ವಾಡಿ: ಕಳೆದ ಒಂದು ವಾರದಿಂದ ತುಸು ಉತ್ತಮವಾಗಿಯೇ ಮಳೆಯಾಗಿದ್ದು, ತಾಲೂಕಿನ ರೈತರಲ್ಲಿ ಸಂತಸ ಹೆಚ್ಚಿಸಿದೆ. ಮಿರಗಾ (ಮೃಗಶಿರಾ) ಅಬ್ಬರಿಸಿದ ಕಾರಣಕ್ಕೆ ಭೂಮಿ ತೇವಾಂಶಗೊಂಡಿದ್ದು, ಕೃಷಿ ಚಟುವಟಿಕೆ ಆರಂಭಿಸುವ ಖುಷಿಯಲ್ಲಿ ರೈತರು ಮುರ್ಗಾ (ಹುಂಜ-ಕೋಳಿ) ಖರೀದಿಯಲ್ಲಿ ತೊಡಗಿದ್ದಾರೆ.
ವರ್ಷಧಾರೆಯಾಗಿ ಸುರಿದ ಮೃಗಶಿರಾ ಮಳೆಯಿಂದ ರೈತರು ಸಂತಗೊಂಡಿದ್ದಾರೆ. ಇದೇ ಜಾನಪದ ಸಂಪ್ರದಾಯದಲ್ಲಿ ‘ಮಿರಗಾ’ ಎಂದು ಕರೆಯಿಸಿಕೊಳ್ಳುತ್ತದೆ. ಜೂನ್ 7ಕ್ಕೆ ಹೂಡುವ ಮಳೆ ರೈತರ ಬದುಕಿನಲ್ಲಿ ಅತ್ಯಂತ ಮಹತ್ವ ಪಡೆದುಕೊಳ್ಳುತ್ತದೆ. ವಾಡಿಕೆಯಂತೆ ಗುರುವಾರ ರಾತ್ರಿ ಮತ್ತು ಶುಕ್ರವಾರ ಬೆಳಗ್ಗೆ ಪಟ್ಟಣ ವ್ಯಾಪ್ತಿಯಲ್ಲಿ ಕಾರ್ಮೋಡಗಳ ಮಧ್ಯೆ ಸುರಿದ ವರ್ಷಧಾರೆ ಜನರಲ್ಲಿ ಹರ್ಷ ಮೂಡಿಸಿತು. ತುಂತುರು-ಜಿಟಿಜಿಟಿ ಹಾಗೂ ಧಾರಾಕಾರ ಮಳೆಯಿಂದ ಭೂರಮೆ ಹಸಿಯಾಗಿದ್ದು, ಉಳುಮೆಗೆ ಹಸಿರು ನಿಶಾನೆ ತೋರಿಸಿದೆ.
ಸರಿಯಾದ ಸಮಯಕ್ಕೆ ಈ ವರ್ಷ ಮುಂಗಾರು ಶುರುವಾಗಿದೆ. ಒಣಗಿನಿಂತಿದ್ದ ಭೂಮಿ ಹಸಿಯಾಗಿ ಹದವಾಗಿದೆ. ಮಲೆನಾಡ ವಾತಾವರಣ ಸೃಷ್ಟಿಸಿದೆ. ಇದೇ ರೀತಿ ಮಳೆ ಮಂದುವರಿದರೆ ಬಂಪರ್ ಇಳುವರಿ ನಮ್ಮ ಬದುಕು ಉಳಿಸಲಿದೆ. ಮಿರಗಾ ಶುಭಾರಂಭ ಹೂಡಿದ್ದರಿಂದ ಜನಪದರ ವಾಡಿಕೆಯಂತೆ ಬಿಸಿಲು ಕಡಿಮೆಯಾಗಿ ತಂಪು ಮೂಡಿದೆ. ಬರಗಾಲದ ದಿನಗಳ ಮಧ್ಯೆ ಗಂಜಿಗಾಗಿ ಕೈಯೊಡ್ಡುವ ಪ್ರಸಂಗ ಎದುರಾಗುವ ದುಸ್ಥಿತಿ ನೆನೆದು ದಂಗಾಗಿದ್ದ ಅನ್ನದಾತರ ಮೊಗದಲ್ಲಿ ಮಿರಗಾ ಮಳೆ ಜೀವಕಳೆ ತಂದಿದೆ.
ಮುರ್ಗಾ ಖರೀದಿ ಜೋರು: ಮಿರಗಾ ಮಳೆ ಅತ್ತ ನೆಲ ಹಸಿ ಮಾಡುತ್ತಿದ್ದಂತೆ ಇತ್ತ ಸ್ಥಳೀಯರು ಮುರ್ಗಾ (ಹುಂಜ) ಖರೀದಿ ಮಾಡಲು ಮುಂದಾಗಿದ್ದಾರೆ. ಶುಕ್ರವಾರ ಬೆಳ್ಳಂಬೆಳಗ್ಗೆ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರ ಗುಂಪು ಸೇರಿತ್ತು. ಹತ್ತಿರ ಹೋಗಿ ನೋಡಿದರೆ ಅಲ್ಲಿ ಹುಂಜ ಖರೀದಿ ನಡೆದಿತ್ತು. ನನಗೊಂದು, ನಿನಗೊಂದು ಎಂಬಂತೆ ಜನ ಮುಗಿಬಿದ್ದು ಖರೀದಿಸುತ್ತಿದ್ದರು. ಹುಂಜಕ್ಕೆ 600 ರೂ., ಕೋಳಿಗೆ 400 ರೂ. ದುಬಾರಿ ದರವಿದ್ದರೂ ಖರೀದಿಸುವವರು ಮಾತ್ರ ಚೌಕಾಸಿಗಿಳಿಯದೆ ಜವಾರಿ ಹುಂಜಗಳನ್ನು ಕೈಚೀಲಕ್ಕೆ ತುರುಕುತ್ತಿದ್ದರು. ಮಾಂಸಹಾರ ಸೇವನೆ ಮಾಡುವ ಬಹುತೇಕ ಕುಟುಂಬಗಳಲ್ಲಿ ಈ ಮಿರಗಾ ದಿನ ಮಟನ್, ಚಿಕನ್, ಮೀನು ಹಾಗೂ ಮೊಟ್ಟೆ ಅಡುಗೆ ತಯಾರಾಗುವುದು ಸಾಮಾನ್ಯ ಸಂಪ್ರದಾಯವಾಗಿದೆ. ಅದು ಇಂದಿಗೂ ಮುಂದುವರಿದಿದೆ.