Advertisement

ಭೀಕರವಾಗಿ ಬೆಳೆದಿದೆ ಭಿಕ್ಷಾಟನೆ ದಂಧೆ

01:33 PM May 30, 2019 | Naveen |

ಮಡಿವಾಳಪ್ಪ ಹೇರೂರ
ವಾಡಿ:
ದೇಶದಲ್ಲಿ ಬಡತನ ಎಷ್ಟು ಭೀಕರವಾಗಿ ಕಾಣಸಿಗುತ್ತಿದೆಯೋ ಅಷ್ಟೇ ಭೀಕರತೆಯಿಂದ ಭಿಕ್ಷಾಟನೆಯೂ ಬೆಳೆದು ನಿಂತಿದೆ. ಅಂಗವೈಕಲ್ಯ ಮತ್ತು ಅಸಹಾಯಕತೆಯಿಂದ ಭಿಕ್ಷೆಗಿಳಿಯುವವರು ಒಂದೆಡೆಯಾದರೆ, ಇದನ್ನೇ ದಂಧೆಯನ್ನಾಗಿ ಮಾಡಿಕೊಂಡು ಅನುಕಂಪದ ಭಿಕ್ಷಾಟನೆಗೆ ಮುಂದಾಗುವ ತಂಡ ಮತ್ತೂಂದೆಡೆ ಕಾಣಸಿಗುತ್ತಿದೆ.

Advertisement

ಚಿತ್ತಾಪುರ ತಾಲೂಕಿನ ಸಿಮೆಂಟ್ ನಗರಿ ವಾಡಿ ಪಟ್ಟಣ ಮಿನಿ ಮುಂಬೈ ಎಂದೇ ಗುರುತಿಕೊಂಡಿದೆ. ಅನೇಕ ರಾಜ್ಯಗಳ ಜನರು ಇಲ್ಲಿ ವಾಸವಾಗಿದ್ದಾರೆ. ಹೊಟ್ಟೆಪಾಡಿಗಾಗಿ ಉದ್ಯೋಗ ಹುಡುಕಿಕೊಂಡು ಇಲ್ಲಿನ ಜನರು ಬೇರೆಬೇರೆ ನಗರಗಳಿಗೆ ವಲಸೆ ಹೋಗುತ್ತಾರೆ. ಪಶ್ಚಿಮ ಬಂಗಾಳ, ಬಿಹಾರ, ಓರಿಸ್ಸಾ, ಜಾರ್ಖಂಡ, ಉತ್ತರ ಪ್ರದೇಶ, ಆಂಧ್ರ, ತಮಿಳುನಾಡು, ಕೇರಳ ಸೇರಿದಂತೆ ಹಲವಾರು ರಾಜ್ಯಗಳ ಕಾರ್ಮಿಕರು ಹೊರಗುತ್ತಿಗೆ ಕೆಲಸಕ್ಕಾಗಿ ಇಲ್ಲಿನ ಎಸಿಸಿ ಸಿಮೆಂಟ್ ಕಂಪನಿಗೆ ಬರುತ್ತಾರೆ. ಇವರೊಟ್ಟಿಗೆ ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರಗಳ ಭಿಕ್ಷುಕರ ದಂಡು ರೈಲಿನಿಂದ ಇಳಿದು ಬರುತ್ತಿದೆ.

