ವಾಡಿ: ಸೂರ್ಯನ ಉರಿತ ಹೆಚ್ಚಾಗಿದ್ದು, ಬಿಸಿಲು ಕೆಂಡ ಕಾರುತ್ತಿದೆ. ಅತ್ತ ಗಾಳಿಯೂ ಇಲ್ಲ, ಇತ್ತ ನೆರಳೂ ಇಲ್ಲ. ಎದೆಗೆ ಬೆಂಕಿ ಬಿದ್ದಂತಾಗಿದೆ. ಅಂತರ್ಜಲ ಬತ್ತಿಹೋಗಿದ್ದು, ನದಿಯೊಡಲು ಬಿರುಕುಬಿಟ್ಟಿದೆ. ಎಲ್ಲೆಡೆ ಕುಡಿಯುವ ನೀರಿಗೆ ಹಾಹಾಕಾರ ಭುಗಿಲೆದ್ದಿದೆ. ಮೇವಿಲ್ಲದೆ ಪರದಾಡುತ್ತಿರುವ ಜಾನುವಾರುಗಳ ಆರ್ಥನಾದ ಕೇಳಿಬರುತ್ತಿದೆ. ಜೀವಜಲ ಅಮೃತದಷ್ಟೇ ತುಟ್ಟಿಯಾಗಿದೆ.
ಚಿತ್ತಾಪುರ ತಾಲೂಕಿನ ಜನತೆಗೆ ಜಲಮೂಲಗಳಾದ ಕಾಗಿಣಾ ಮತ್ತು ಭೀಮಾ ನದಿಗಳಲ್ಲಿ ಹುಡುಕಿದರೂ ಹನಿ ನೀರು ಸಿಗುತ್ತಿಲ್ಲ. ಜಿಲ್ಲಾಧಿಕಾರಿ ಎನ್. ವೆಂಕಟೇಶಕುಮಾರ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಆದೇಶದಂತೆ ಮಾರ್ಚ್ ಮತ್ತು ಮೇ ತಿಂಗಳಿಗಾಗುವಷ್ಟು ಬಿಡಲಾಗಿದ್ದ ಬೆಣ್ಣೆತೋರಾ ಜಲಾಶಯದ 0.0254 ಟಿಎಂಸಿ ಅಡಿ ನೀರು ಒಂದೇ ತಿಂಗಳಲ್ಲಿ ಖಾಲಿಯಾಗಿದೆ. ನದಿಪಾತ್ರದಲ್ಲಿ ಅಳವಡಿಸಲಾದ ಜಾಕ್‌ವೆಲ್ ಯಂತ್ರಗಳು ಸ್ತಬ್ದಗೊಂಡಿವೆ. ಎಲ್ಲೆಡೆ ಖಾಲಿ ಕೊಡಗಳ ಕದನವೇ ಶುರುವಾಗಿದೆ.
ಸಿಮೆಂಟ್ ನಗರಿ ವಾಡಿ ಪುರಸಭೆ ವ್ಯಾಪ್ತಿಯ ವಿವಿಧ ಬಡಾವಣೆಗಳಿಗೆ ನಾಲ್ಕು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ ಇನ್ಮುಂದೆ ನಳಗಳಲ್ಲಿ ನೀರು ಹರಿಯುವುದಿಲ್ಲ ಎನ್ನುತ್ತಿದ್ದಾರೆ ಪುರಸಭೆ ನೀರು ಸರಬರಾಜು ಸಿಬ್ಬಂದಿ. ನದಿಯಲ್ಲಿ ನೀರೇ ಖಾಲಿಯಾಗಿರುವಾಗ ನಾವೇನು ಮಾಡೋಣ ಹೇಳಿ ಎನ್ನುತ್ತಿದ್ದಾರೆ ಅಧಿಕಾರಿಗಳು. ನೀರಿಗಾಗಿ ಪರದಾಟ ಆರಂಭವಾಗಿದ್ದು, ಜನರ ಎದೆಯಲ್ಲಿ ಆಕ್ರೋಶ ಮಡುಗಟ್ಟಿದೆ. ಬೋರ್‌ವೆಲ್ ಹೊಂದಿದ ಖಾಸಗಿ ವ್ಯಕ್ತಿಗಳ ಮನೆಗಳಿಗೆ ಹೋಗುವ ಮೂಲಕ ಸ್ಲಂ ಜನ ನೀರಿಗಾಗಿ ಭಿಕ್ಷೆ ಬೇಡಬೇಕಾದಂತಹ ಕೆಟ್ಟ ಗಳಿಗೆ ಎದುರಾಗಿದೆ. ಅಡವಿಯಲ್ಲಿ ಮೇವು, ನೀರು ಸಿಗದೆ ಜಾನುವಾರುಗಳು ಜಟಿಲ ಸಮಸ್ಯೆಗೆ ಸಿಲುಕಿವೆ.
