ಮಡಿವಾಳಪ್ಪ ಹೇರೂರು
ವಾಡಿ: ಚಿತ್ತಾಪುರ ತಾಲೂಕಿನಲ್ಲಿ ಒಟ್ಟು 2500 ಕ್ವಿಂಟಲ್ ಶೇಂಗಾ ಬೀಜಗಳ ಬೇಡಿಕೆಯಿದ್ದು, ಬೀಜಗಳಿಲ್ಲದೆ ರೈತ ಸಂಪರ್ಕ ಕೇಂದ್ರಗಳು ಖಾಲಿ ಬಿದ್ದಿವೆ. ಶೇಂಗಾ ಬೆಳೆಯಲು ಫಲವತ್ತಾದ ಭೂಮಿ ಹೊಂದಿರುವ ನಾಲವಾರ ವ್ಯಾಪ್ತಿಯ ಜಮೀನುಗಳಲ್ಲಿ ಬೆಳೆ ಸಾಲು ಕಾಣದೆ ಭಣಗುಡುತ್ತಿವೆ.
ನಾಲವಾರ ಹೋಬಳಿ ಸೇರಿದಂತೆ ಚಿತ್ತಾಪುರ ತಾಲೂಕಿನಾದ್ಯಂತ ಈ ಬಾರಿ ಉತ್ತಮ ಮಳೆಯಾಗಿದೆ. ಕೃಷಿ ಭೂಮಿಗಳು ತೇವಾಂಶದಿಂದ ಕೂಡಿವೆ. ಬಿತ್ತನೆಗೆ ಪೂರಕ ವಾತಾವರಣ ಸೃಷ್ಠಿಯಾಗಿದೆ. ಹಿಂಗಾರು ಕೃಷಿ ಚಟುವಟಿಕೆ ಆರಂಭಿಸಲು ರೈತರು ಸಿದ್ಧತೆಯಲ್ಲಿದ್ದು, ಶೇಂಗಾ ಬೀಜಕ್ಕಾಗಿ ತಾಲೂಕಿನ ರೈತ ಸಂಪರ್ಕ ಕೇಂದ್ರಕ್ಕೆ ರೈತರು ನಿತ್ಯ ಅಲೆಯುತ್ತಿದ್ದಾರೆ. ಕೃಷಿ ಇಲಾಖೆ ಅಧಿಕಾರಿಗಳು ಮಾತ್ರ ರೈತರ ಸಮಸ್ಯೆ ಬಗೆಹರಿಸಲು ಮುಂದಾಗಿಲ್ಲ. ಈ ಭಾಗದ ಜನಪ್ರತಿನಿಧಿ ಗಳೂ ಕೂಡ ಸಕಲಾದಲ್ಲಿ ನಮ್ಮ ಬೇಡಿಕೆ ಈಡೇರಿಸುವಲ್ಲಿ ವಿಫಲರಾಗಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ನಿರಂತರವಾಗಿ ಮಳೆ ಬಂದಿದೆ. ರಸಗೊಬ್ಬರ ಖರೀದಿಸಲಾಗಿದೆ. ಭೂಮಿಯಲ್ಲಿ ತೇವಾಂಶ ಇದ್ದಾಗಲೇ ಬೀಜ ಹಾಕಬೇಕು. ಈಗಾಗಲೇ ಬೀಜ ಭೂಮಿಗೆ ಬಿದ್ದು ಮೊಳಕೆ ಕಾಣಬೇಕಿತ್ತು. ಸರಕಾರದ ನಿರ್ಲಕ್ಷ್ಯದಿಂದಾಗಿ ಇಂದಿಗೂ ಶೇಂಗಾ ಬೀಜ ಪೂರೈಕೆ ಮಾಡಿಲ್ಲ. ಹೀಗಾಗಿ ಹಿಂಗಾರು ಬಿತ್ತನೆಗೆ ಹಿನ್ನೆಡೆಯಾಗಿದೆ ಎಂದು ರೈತರಾದ ದಿನೇಶ ರಾಠೊಡ ಹಣ್ಣಿಕೇರಾ, ಹೀರಾಮನ್ ಪವಾರ, ದೇವಿಂದ್ರಪ್ಪ ಪೂಜಾರಿ, ಸುಭಾಷ ರಾಠೊಡ, ಶಿವುಕುಮಾರ ಕಳಸಾನೋರ, ಬಸವರಾಜ ಸಂಗನ, ಸಾಯಬಣ್ಣ ಗಡ್ಡಿಮನಿ, ಚೋಕ್ಲಾ ರಾಠೊಡ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರಿಯಾದ ಸಮಯಕ್ಕೆ ಬಿತ್ತನೆ ಬೀಜ, ಗೊಬ್ಬರ ಹಾಗೂ ಇನ್ನಿತರ ಕೃಷಿ ಸೌಲಭ್ಯ ಒದಗಿಸುವಲ್ಲಿ ಕೃಷಿ ಸಂಪರ್ಕ ಕೇಂದ್ರದ ಅಧಿಕಾರಿಗಳು ಬೇಜವಾಬ್ದಾರಿ ತೋರಿದ್ದಾರೆ.
ಶೇಂಗಾ ಬೀಜ ವಿತರಣೆ ಮಾಡದೆ ರೈತರ ಗೋಳಾಟಕ್ಕೆ ಕಾರಣವಾಗಿದ್ದಾರೆ. ವರ್ಷಧಾರೆ ಧರೆಗಿಳಿದು ಭೂಮಿ ಹಸಿಯಾಗಿಸಿದೆಯಾದರೂ ಸರಕಾರ ಮಾತ್ರ ರೈತರಿಗೆ ಬೀಜ ವಿತರಣೆಗೆ ಮುಂದಾಗಿಲ್ಲ. ಶೇಂಗಾ ಬೀಜ ಕೂಡಲೇ ವಿತರಿಸಲು ಮುಂದಾಗಬೇಕು. ನಿರ್ಲಕ್ಷ್ಯ ವಹಿಸಿದರೆ ಕೃಷಿ ಇಲಾಖೆ ವಿರುದ್ಧ ಹೋರಾಟ ಮಾಡಲಾಗುವುದು ಎಂದು ರೈತ ಕೃಷಿ ಕಾರ್ಮಿಕ ಸಂಘಟನೆ (ಆರ್ ಕೆಎಸ್) ತಾಲೂಕು ಕಾರ್ಯದರ್ಶಿ ಮಲ್ಲಣ್ಣ ದಂಡಬಾ ಎಚ್ಚರಿಕೆ ನೀಡಿದ್ದಾರೆ.