ವಾಡಿ: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಗಮನಿಸಿದರೆ ಚಿತ್ತಾಪುರ ತಾಲೂಕಿನ ಶಾಲೆಗಳು ಕಳಪೆ ಸಾಧನೆ ಮಾಡಿದ್ದು, ಇದಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿ ಧೋರಣೆಯೇ ಕಾರಣ ಎಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‌ಒ) ವಾಡಿ ವಲಯ ಅಧ್ಯಕ್ಷ ಗೌತಮ ಪರತೂರಕರ ಆಕ್ರೋಶ ವ್ಯಕ್ತಪಡಿಸಿದರು.
ಲಾಡ್ಲಾಪುರ ಸರಕಾರಿ ಪ್ರೌಢ ಶಾಲೆಯಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ವಿದ್ಯಾರ್ಥಿಗಳ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ಸರಕಾರಿ ಮತ್ತು ಬಹುತೇಕ ಖಾಸಗಿ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಣ ಸಮರ್ಪಕವಾಗಿ ಸಿಗುತ್ತಿಲ್ಲ. ಪ್ರಾಥಮಿಕ ಶಿಕ್ಷಣವನ್ನೇ ಪ್ರೌಢಶಾಲೆಯಲ್ಲಿ ಬೋಧಿಸಬೇಕಾದ ಪರಿಸ್ಥಿತಿ ಶಿಕ್ಷಕರಿಗೆ ಬಂದೊದಗಿದೆ. ಪ್ರೌಢಶಾಲೆಗಳಲ್ಲೂ ಉತ್ತಮ ಶಿಕ್ಷಣ ಲಭ್ಯವಾಗುತ್ತಿಲ್ಲ. ಸರಕಾರಿ ಪ್ರೌಢಶಾಲೆಗಳಲ್ಲಿ ಪ್ರತಿಭಾವಂತ ಶಿಕ್ಷಕರಿದ್ದರೂ ಪರಿಣಾಮಕಾರಿಯಾಗಿ ಪಾಠ ಮಾಡುವಲ್ಲಿ ವಿಫಲರಾಗಿದ್ದಾರೆ. ಅಲ್ಲದೇ ಯಾರಧ್ದೋ ಒತ್ತಡಕ್ಕೆ ನೇಮಿಸಿಕೊಳ್ಳಲಾದ ಅನನುಭವಿ ಅತಿಥಿ ಶಿಕ್ಷಕರಿಂದ ಮಕ್ಕಳ ಭವಿಷ್ಯ ಹಾಳಾಗುತ್ತಿದೆ ಎಂದು ಆಪಾದಿಸಿದರು.
ಬಹುತೇಕ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಲ್ಲಿ ವಿಷಯವಾರು ಶಿಕ್ಷಕರ ನೇಮಕವಾಗಿಲ್ಲ. ಲಾಡ್ಲಾಪುರ ಗ್ರಾಮದ ಸರಕಾರಿ ಪ್ರೌಢಶಾಲೆ ಹಲವು ವರ್ಷಗಳಿಂದ ಪ್ರಮುಖ ವಿಷಯಗಳ ಶಿಕ್ಷಕರಿಲ್ಲದೆ ನಡೆಯುತ್ತಿದೆ. ಹೀಗಾದರೆ ತಾಲೂಕಿನ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಬೆಳೆಯಲು ಸಾದ್ಯವೇ? ಈ ಕುರಿತು ಶಾಸಕರು ಮತ್ತು ಶಿಕ್ಷಣ ಇಲಾಖೆ ಗಂಭೀರವಾಗಿ ಚಿಂತಿಸಬೇಕು ಎಂದು ಒತ್ತಾಯಿಸಿದರು.
ತಾಲೂಕಿನ ಎಲ್ಲ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಅಗತ್ಯಕ್ಕೆ ತಕ್ಕಂತೆ ಕಾಯಂ ಶಿಕ್ಷಕರನ್ನು ನೇಮಿಸಬೇಕು. ಅನುದಾನಿತ ಹಾಗೂ ಅನುದಾನ ರಹಿತ ಖಾಸಗಿ ಪ್ರೌಢ ಶಾಲೆಗಳಲ್ಲೂ ಈ ಬಾರಿ ಎಸ್‌ಎಸ್‌ಎಲ್ಸಿ ಫಲಿತಾಂಶ ಕುಸಿದಿದೆ. ಈ ಭಾಗದ ಬಹುತೇಕ ಸರಕಾರಿ ಶಾಲೆಗಳು ಮಧ್ಯಾಹ್ನದ ವೇಳೆ ಖಾಲಿ ಹೊಡೆಯುತ್ತವೆ. ಶಿಕ್ಷಕರು ಶಾಲೆಗೆ ಚೆಕ್ಕರ್ ಹಾಕುವ ಚಾಳಿ ಬೆಳೆದಿದೆ. ಕೇವಲ ಸಂಬಳಕ್ಕಾಗಿ ಶಿಕ್ಷಕರು ಎನ್ನುವಂತ ವಾತಾವರಣ ಚಿತ್ತಾಪುರ, ನಾಲವಾರ ಹಾಗೂ ವಾಡಿ ವಲಯ ವ್ಯಾಪ್ತಿಯಲ್ಲಿ ಸೃಷ್ಟಿಯಾಗಿದೆ. ಸಂಬಂಧಿಸಿದವರು ಎಚ್ಚೆತ್ತುಕೊಳ್ಳದಿದ್ದರೆ ಎಐಡಿಎಸ್‌ಒ ಹೋರಾಟ ರೂಪಿಸಲಿದೆ ಎಂದು ಎಚ್ಚರಿಸಿದರು.
ಎಐಡಿಎಸ್‌ಒ ಕಾರ್ಯದರ್ಶಿ ಮಲ್ಲಿನಾಥ ಹುಂಡೇಕಲ್, ಮಲ್ಲಣ್ಣ ದಂಡಬಾ, ವೆಂಕಟೇಶ ದೇವದುರ್ಗ ಹಾಗೂ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.