Advertisement

ವಾಡಿ ಪುರಸಭೆ: ಭುಗಿಲೆದ್ದ ಅತೃಪ್ತಿ

10:00 AM Aug 18, 2019 | Team Udayavani |

ಮಡಿವಾಳಪ್ಪ ಹೇರೂರು
ವಾಡಿ:
ಪಟ್ಟಣದ ಪುರಸಭೆಯ ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ಚುನಾಯಿತ ಸದಸ್ಯರಲ್ಲಿ ಆಂತರಿಕ ಅಸಮಾಧಾನ ಭುಗಿಲೆದ್ದಿದೆ.

Advertisement

ಪುರಸಭೆ ಅಧ್ಯಕ್ಷೆ ಮೈನಾಬಾಯಿ ಗೋಪಾಲ ರಾಠೊಡ ಅಧ್ಯಕ್ಷ ಸ್ಥಾನ ಅಲಂಕರಿಸಿದ ದಿನದಿಂದ ಸದಸ್ಯರ ಅತೃಪ್ತಿಗೆ ಕಾರಣರಾಗಿದ್ದು, ಸ್ವಪಕ್ಷದ ಸದಸ್ಯರಿಂದಲೇ ಕುರ್ಚಿ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ.

ಒಟ್ಟು 23 ಸದಸ್ಯರ ಸಂಖ್ಯಾಬಲ ಹೊಂದಿರುವ ಚಿತ್ತಾಪುರ ತಾಲೂಕಿನ ವಾಡಿ ಪುರಸಭೆಗೆ 2017ರಲ್ಲಿ ಚುನಾವಣೆ ನಡೆದು ಕಾಂಗ್ರೆಸ್‌-13, ಬಿಜೆಪಿ-7, ಪಕ್ಷೇತರರು-3 ಸ್ಥಾನಗಳಲ್ಲಿ ಆಯ್ಕೆಯಾಗಿದ್ದರು. ಇಬ್ಬರು ಪಕ್ಷೇತರರ ಬೆಂಬಲ ಪಡೆದು ಬಿಜೆಪಿ ಒಂಭತ್ತು ಸ್ಥಾನಕ್ಕೇರಿದ್ದರೆ, ಒಬ್ಬರು ಪಕ್ಷೇತರ ಸದಸ್ಯ ಹಾಗೂ ಶಾಸಕ ಪ್ರಿಯಾಂಕ್‌ ಖರ್ಗೆ ಅವರ ಮತಗಳಿಂದ 15 ಮತಗಳ ಬಲದಿಂದ ಕಾಂಗ್ರೆಸ್‌ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿತ್ತು.

2017ರ ನವೆಂಬರ್‌ 10ರಂದು ಅಂದಿನ ಸೇಡಂ ಸಹಾಯಕ ಆಯುಕ್ತೆ ಬಿ. ಸುಶೀಲಾ ನೇತೃತ್ವದಲ್ಲಿ ನಡೆದ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಮೈನಾಬಾಯಿ ಗೋಪಾಲ ರಾಠೊಡ ಅಧ್ಯಕ್ಷರಾಗಿ, ಮಲ್ಲಯ್ಯ ಗುತ್ತೇದಾರ ಉಪಾಧ್ಯಕ್ಷರಾಗಿ ಚುನಾಯಿತರಾಗಿದ್ದರು.

