Advertisement

ಗ್ರಾಮಸ್ಥರಿಂದ ರಿಂಗ್‌ಬಾಂಡ್‌ ಧ್ವಂಸ

09:58 AM May 12, 2019 | Naveen |

ವಾಡಿ: ಚಿತ್ತಾಪುರ ವಿಧಾನಸಭೆ ಮೀಸಲು ಮತಕ್ಷೇತ್ರ ಸಿಮೆಂಟ್ ನಗರಿ ವಾಡಿ ಪಟ್ಟಣದ ಜನರ ನೀರಿನ ದಾಹ ನೀಗಿಸಲು ಬೆಣ್ಣೆತೋರಾ ಜಲಾಶಯದಿಂದ ಬಿಡಿಸಲಾಗಿದ್ದ 0.025 ಟಿಎಂಸಿ ಅಡಿ ನೀರು, ಹತ್ತು ದಿನಗಳ ನಂತರ ಕುಂದನೂರು ಭೀಮಾ ನದಿಗೆ ಬಂದು ತಲುಪಿದ್ದು, ಪಕ್ಕದ ನರಿಬೋಳ ಗ್ರಾಮಸ್ಥರ ಆಕ್ರೋಶಕ್ಕೆ ತುತ್ತಾಗಿ ನದಿಯೊಳಗಿನ ತಡೆಗೋಡೆ ರಿಂಗ್‌ಬಾಂಡ್‌ ಧ್ವಂಸಗೊಂಡಿದೆ. ಹೀಗಾಗಿ ಕೈಗೆ ಬಂದ ಬೊಗಸೆ ನೀರು ಬಾಯಿಗೆ ಬಾರದಂತಾಗಿ ಜಲ ಕದನ ಮುಂದುವರಿದಿದೆ.

Advertisement

ಕುಡಿಯುವ ನೀರಿಗಾಗಿ ತತ್ತರಿಸಿ ಹೋಗಿರುವ ನಾಲವಾರ, ರಾವೂರ, ಸನ್ನತಿ ಹಾಗೂ ವಾಡಿ ವಲಯ ವ್ಯಾಪ್ತಿಯ 30ಕ್ಕೂ ಹೆಚ್ಚು ಗ್ರಾಮಗಳ ಜನರು, ಬತ್ತಿದ ನದಿ ನೋಡಿ ಬಿಕ್ಕುವಂತಾಗಿದೆ. ಭೀಮಾ ಮತ್ತು ಕಾಗಿಣಾ ನದಿ ಪಾತ್ರಗಳು ನೀರಿಲ್ಲದೆ ಒಣಗಿವೆ. ವಾಡಿ ಪುರಸಭೆ ಆಡಳಿತದ ಮನವಿ, ಕ್ಷೇತ್ರದ ಶಾಸಕ, ಸಚಿವ ಪ್ರಿಯಾಂಕ್‌ ಖರ್ಗೆ ಆದೇಶದ ಮೇರೆಗೆ ಮಾರ್ಚ್‌ ಕೊನೆ ವಾರದಲ್ಲಿ ಬೆಣ್ಣೆತೋರಾ ಜಲಾಶಯದಿಂದ ಹರಿಬಿಡಲಾಗಿದ್ದ 0.025 ಟಿಎಂಸಿ ಅಡಿ ನೀರು ಮೇ ಮೊದಲ ವಾರಕ್ಕೆ ಖಾಲಿಯಾಯಿತು. ಈಗ ಮತ್ತೆ ಬೆಣ್ಣೆತೋರಾ ಜಲಾಶಯದಿಂದ 0.025 ಟಿಎಂಸಿ ಅಡಿ ನೀರು ಬಿಡಿಸಲಾಗಿದ್ದು, ಮೇ ಮತ್ತು ಜೂನ್‌ ತಿಂಗಳವರೆಗೆ ನೀರು ಸಿಕ್ಕಿತಲ್ಲ ಎಂದು ಜನರು ನಿಟ್ಟುಸಿರು ಬಿಡುವಾಗಲೇ ಜೀವ ಜಲ ಜಾಕ್‌ವೆಲ್ನಿಂದ ದೂರ ಹರಿದು ಹೋಗಿ ಅಧಿಕಾರಿಗಳು ಕೈಕೈ ಹಿಸುಕಿಕೊಳ್ಳುವಂತಾಗಿದೆ.