ನೀರಿನ ಅನುದಾನ ದುರ್ಬಳಕೆ: ಹೊಸ ಬೋರ್‌ವೆಲ್ಗಳನ್ನು ಕೊರೆದು ಜಲಮೂಲ ಸೃಷ್ಟಿಸಬೇಕಿದ್ದ ಪುರಸಭೆ ಆಡಳಿತ ಒಂದೂ ಬೋರ್‌ವೆಲ್ ಕೊರೆಸಿಲ್ಲ. ಹತ್ತಾರು ಬಾವಿಗಳಿದ್ದು, ಒಂದೇವೊಂದು ಬಾವಿ ಹೂಳೆತ್ತಿಲ್ಲ. ಎಸಿಸಿ ಸಿಮೆಂಟ್ ಕಂಪನಿಯಿಂದ ಪುರಸಭೆಯ ನೀರು ಶುದ್ಧೀಕರಣ ಘಟಕಕ್ಕೆ ಪೈಪ್‌ಲೈನ್ ಸಂಪರ್ಕ ಯೋಜನೆ ಅಧಿಕಾರಿಗಳ ಮತ್ತು ಚುನಾಯಿತ ಸದಸ್ಯರ ನಿರ್ಲಕ್ಷ್ಯದಿಂದ ನನೆಗುದಿಗೆ ಬಿದ್ದಿದೆ. ಇತ್ತ ಟ್ಯಾಂಕರ್ ನೀರು ಸರಬರಾಜಿಗೂ ಮುಂದಾಗಿಲ್ಲ. ಹಾಗಾದರೆ ಅಧಿಕಾರಿಗಳು ಮಾಡಿದ್ದೇನು? ನೀರಿಗಾಗಿ ಬಿಡುಗಡೆಯಾದ ವಿಶೇಷ ಅನುದಾನ ಖರ್ಚಾಗಿದ್ದೆಲ್ಲಿ? ಎನ್ನುವ ಸಾರ್ವಜನಿಕರ ಪ್ರಶ್ನೆಗೆ ಉತ್ತರವಿಲ್ಲ. ಹೀಗಾಗಿ ಪುರಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನುವ ಅನುಮಾನ ವ್ಯಕ್ತವಾಗಿದೆ. ಬರ ನಿರ್ವಹಣೆ ಮಾಡುವಲ್ಲಿ ಅಧಿಕಾರಿಗಳು ಎಡವಿದ್ದು, ಜನರು ನಿತ್ಯ ನೀರಿಗಾಗಿ ಗೋಳಾಡುವಂತಾಗಿದೆ. ಬಡಾವಣೆಗಳಿಗೆ ಟ್ಯಾಂಕರ್ ನೀರಿನ ವ್ಯವಸ್ಥೆ ಮಾಡದಿದ್ದರೆ ಪರಿಸ್ಥಿತಿ ಬಿಗಡಾಯಿಸುವ ಲಕ್ಷಣಗಳು ಗೋಚರಿಸುತ್ತಿವೆ.
ಮಡಿವಾಳಪ್ಪ ಹೇರೂರ