ವಿಜಯಪುರ : ಪುನರುಜ್ಜೀವನಗೊಂಡಿದ್ದ ದೇವಸ್ಥಾನದ ಲೋಕಾರ್ಪಣೆಗೆ ಬಂದಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ದೇವಸ್ಥಾನ ಗರ್ಭಗುಡಿ ಪ್ರವೇಶಕ್ಕೆ ನಿರಾಕರಿಸಿರುವ ಘಟನೆ ಜರುಗಿದೆ.
ಮಂಗಳವಾರ ವಿಜಯಪುರ ತಾಲೂಕಿನ ದ್ಯಾಬೇರಿ ಗ್ರಾಮದ ಶ್ರೀವಾಗ್ದೇವಿ ಸೇವಾ ಸಮಿತಿ ಪುರುಜ್ಜೀವನಗೊಂಡ ವಾಗ್ದೇವಿ ದೇವಸ್ಥಾನದ ನೂತನ ಕಟ್ಟಡ ಲೋಕಾರ್ಪಣೆ, ದೇವಿ ಪ್ರಾಣಪ್ರತಿಷ್ಠಾಪನೆ, ಕಳಸಾರೋಹಣ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಆಗಮಿಸಿದ್ದಾಗ ಈ ಘಟನೆ ಜರುಗಿದೆ.
ವಿಜಯಪುರ ನಗರದ ಜ್ಞಾನ ಯೋಗಾಶ್ರಮದಲ್ಲಿ ಸಿದ್ದೇಶ್ವರ ಶ್ರೀಗಳ ಗುರುನಮನ ಕಾರ್ಯಕ್ರಮದ ಬಳಿಕ ಮುಖ್ಯಮಂತ್ರಿ ಸಿದ್ಧರಾಮಯ್ಯ ದ್ಯಾಬೇರಿ ವಾಗ್ದೇವಿ ದೇವಸ್ಥಾನದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದರು. ದೇವಸ್ಥಾನದ ಭೇಟಿಗೆ ಮುನ್ನ ಗ್ರಾಮದಲ್ಲಿ ನೀರು ತುಂಬಿಸುವ ಯೋಜನೆಯಲ್ಲಿ ಭರ್ತಿಯಾಗಿರುವ ಕೆರೆಗೆ ಬಾಗಿನ ಅರ್ಪಿಸಿದರು. ಬಳಿಕ ಶ್ರೀ ವಾಗ್ದೇವಿ ದೇವಸ್ಥಾನಕ್ಕೆ ತೆರಳಿದ್ದರು.
ಈ ವೇಳೆ ದೇವಸ್ಥಾನಕ್ಕೆ ಆಗಮಿಸಿದಾಗ ವಾಗ್ದೇವಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗಾಗಿ ಮೂರ್ತಿಗೆ ಹೂಮಾಲೆ ಅರ್ಪಿಸುವಂತೆ ಅರ್ಚಕರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಆಹ್ವಾನಿಸಿದರು. ಪಕ್ಕದಲ್ಲಿ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಕೂಡ ಆಗ್ರಹಿಸಿದರು. ಆದರೂ ಗರ್ಭ ಗುಡಿ ಪ್ರವೇಶಕ್ಕೆ ಕೈ ಸನ್ನೆಯಿಂದಲೇ ನಿರಾಕರಿಸಿದ ಸಿದ್ಧರಾಮಯ್ಯ, ಗರ್ಭಗುಡಿ ಬಾಗಿಲಲ್ಲೇ ನಿಂತು ಕೈಮುಗಿದರು.
ಆಗಲೂ ಅರ್ಚಕರು, ಗ್ರಾಮಸ್ಥರು ಗರ್ಭಗುಡಿ ಒಳಗೆ ಪ್ರವೇಶಿಸಿ, ಪುಷ್ಪ ಮಾಲೆ ಸಮರ್ಪಿಸಲು ಆಗ್ರಹಿಸಿದಾಗ ಪಕ್ಕದಲ್ಲಿದ್ದ ಸಚಿವ ಎಂ.ಬಿ.ಪಾಟೀಲ ಅವರನ್ನು ನೀನು ಹೋಗು ಎಂದು ಗರ್ಭಗುಡಿ ಒಳಗೆ ಕಳಿಸಿದರು. ಗರ್ಭಗುಡಿ ಪ್ರವೇಶಿಸಿದ ಸಚಿವ ಪಾಟೀಲ, ಅರ್ಚಕರಿಂದ ಪಡೆದ ಹೂಮಾಲೆಯನ್ನು ಸಿದ್ಧರಾಮಯ್ಯ ಅವರಿಂದ ಸ್ಪರ್ಶ ಮಾಡಿಸಿ ತಂದು ಮುಖ್ಯಮಂತ್ರಿಗಳ ಪರವಾಗಿ ವಾಗ್ದೇವಿಗೆ ಸಮರ್ಪಿಸಿದರು.
ಬಳಿಕ ವಾಗ್ದೇವಿ ದೇವಸ್ಥಾನದ ಅರ್ಚಕರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಸನ್ಮಾನಿಸಿದರು. ನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ, ವಾಗ್ದೇವಿ ನಾಡಿನ ಎಲ್ಲ ಜನರಿಗೆ ಒಳಿತು ಮಾಡಿಲಿ. ಮುಂದಿನ ಮುಂಗಾರು ಹಂಗಾಮಿನಲ್ಲಿ ಮಳೆ ಉತ್ತಮವಾಗಿ ಒಳ್ಳೆಯ ಬೆಳೆ ಬರಲಿ. ಎಲ್ಲರೂ ಖುಷಿಯಿಂದ ಜೀವನ ನಡೆಸುವ ಕುರಿತು ವಾಗ್ದೇವಿ ಕರುಣಿಸಲಿ. ಸಮಯದ ಅಭಾವದ ಕಾರಣದಿಂದ ಸ್ವಲ್ಪ ಸಮಯ ಮಾತ್ರ ನಾನು ಮಾತನಾಡುತ್ತೇನೆ ಎಂದರು.