ವಾಡಿ: ಕೈಕೊಟ್ಟ ಮುಂಗಾರು ಮಳೆಯಿಂದ ಚಿಂತೆಗೀಡಾಗಿರುವ ಚಿತ್ತಾಪುರ ತಾಲೂಕಿನ ರೈತರು, ವರ್ಷಧಾರೆಗಾಗಿ ಪ್ರಾರ್ಥಿಸಿ ಕಪ್ಪೆಗಳ ಮದುವೆ, ಕತ್ತೆಗಳ ಮೆರವಣಿಗೆ, ಪ್ರಾಣಿ ಬಲಿ, ಪೂಜೆ-ಪುನಸ್ಕಾರ ಹೀಗೆ ವಿವಿಧ ಸಾಂಪ್ರದಾಯಿಕ ಆಚರಣೆಗಳ ಮೊರೆ ಹೋಗುತ್ತಿದ್ದಾರೆ.
ಹೀಗೆ ಧರೆಯ ತಂಪಿಗಾಗಿ ಪ್ರಾರ್ಥಿಸಿ ಗ್ರಾಮಸ್ಥರೊಂದಿಗೆ ಸ್ಥಳೀಯ ಒಂಭತ್ತು ಪುಣ್ಯ ಕ್ಷೇತ್ರಗಳಿಗೆ ತೆರಳಿ ದೀರ್ಘದಂಡ ನಮಸ್ಕಾರ ಹಾಕಲು ಮುಂದಾಗಿರುವ ರಾಜವಾಳ ಗ್ರಾಮದ ರೈತ ರುದ್ರಗೌಡ ಪಾಟೀಲ ದೇವರ ಮೊರೆ ಹೋಗಿದ್ದಾರೆ.
ಕಡಬೂರ ಭೀಮಾನದಿ ಆಚೆಗಿನ ರಾಜವಾಳ ಗ್ರಾಮದಿಂದ ಶನಿವಾರ ದೀರ್ಘದಂಡ ನಮಸ್ಕಾರ ಹಾಕಲು ಆರಂಭಿಸಿರುವ ರುದ್ರಗೌಡ ಪಾಟೀಲ, ಜಿಲ್ಲೆಯ ರೈತರ ಹಾಗೂ ಜಿಲ್ಲಾಡಳಿತದ ಗಮನ ಸೆಳೆದಿದ್ದಾರೆ.
ಕಡಬೂರ ಗ್ರಾಮದ ಶ್ರೀ ಸಂಗಮನಾಥ, ಬಳವಡಗಿ ಶ್ರೀ ಏಲಾಂಬಿಕೆ ದೇವಿ ದೇಗುಲ, ಕೊಂಚೂರಿನ ಶ್ರೀ ಹನುಮಾನ ದೇವಸ್ಥಾನ, ಹಳಕರ್ಟಿಯ ಶ್ರೀ ವೀರಭದ್ರೇಶ್ವರ, ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನ, ಲಾಡ್ಲಾಪುರದ ಶ್ರೀ ಹಾಜಿ ಸರ್ವರ್ ದೇವಸ್ಥಾನ, ಶ್ರೀ ಕೋರಿಸಿದ್ಧೇಶ್ವರ ತಪೋವನ ಸ್ಥಳ, ಅಳ್ಳೊಳ್ಳಿಯ ಶ್ರೀ ಅಯ್ಯಪಯ್ಯ ದೇವಸ್ಥಾನ ಹಾಗೂ ದಂಡಗುಂಡ ಶ್ರೀ ಬಸವೇಶ್ವರ ದೇವಸ್ಥಾನ ಒಟ್ಟು ಒಂಭತ್ತು ಪುಣ್ಯಕ್ಷೇತ್ರಗಳಿಗೆ ದೀರ್ಘದಂಡ ನಮಸ್ಕಾರದ ಹರಕೆ ಸಲ್ಲಿಕೆಯಾಗಲಿದೆ. ಅಂತಿಮವಾಗಿ ದಂಡಗುಂಡ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಕರ್ತೃ ಗದ್ದುಗೆಗೆ ವಿಶೇಷ ಪೂಜೆಗಳನ್ನು ನೆರವೇರಿಸುವ ಮೂಲಕ ಮಳೆಗಾಗಿ ಸಲ್ಲಿಸಲಾದ ಭಕ್ತಿ ಹರಕೆ ಕೊನೆಗೊಳ್ಳಲಿದೆ ಎಂದು ರೈತ ಶರಣಬಸಪ್ಪ ಪಸಾರ ತಿಳಿಸಿದ್ದಾರೆ.
ದೀರ್ಘದಂಡ ನಮಸ್ಕಾರ ಯಾತ್ರೆ ರವಿವಾರ ಬೆಳಗ್ಗೆ ಬಳವಡಗಿ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಶಾಸಕ, ಬಿಜೆಪಿ ಮುಖಂಡ ವಾಲ್ಮೀಕಿ ನಾಯಕ, ರೈತ ರುದ್ರಗೌಡ ಪಾಟೀಲ ಅವರನ್ನು ಸನ್ಮಾನಿಸಿ ಬೀಳ್ಕೊಟ್ಟ ಪ್ರಸಂಗ ನಡೆಯಿತು.
ಮುಖಂಡರಾದ ಶರಣರೆಡ್ಡಿ ಪಾಟೀಲ, ನಾಗಣ್ಣಗೌಡ ಪಾಟೀಲ, ಶರಣಬಸಪ್ಪ ಎಸ್.ಪಸಾರ, ಈಶಪ್ಪ, ರುದ್ರಣ್ಣ ರಾವೂರ, ಕಾಶಿರಾಮ ಶಟಗಾರ, ದೇವಪ್ಪ, ಮಾಳಪ್ಪ ನರಿಬೋಳಿ, ದೀಪಲಾ ಚವ್ಹಾಣ ಹಾಗೂ ರಾಜವಾಳ, ಕಡಬೂರ ಗ್ರಾಮದ ಮಹಿಳೆಯರು ಪಾಲ್ಗೊಂಡಿದ್ದರು.