ಬೆಳಗಿನ ನಸುಕಿನ ಜಾವ ನಾಲ್ಕು ಗಂಟೆಗೆ ಹಸುಗೂಸುಗಳೊಂದಿಗೆ ಪಟ್ಟಣಕ್ಕೆ ಕಾಲಿಡುವ ಯುವತಿಯರ ಗುಂಪು ಸೂರ್ಯ ಹೊರ ಬರುವವರೆಗೂ ಕಾಗದಗಳನ್ನು ಆಯುತ್ತದೆ. ತಿಪ್ಪೆಗಳನ್ನು ಹೆಕ್ಕಿ ಪ್ಲಾಸ್ಟಿಕ್‌ ಬಾಟಲಿಗಳನ್ನು ಚೀಲ ತುಂಬುವ ಕೆಲಸ ಮಾಡುತ್ತದೆ. ಕ್ಷಣ ಕ್ಷಣಕ್ಕೂ ಬಾಗಿ ಅಮ್ಮ ತ್ಯಾಜ್ಯ ಹುಡುಕುವಾಗ ಕೊರಳೊಳಗಿನ ಹಸಗೂಸು ಚಿತ್ರಹಿಂಸೆ ಅನುಭವಿಸುತ್ತಿರುತ್ತದೆ.

ಸೂರ್ಯೋದಯದ ನಂತರ ಚಿಂದಿ ಚೀಲ ಒಂದೆಡೆಯಿಟ್ಟು ಇವರು ಭಿಕ್ಷಾಟನೆಗೆ ಮುಂದಾಗುತ್ತಾರೆ. ವರ್ಷದೊಳಗಿನ ಕಂದಮ್ಮನನ್ನು ಬಗಲಲ್ಲಿ ಬಿಗಿದುಕೊಂಡು ಜನರ ಅಂತಃಕರಣ ಗೆಲ್ಲುತ್ತಾರೆ. ಹಸುಗೂಸಿನ ಹೈರಾಣ ನೋಡಲಾಗದೆ ಜನರು ಭಿಕ್ಷೆ ಕೈಗಿಟ್ಟು ಮಾನವೀಯತೆ ಮೆರೆಯುತ್ತಾರೆ. ಹಸಗೂಸು ಹೊತ್ತ ಹೆತ್ತಮ್ಮಳ ಭಿಕ್ಷಾಟನೆಯೇ ಇಲ್ಲಿ ಅನುಕಂಪದ ದಂಧೆಯಾಗಿ ಪರಿವರ್ತನೆಯಾಗಿದೆ.

ಮಕ್ಕಳ ಸ್ಥಿತಿ ನೋಡಿ ಜನರು ಭಿಕ್ಷೆ ಹಾಕುತ್ತಾರೆ. ಇಲ್ಲವಾದರೆ ಕ್ಯಾರೆ ಎನ್ನುವುದಿಲ್ಲ ಎನ್ನುವ ಮನೋಭಾವ ಭಿಕ್ಷುಕರದ್ದಾಗಿದ್ದು, ಹಸುಗೂಸುಗಳು ಹಿಂಸೆ ಅನುಭವಿಸುವಂತಾಗಿದೆ. ಬಸ್‌ ನಿಲ್ದಾಣ ಮತ್ತು ರೈಲು ನಿಲ್ದಾಣಗಳಲ್ಲಿ ಹೆತ್ತವರೊಂದಿಗೆ ಮಕ್ಕಳು ಭಿಕ್ಷೆಗೆ ಜತೆಯಾಗುತ್ತಿರುವುದು ಬಹಿರಂಗ ಸತ್ಯವಾಗಿದೆ. ಈ ಮಧ್ಯೆ ಹಸುಗೂಸುಗಳನ್ನು ಕೊರಳಲ್ಲಿ ಕಟ್ಟಿಕೊಂಡು ಭಿಕ್ಷೆಗೆ ಬರುವವರ ಸಂಖ್ಯೆ ದಿನದಿನಕ್ಕೂ ಹೆಚ್ಚಾಗುತ್ತಿದ್ದು, ಕಾನೂನು ಪಾಲಕರು ಮೌನವಾಗಿದ್ದಾರೆ. ದುಡಿದು ತಿನ್ನಲು ಸಾಕಷ್ಟು ಮಾರ್ಗಗಳಿವೆ. ಆದರೆ, ದುಡಿಯದೇ ಕಾಸುಮಾಡುವ ದಂಧೆಯಾಗಿ ಬೆಳೆದು ವಿಸ್ತಾರಗೊಳ್ಳುತ್ತಿದೆ ಭಿಕ್ಷಾಟನೆ. ಅಸಲಿ ಮಂಗಳಮುಖೀಯರ ನಡುವೆ, ಗಡ್ಡ ಮೀಸೆ ಬೋಳಿಸಿಕೊಂಡು ಸೀರೆಯುಟ್ಟು ಚೆಪ್ಪಾಳೆ ತಟ್ಟುತ್ತಾ ರೈಲುಗಳಲ್ಲಿ ಕಾಸು ಕೀಳುವ ನಕಲಿ ಮಂಗಳಮುಖೀಯರು ಇಲ್ಲಿದ್ದಾರೆ. ಮಕ್ಕಳ ಹಕ್ಕು ರಕ್ಷಣೆಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಜತೆಗೆ ಅನೇಕ ಸಂಘ ಸಂಸ್ಥೆಗಳು ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿವೆಯಾದರೂ ಮಕ್ಕಳ ಹಕ್ಕುಗಳ ಹರಣ ಮಾತ್ರ ನಿಂತಿಲ್ಲ ಎನ್ನುವುದೇ ಬೇಸರದ ಸಂಗತಿ.

