಷೆಯ ಶೈಲಿ ಅಂದುಕೊಂಡಂತೆ ಬರುವುದಿಲ್ಲ ಎಂಬ ಕಾರಣಕ್ಕೆ ಈ ಆಸೆ ಕೈ ಬಿಡಬೇಕಾಯಿತು. ಆದರೆ, ಚಿತ್ರದ ಮೂಲಕ ಕನ್ನಡವನ್ನು ತಕ್ಕಮಟ್ಟಿಗೆ ಕಲಿತಿರುವೆ. ಚಿತ್ರದ ಹಿಂದಿ ಅವತರಣಿಕೆಗೆ ನಾನೇ ಡಬ್‌ ಮಾಡಿದ್ದೇನೆ ಅದು ಸಮಾಧಾನ ತಂದಿದೆ.

ಈ ಜರ್ನಿ ಮರೆಯಲಸಾಧ್ಯ..

ಇಡೀ ಚಿತ್ರ 250 ದಿನಗಳ ಕಾಲ ಚಿತ್ರೀಕರಣ ನಡೆಸಿದೆ. ಅದರಲ್ಲಿ 50 ದಿನಗಳ ಕಾಲ ನನ್ನ ಭಾಗದ್ದಾಗಿತ್ತು. ಕಾಶ್ಮೀರ, ಜೋದ್‌ಪುರ್‌, ಬಾದಾಮಿ, ಮಂಗಳೂರು, ಬೆಂಗಳೂರು, ಹೈದರಾಬಾದ್‌ ಇಲ್ಲೆಲ್ಲ ಚಿತ್ರದ ಶೂಟಿಂಗ್‌ ನಡೆದಿದೆ. ಕಾಶ್ಮೀರದಲ್ಲಿ ಚಿತ್ರೀಕರಣ ಮಾಡಿದ್ದು ಬಹಳ ಕಷ್ಟಕರವಾಗಿತ್ತು. ತೀವ್ರ ಚಳಿ, ತೀವ್ರ ಬಿಸಿಲು, ದೊಡ್ಡ ಬೆಟ್ಟಗಳನ್ನು ಹತ್ತಿ ಹೋಗಬೇಕಿತ್ತು, ಬಿಸಿಲು ಜಾಸ್ತಿ ಇದ್ದಿದ್ದರಿಂದ ಕಣ್ಣಿಗೆ ಸೋಂಕು ಕೂಡ ತಗುಲಿತ್ತು, ಸನ್‌ ಬರ್ನ್ ಆಗಿತ್ತು. ಗಾಗಲ್ಸ್‌ ಇಲ್ಲದೇ ಏನು ಸರಿಯಾಗಿ ಕಾಣಿಸುತ್ತಿರಲಿಲ್ಲ. ಚಿತ್ರೀಕರಣಕ್ಕಾಗಿ ದೆಹಲಿಯಿಂದ ಶ್ರೀನಗರಗೆ ಹೋಗುವಾಗ ಹವಾಮಾನ ವೈಪರಿತ್ಯದಿಂದ ವಿಮಾನದಲ್ಲಿ ತುರ್ತು ಪರಿಸ್ಥಿತಿ ಉಂಟಾಯಿತು. ಇಡೀ ಚಿತ್ರತಂಡದವರು ಒಂದೇ ವಿಮಾನದಲ್ಲಿದ್ದೆವು. ನನಗಂತೂ ಬಹಳ ಹೆದರಿಕೆಯಾಗಿತ್ತು. ದೇವರ ದಯೆಯಿಂದ ಏನೂ ಅಪಾಯ ಸಂಭವಿಸಲಿಲ್ಲ. ಇದಂತೂ ಈ ಸಿನಿಮಾದ ಮರೆಯಲಾಗದ ಅನುಭವ.

ನೋಡಿ ಕಲಿತ ಅನುಭವ ಅನನ್ಯ

ನಟ ಧ್ರುವ ಸರ್ಜಾ ಹಾಗೂ ನಿರ್ಮಾಪಕ ಉದಯ ಮೆಹ್ತಾ ಅವರ ವ್ಯಕ್ತಿತ್ವಗಳು ನನಗೆ ಬಹಳ ಇಷ್ಟವಾಯಿತು. ಧ್ರುವ ಅವರೊಬ್ಬ ಜಂಟಲ್‌ಮೆನ್‌… ಅಷ್ಟು ದೊಡ್ಡ ಸ್ಟಾರ್‌ ಆದರೂ ನನ್ನನ್ನು “ಮೇಡಮ್‌’ ಎಂದೇ ಕರೆಯುತ್ತಿದ್ದರು. ಎಲ್ಲರನ್ನು ಗೌರವಯುತವಾಗಿ ನೋಡುವುದು, ನಡೆಸಿಕೊಳ್ಳುವ ಗುಣ ಅವರದ್ದು. ಇನ್ನೂ ನಿರ್ಮಾಪಕ ಉದಯ್‌ ಮೆಹ್ತಾ ಅವರದ್ದು ಹೃದಯ ವೈಶಾಲ್ಯದ ವ್ಯಕ್ತಿತ್ವ. ನಾವು ಅವರನ್ನ “ಲಯನ್‌ ಹಾರ್ಟೆಡ್‌’ ಎಂದೇ ಕರೆಯುತ್ತೇವೆ. ಇಡೀ ಚಿತ್ರತಂಡದ ಮೇಲೆ ಅವರು ಸಂಪೂರ್ಣ ವಿಶ್ವಾಸ ಇಟ್ಟಿದ್ದಾರೆ. ಕುಟುಂಬದವರಂತೆ ನೋಡಿಕೊಳ್ಳುತ್ತಿದ್ದಾರೆ. ಹಾಗಾಗಿ ಇಲ್ಲಿ ನಟನೆಗಿಂತ ಇವರನ್ನು ನೋಡಿ ಕಲಿತಿರುವುದು ಬಹಳ.