ಕುಂದನೂರ ಭೀಮಾ ನದಿಯಿಂದ ಸುಮಾರು 66 ಕಿಮೀ ದೂರದಲ್ಲಿರುವ ಬೆಣ್ಣೆತೋರಾ ಜಲಾಶಯದ ನೀರು, ಕಾಗಿಣಾ ನದಿ ಮೂಲಕ ನಿಧಾನವಾಗಿ ಹರಿದುಬಂದು ಕುಂದನೂರ ಸಂಗಮ ಸಮೀಪ ಭೀಮಾ ನದಿ ಸೇರಿಕೊಂಡಿದೆ. ಬಕಾಸುರನಂತ ಭೀಮಾ ನದಿಯಲ್ಲಿ ಕಾವಲಿ ನಿರ್ಮಿಸಿ ಜಾಕ್‌ವೆಲ್ವರೆಗೆ ನೀರು ತರಲು ವಾಡಿ ಪುರಸಭೆ ಅಧಿಕಾರಿಗಳು ಹರಸಾಹಸವನ್ನೇ ಮಾಡಿದ್ದಾರೆ. ವಾಡಿ ಜನರಿಗಾಗಿ ನೀರು ಹಿಡಿದಿಡಲು ನದಿಯಲ್ಲಿ ಮೂರು ಅಡಿ ರಿಂಗ್‌ಬಾಂಡ್‌ (ಉಸುಕಿನ ಚೀಲದ ತಡೆಗೋಡೆ) ನಿರ್ಮಿಸಲಾಗಿತ್ತು. ವಿಷಯ ತಿಳಿದು ಗುರುವಾರ ರಾತ್ರಿ ನದಿಯತ್ತ ದೌಡಾಯಿಸಿದ ನದಿಯಾಚೆಗಿನ ಜೇವರ್ಗಿ ತಾಲೂಕಿನ ನರಿಬೋಳಿ ಗ್ರಾಮಸ್ಥರು, ರಿಂಗ್‌ಬಾಂಡ್‌ ಧ್ವಂಸಗೊಳಿಸಿ ಸಂಗ್ರಹವಾಗಿದ್ದ ಜಲವನ್ನೆಲ್ಲ ತಮ್ಮೂರಿನತ್ತ ಸಾಗಿಸಿಕೊಂಡಿದ್ದಾರೆ. ಉರುಳಿದ ರಿಂಗ್‌ಬಾಂಡ್‌, ಪೋಲಾದ ಅಪಾರ ಜಲವನ್ನು ಕಂಡು ಅಧಿಕಾರಿಗಳು ಮಮ್ಮಲ ಮರುಗಿದ್ದಾರೆ.

ನರಿಬೋಳಿ ಗ್ರಾಮಸ್ಥರ ದುಷ್ಕೃತ್ಯದ ವಿರುದ್ಧ ಸ್ಥಳೀಯ ಠಾಣೆಗೆ ದೂರು ನೀಡಲಾಗಿದೆ. ಪೊಲೀಸರು ಶುಕ್ರವಾರ ಸಂಜೆ ನದಿಗೆ ಭೇಟಿ ನೀಡಿ ಪರಸ್ಥಿತಿ ಅವಲೋಕಿಸಿದ್ದಾರೆ. ಎರಡು ತಿಂಗಳಿಗಾಗುವಷ್ಟು ಶೇಖರಣೆಯಾಗಿದ್ದ ನೀರು ಈಗ ಕೇವಲ 20 ದಿನಕ್ಕೆ ಮಾತ್ರ ಲಭ್ಯವಾಗಲಿದೆ. ಭೀಮಾ ಮತ್ತು ಕಾಗಿಣಾ ನದಿ ಎರಡರಲ್ಲೂ ಜಾಕ್‌ವೆಲ್ ನಿರ್ಮಿಸಿ ಶಾಶ್ವತ ನೀರಿನ ಪರಿಹಾರ ಕಂಡುಕೊಳ್ಳಬೇಕಾದ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯ ದೋರಣೆಗೆ ಸಿಕ್ಕು ಜನತೆ ಪರದಾಡಬೇಕಾದ ದುಸ್ಥಿತಿ ಜೀವಂತವಾಗಿ ಉಳಿದಿದೆ.

ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿದ ಪರಿಣಾಮ ಬೆಣ್ಣೆತೋರಾದ 0.025 ಟಿಎಂಸಿ ನೀರು ಬಿಡಲಾಗಿದೆ. ಕಾನೂನು ಬದ್ಧವಾಗಿ ನದಿಯಲ್ಲಿ ರಿಂಗ್‌ಬಾಂಡ್‌ ನಿರ್ಮಿಸಿ ಆ ನೀರನ್ನು ನಾವು ತಡೆಹಿಡಿದಿದ್ದೆವು. ಆದರೆ ನರಿಬೋಳ ಗ್ರಾಮಸ್ಥರು ರಾತ್ರಿ ವೇಳೆ ಬಂದು ಒಡೆದು ಹಾಕಿದ್ದಾರೆ. ಈ ಕುರಿತು ಪೊಲೀಸರಿಗೆ ದೂರು ಕೊಟ್ಟಿದ್ದೇವೆ. ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೂ ವಿಷಯ ತಿಳಿಸಿದ್ದೇವೆ. ಸದ್ಯ 20 ದಿನಕ್ಕಾಗುವಷ್ಟು ನೀರು ನದಿಯಲ್ಲಿ ಉಳಿದಿದೆ. ಬೇಸಿಗೆ ಕಾಲದಲ್ಲಿ ನೀರು ಎಲ್ಲರಿಗೂ ಬೇಕು. ನರಿಬೋಳ ಗ್ರಾಮಸ್ಥರೂ ನೀರಿಗಾಗಿ ಜಿಲ್ಲಾಧಿಕಾರಿಗೆ ಬೇಡಿಕೆಯಿಟ್ಟರೆ ಇನ್ನಷ್ಟು ನೀರು ಬಿಡುತ್ತಾರೆ. ಆ ಕೆಲಸ ಮಾಡದೆ ನಮ್ಮ ನೀರನ್ನು ಅಕ್ರಮವಾಗಿ ಪಡೆಯುವ ದುಸ್ಸಾಹಸ ಮಾಡಿದ್ದಾರೆ. ಪ್ರತಿ ವರ್ಷ ನರಿಬೋಳಿ ಗ್ರಾಮಸ್ಥರಿಂದ ಈ ಘಟನೆ ಮರುಕಳಿಸುತ್ತಿದೆ.
ಅಶೋಕ ಪುಟ್ಫಾಕ್‌,
ಕಿರಿಯ ಅಭಿಯಂತರ, ವಾಡಿ ಪುರಸಭೆ

Advertisement
Advertisement

Udayavani is now on Telegram. Click here to join our channel and stay updated with the latest news.

Next