Advertisement

ಕಲಬುರಗಿ ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಗಾಗಿಯೇ ಚೈಲ್ಡ್ಲೈನ್‌ ಸಂಸ್ಥೆ ಸಿಬ್ಬಂದಿ ಎಲ್ಲ ತಾಲೂಕು ಪ್ರದೇಶಗಳಲ್ಲಿ ಕಾರ್ಯ ಪ್ರವೃತ್ತಿಯಲ್ಲಿದ್ದಾರೆ. ಬಾಲಕಾರ್ಮಿಕರನ್ನು ರಕ್ಷಣೆ ಮಾಡಿ ಶಾಲೆಗೆ ಕಳುಹಿಸುವ ಕೆಲಸ ಮಾಡಿದ್ದೇವೆ. ಬಾಲ್ಯ ವಿವಾಹಗಳನ್ನು ತಡೆದು ಮಕ್ಕಳನ್ನು ರಕ್ಷಿಸಿದ್ದೇವೆ. ಮಕ್ಕಳನ್ನು ಬಳಸಿಕೊಂಡು ಭಿಕ್ಷಾಟನೆಗೆ ಮುಂದಾಗುವವರ ಕುರಿತು ಜಿಲ್ಲಾಧಿಕಾರಿಗಳ ಗಮನ ಸೆಳೆದಿದ್ದೇವೆ. ಆದರೂ ಈ ಪದ್ಧತಿ ದಿನೇದಿನೇ ಹೆಚ್ಚಾಗುತ್ತಿದೆ. ಇದು ಮಕ್ಕಳ ಹಕ್ಕು ಉಲ್ಲಂಘನೆಯಾಗಿದ್ದು, ಹಿಂಸೆಗೊಳಗಾಗುವ ಜತೆಗೆ ಮಕ್ಕಳು ವಿವಿಧ ಕಾಯಿಲೆಗಳಿಗೆ ತ್ತುತ್ತಾಗುವ ಸಾಧ್ಯತೆಯಿರುತ್ತದೆ. ಈ ಕುರಿತು ಸಂಬಂಧಿಸಿದ ಇಲಾಖೆಗೆ ದೂರು ನೀಡಿ ಕ್ರಮಕ್ಕೆ ಆಗ್ರಹಿಸುತ್ತೇವೆ.
ಸುಂದರ ಚಂದನಕೇರಾ,
ತಾಲೂಕು ಸಂಯೋಜಕರು, ಮಾರ್ಗದರ್ಶಿ ಸಂಸ್ಥೆ ಚೈಲ್ಡ್ಲೈನ್‌ ಉಪಕೇಂದ್ರ

Advertisement

Udayavani is now on Telegram. Click here to join our channel and stay updated with the latest news.

Next