ಸದಸ್ಯರ ಅಸಹಕಾರದ ಮಧ್ಯೆಯೂ ಕಳೆದ 20 ತಿಂಗಳಿಂದ ಆಡಳಿತದಲ್ಲಿರುವ ಅಧ್ಯಕ್ಷೆ ಮೈನಾಬಾಯಿ ವಿರುದ್ಧ ಆಂತಕರಿಕವಾಗಿ ಸಿಡಿದೆದ್ದಿರುವ ಕಾಂಗ್ರೆಸ್‌ ಸದಸ್ಯರು, ಅಧಿಕಾರ ಇನ್ನೂ 10 ತಿಂಗಳು ಬಾಕಿ ಇರುವಾಗಲೇ ಅವಿಶ್ವಾಸ ನಿರ್ಣಯ ಮಂಡಿಸಿ, ಅಧಿಕಾರ ಕಸಿಯುವ ಚಿಂತನೆ ನಡೆಸುತ್ತಿರುವುದು ರಾಜಕೀಯ ಘರ್ಷಣೆಗೆ ಕಾರಣವಾಗಿದೆ. ವಿಷಯವನ್ನು ಶಾಸಕರಿಗೂ ತಲುಪಿಸಿರುವ ಸದಸ್ಯರು, ಅಧ್ಯಕ್ಷರು ರಾಜೀನಾಮೆ ನೀಡದಿದ್ದರೆ, ಚುನಾವಣಾಧಿಕಾರಿಗೆ ದೂರು ಸಲ್ಲಿಸುವ ಮೂಲಕ ಅವಿಶ್ವಾಸ ನಿರ್ಣಯ ಮಂಡಿಸುವುದಾಗಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

Advertisement

ಶಾಸಕ ಪ್ರಿಯಾಂಕ್‌ ಖರ್ಗೆ ಅವರು ವಾಡಿ ನಗರದ ಅಭಿವೃದ್ಧಿಗಾಗಿ ನೂರಾರು ಕೋಟಿ ರೂ. ಅನುದಾನ ತಂದರೂ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕೈಗೊಳ್ಳುವಲ್ಲಿ ಅಧ್ಯಕ್ಷರು ವಿಫಲರಾಗಿದ್ದಾರೆ. ಆಡಳಿತ ಪಕ್ಷದ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ, ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಮನೆಯಲ್ಲಿ ಕುಳಿತು ಕಡತಗಳಿಗೆ ಮತ್ತು ಚೆಕ್‌ಗಳಿಗೆ ಸಹಿ ಹಾಕುತ್ತಾರೆಯೇ ವಿನಹಃ ಅಧ್ಯಕ್ಷರು ಜನರ ಸಮಸ್ಯೆಗೆ ಸ್ಪಂಸುತ್ತಿಲ್ಲ ಎನ್ನುವುದು ಚುನಾಯಿತ ಕಾಂಗ್ರೆಸ್‌ ಸದಸ್ಯರ ಆರೋಪವಾಗಿದೆ.

ಅಧ್ಯಕ್ಷೆ ಕುರ್ಚಿ ಮೇಲೆ ಕಣ್ಣು
ಹೇಗಾದರೂ ಮಾಡಿ ಅಧ್ಯಕ್ಷರನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಕಳೆದ ಐದಾರು ತಿಂಗಳಿಂದ ಕಾಂಗ್ರೆಸ್‌ ಸದಸ್ಯರು ಆತಂಕರಿಕವಾಗಿ ಯತ್ನಿಸುತ್ತಿದ್ದಾರೆ. ಇನ್ನೊಂದೆಡೆ ಒಂಭತ್ತು ತಿಂಗಳ ಅವಧಿಯ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟು ಕುಳಿತಿರುವ ಪರಿಶಿಷ್ಟ ಜಾತಿ ಸದಸ್ಯೆಯರಾದ ಗುಜ್ಜಾಬಾಯಿ ಸಿಂಗೆ ಹಾಗೂ ಗಂಗಾ ತುಕಾರಾಮ ರಾಠೊಡ ಮಧ್ಯೆ ಒಳಗೊಳಗೆ ಪೈಪೋಟಿ ಶುರುವಾಗಿದೆ. ಆದರೆ ಅವಧಿಗೂ ಮುಂಚೆ ಅಧಿಕಾರ ಬಿಟ್ಟು ಕೊಡಲು ಸಿದ್ಧರಿಲ್ಲದ ಅಧ್ಯಕ್ಷೆ ಮೈನಾಬಾಯಿ ರಾಠೊಡ, ತಮ್ಮ ಅಧಿಕಾರ ಕಸಿಯದಂತೆ ಶಾಸಕ ಪ್ರಿಯಾಂಕ್‌ ಖರ್ಗೆ ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next