ವ್ಯಕ್ತಿತ್ವದಿಂದ ಪ್ರೇರಣೆಯಾಗಲು ಇಷ್ಟ

ಪ್ಯಾನ್‌ ಇಂಡಿಯಾ, ಪ್ಯಾನ್‌ ವರ್ಲ್ಡ್ ಸಿನಿಮಾ ವಿಚಾರದಲ್ಲಿ ನನಗೆ ಅಷ್ಟು ಸಹಮತಿ ಇಲ್ಲ. ನನ್ನ ಪ್ರಕಾರ ಸಿನಿಮಾ ಮೂಲತಃ ಜಾಗತಿಕವಾಗಿಯೇ ಇರುತ್ತದೆ. ಸಿನಿಮಾ ಎಂದರೆ ಅದೊಂದು ಭಾವನೆ. ಇಲ್ಲಿ ಮನೋರಂಜನೆಯೇ ಪ್ರಧಾನ. ಅದು ಕಲಾವಿದರು ಹಾಗೂ ಪ್ರೇಕ್ಷಕರು ಇಬ್ಬರಿಗೂ ಅನ್ವಯವಾಗುತ್ತದೆ. ಸಿನಿಮಾದ ಕಥೆ ಚೆನ್ನಾಗಿದ್ದರೆ ಅದನ್ನು ಎಲ್ಲರೂ ನೋಡುತ್ತಾರೆ, ಒಪ್ಪಿಕೊಳ್ಳುತ್ತಾರೆ. ಮಾರ್ಟಿನ್‌ ಕಂಟೆಂಟ್‌ ಚೆನ್ನಾಗಿದ್ದ ಕಾರಣಕ್ಕೆ 13 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಪ್ಯಾನ್‌ ಇಂಡಿಯಾ, ಪ್ಯಾನ್‌ ವರ್ಲ್ಡ್ ಸಿನಿಮಾದಿಂದ ನಾನು ಎಲ್ಲೆಡೆ ಗುರುತಿಸಿಕೊಳ್ಳಬಹುದು ಆದರೆ, ಸಿನಿಮಾ ಹೊರತಾಗಿ ವ್ಯಕ್ತಿತ್ವದಿಂದ ಗುರುತಿಸಿಕೊಳ್ಳಬೇಕು. ಒಂದು ಪ್ರೇರಣೆಯಾಗಿ ಜನರಿಗೆ ಆಪ್ತವಾಗಲು ಹೆಚ್ಚು ಇಷ್ಟಪಡುತ್ತೇನೆ. ಅದೇ ನನ್ನ ಕನಸು, ಜೀವನದ ಉದ್ದೇಶ.

ಚಿತ್ರತಂಡದಿಂದ ಭರ್ಜರಿ ಪ್ರಚಾರ

ದೊಡ್ಡ ಬಜೆಟ್‌ನ ಮಾರ್ಟಿನ್‌ ಸಿನಿಮಾ ದೊಡ್ಡ ಮಟ್ಟದಲ್ಲೇ ಪ್ರಚಾರ ನಡೆಸುತ್ತಿದೆ. ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ನಟ ಧ್ರುವ ಸರ್ಜಾ, “ಅ. 4ರಂದು ಹೈದರಾಬಾದ್‌ನಲ್ಲಿ ಸಿನಿಮಾದ ಇಂಟ್ರೊಡಕ್ಷನ್‌ ಸಾಂಗ್‌ ರಿಲೀಸ್‌ ಆಗಲಿದೆ. ನನ್ನ ಸಿನಿಮಾಗಳಿಗೆ ಉತ್ತರ ಕರ್ನಾಟಕ ಜನತೆ ತುಂಬಾ ಸಹಕಾರ ನೀಡಿದ್ದಾರೆ. ಹಾಗಾಗಿ ಅದು ನನಗೊಂದು ಸೆಂಟಿಮೆಂಟ್‌. ಅ. 5ಕ್ಕೆ ಹುಬ್ಬಳ್ಳಿಯಲ್ಲಿ ಅಭಿಮಾನಿಗಳನ್ನು ಭೇಟಿಯಾಗಿ ಪ್ರಚಾರ ಮಾಡುತ್ತೇವೆ. ಅ. 6, ನನ್ನ ಬರ್ತಡೇ, ಅಂದು ದಾವಣಗೆರೆಯಲ್ಲಿ ಪ್ರಿ ರಿಲೀಸ್‌ ಇವೆಂಟ್‌ ನಡೆಯುತ್ತೆ. ಅ. 8ಕ್ಕೆ ಮುಂಬೈನಲ್ಲಿ ಇನ್ನೊಂದು ಹಾಡು ಬಿಡುಗಡೆಯಾಗಲಿದೆ. ಸಿನಿಮಾದ ಸೆನ್ಸಾರ್‌ ಆಗಿ ಯು/ಎ ಪ್ರಮಾಣಪತ್ರ ಸಿಕ್ಕಿದೆ. ತುಂಬಾ ಶ್ರದ್ಧೆಯಿಂದ ಸಿನಿಮಾ ಮಾಡಿದೀವಿ. ಪ್ರತಿ ದೃಶ್ಯದಲ್ಲೂ ಅದ್ದೂರಿತನ ಕಾಣಿಸುತ್ತೆ’ ಎಂದರು ಧ್ರುವ.

ನಿತೀಶ ಡಂಬಳ

Advertisement

Udayavani is now on Telegram. Click here to join our channel and stay updated with the latest news.

Next