ವಾಡಿ: ಪಟ್ಟಣದಲ್ಲಿ ಮತ್ತೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಜನರು ಖಾಲಿ ಕೊಡಗಳನ್ನು ಹೊತ್ತುಕೊಂಡು ದೂರದ ಸ್ಥಳಗಳಿಗೆ ಹೋದರೂ ನೀರಿನ ಮೂಲಗಳು ಪತ್ತೆಯಾಗದೆ ಪರದಾಡುವಂತಾಗಿದೆ.
ಪಟ್ಟಣದ ಪುರಸಭೆಗೆ ಸೇರಿದ ಜಾಕ್‌ವೆಲ್ ಸಮೀಪದ ಕುಂದನೂರು ಭೀಮಾ ನದಿಯಲ್ಲಿದೆ. ಭೀಮಾ ನದಿ ನೀರಿನಿಂದ ಮುಕ್ತವಾಗಿ ಐದಾರು ತಿಂಗಳುಗಳೇ ಕಳೆದಿವೆ. ಬೆಣ್ಣೆತೋರಾ ಜಲಾಶಯದ ನೀರು ಕಾಗಿಣಾ ನದಿ ಮೂಲಕ ಹರಿದು ಕುಂದನೂರಿನ ಸಂಗಮಕ್ಕೆ ಕೂಡಿ ಭೀಮೆ ಮೂಲಕ ಜಾಕ್‌ವೆಲ್ ಸೇರುತ್ತದೆ. ಸದ್ಯ ಭೀಮೆ ಮತ್ತು ಕಾಗಿಣಾ ಎರಡರಲ್ಲೂ ನೀರಿಲ್ಲ. ಎದುರಾದ ಜಲಕ್ಷಾಮದಿಂದ ಜಲಚರಗಳು ಜೀವ ಕಳೆದುಕೊಂಡರೆ, ಜನಜೀವನ ಸಂಕಟದಿಂದ ಕೂಡಿದೆ.
ಪಟ್ಟಣದಲ್ಲಿ ಪದೇಪದೇ ನೀರಿನ ಸಮಸ್ಯೆ ಉಂಟಾಗುತ್ತಿದ್ದರೂ ಪುರಸಭೆ ಆಡಳಿತ ಸದಸ್ಯರು ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಪರಿಣಾಮ ಸ್ಥಳೀಯರು ಖಾಲಿ ಕೊಡಗಳನ್ನು ಹಿಡಿದು ಅಲೆಯುವ ಪ್ರಸಂಗಗಳಿಗೆ ಕಡಿವಾಣ ಬೀಳುತ್ತಿಲ್ಲ. ಬೋರ್‌ವೆಲ್ಗಳ ನೀರು ಬಳಕೆಗೆ ಮಾತ್ರ ಸೀಮಿತವಾಗಿದ್ದು ಕುಡಿಯಲು ಯೋಗ್ಯವಿಲ್ಲ. ಬಾವಿಗಳು ಹೂಳು ತುಂಬಿ ನೀರಿಲ್ಲದಂತಾಗಿವೆ. ನಳಗಳಿಂದ ನೀರು ಸರಬರಾಜು ಸ್ಥಗಿತಗೊಂಡಿದ್ದರಿಂದ ಮಳೆಗಾಲದ ಆರಂಭದಲ್ಲೂ ಕುಡಿಯುವ ನೀರಿನ ಹಾಹಾಕಾರ ಸೃಷ್ಟಿಯಾಗಿದೆ.
ಎಸಿಸಿ ಸಿಮೆಂಟ್ ಕಂಪನಿಗೆ ಸೇರಿದ ಕಾರ್ಮಿಕರ ಕಾಲೋನಿ ಹಾಗೂ ರೈಲು ನಿಲಾಣ್ದಗಳಿಗೆ ಹೋಗಿ ನೀರು ತರಬೇಕಾದ ದುಸ್ಥಿತಿ ಈ ಭಾಗದಲ್ಲಿ ನಿರ್ಮಾಣವಾಗಿದೆ. ಪ್ಲಾಟ್ಫಾರ್ಮ್ ಮೇಲಿನ ಪ್ರಯಾಣಿಕರ ಅನುಕೂಲಕ್ಕಿರುವ ನಳಗಳಿಗೆ ಮಹಿಳೆಯರು ಕೊಡ ಹಿಡಿದು ಕುಡಿಯುವ ನೀರು ಹಿಡಿಯುತ್ತಿದ್ದಾರೆ. ಅಪಾಯಕಾರಿ ರೈಲು ಹಳಿಗಳನ್ನು ದಾಟಿ ನಿಲ್ದಾಣ ಸೇರಬೇಕು. ಮಧ್ಯದಲ್ಲಿ ರೈಲುಗಳು ಬಂದು ನಿಂತರೆ ರೈಲಿನ ಕೆಳಗೋ ಅಥವಾ ಬೋಗಿಯ ಒಳಗೋ ನುಗ್ಗಿ ನಳಗಳಿಗೆ ಲಗ್ಗೆಯಿಡುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ. ರೈಲ್ವೆ ಅಧಿಕಾರಿಗಳು ಮತ್ತು ಆರ್‌ಪಿಎಫ್ ಸಿಬ್ಬಂದಿಗಳ ಕೆಂಗಣ್ಣಿಗೆ ಗುರಿಯಾಗಿ ಸ್ಥಳೀಯರು ಅವಮಾನಕ್ಕೆ ಈಡಾಗುತ್ತಿದ್ದಾರೆ. ಜನರು ಕಳೆದ ಐದಾರು ದಿನಗಳಿಂದ ಖಾಲಿ ಕೊಡ ಹಿಡಿದು ನೀರಿಗಾಗಿ ಪರದಾಡುತ್ತಿದ್ದರೂ ಪುರಸಭೆ ಅಧಿಕಾರಿಗಳು ಮತ್ತು ಚುನಾಯಿತ ಸದಸ್ಯರು ಮೌನ ವಹಿಸಿರುವುದು ಜನರ ಆಕ್ರೋಶಕ್ಕೆ ಗುರಿಯಾಗಿದೆ.